ಕುರುಗೋಡು: ಸಮೀಪದ ಮಣ್ಣೂರು ಗ್ರಾಮದ ಹಳೆ ಊರು ಮಾರೆಮ್ಮ ದೇವಿಗೆ ಶ್ರವಣ ಮಾಸದ ಅಂಗವಾಗಿ ವಿಶೇಷ ಪೂಜೆ ಜರುಗಿತು. ಈ ಸಂದರ್ಭದಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಹರಕೆ ಸೇವೆ ಸಲ್ಲಿಸಿದರು.
ನಸುಕಿನ ಜಾವ ಭಕ್ತಾದಿಗಳು ಭಜನೆ ಮೂಲಕ ಗ್ರಾಮದಿಂದ ನದಿಗೆ ತೆರಳಿ ಗಂಗೆ ಬಿಂದಿಗೆ ಕಾರ್ಯ ನೆರೆವೇರಿಸಿದರು. ಶ್ರೀ ಮಾರೆಮ್ಮ ದೇವಿ ಮೂರ್ತಿಗೆ ಅರಿಶಣ, ಕುಂಕುಮಾರ್ಚನೆ, ವೀಳ್ಯದೆಲೆ, ಹಸಿರುಬಳೆ, ಮಡಿಸೀರೆ ಹಾಗೂ ಪುಷ್ಪ, ಅಲಂಕಾರ ಪೂಜಾರಿ ಲಕ್ಷ್ಮಣ ನೇತೃತ್ವದಲ್ಲಿ ಜರುಗಿದವು.
ಗ್ರಾಮದ ಮುಖಂಡರು ಮಾತನಾಡಿ, ಗ್ರಾಮದ ಆರಾಧ್ಯ ದೇವತೆ ಹಳೆ ಊರು ಮಾರೆಮ್ಮ ಆಶೀರ್ವಾದದಿಂದ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯೊಂದಿಗೆ ರೈತರ ಬೆಳೆಗಳಿಗೆ ಇಳುವರಿ ಜತೆಗೆ ಸಕಾಲಕ್ಕೆ ಉತ್ತಮ ಬೆಲೆ ಸಿಗುವಂತೆ ವಿಶೇಷ ಪೂಜೆ ಸಲ್ಲಿಸಿದರು.
ಅಲ್ಲದೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಉತ್ತಮ ವಾತಾವರಣ ಕಲ್ಪಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಗ್ರಾಮದ ಭಕ್ತಾದಿಗಳಿಂದ ಅನ್ನ ಸಂತರ್ಪಣೆ, ಧಾರ್ಮಿಕ ಕಾರ್ಯಗಳು ಜರುಗಿದವು.
ಮುಖಂಡರಾದ ಶಂಕ್ರಪ್ಪ, ಹನುಮಂತಪ್ಪ, ಹುಲುಗಪ್ಪ, ತಳವಾರ್ ಈರಣ್ಣ, ಸಣ್ಣ ಹನುಮಯ್ಯ, ಮೌಲಪ್ಪ, ಬಜಾರೆಪ್ಪ, ರುದ್ರಯ್ಯ, ಗಳೆಪ್ಪ, ದೇಶನೂರು ಈರಣ್ಣ, ಸಿದ್ದಯ್ಯ, ಭೀಮಯ್ಯ, ಮಂಜಯ್ಯ, ಪ್ರಹ್ಲಾದ್, ಬಳ್ಳಾರಿ ಆಂಜಿನಿ, ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.