Advertisement

ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿ

09:05 PM Jun 03, 2019 | Team Udayavani |

ಹಾಸನ: ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂಕರವಾದ ಯೋಜನೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಶಾಲಾ, ಕಾಲೇಜು ಕಟ್ಟಡಗಳು ಹಾಗೂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸುತ್ತಿರುವ ಕಟ್ಟಡಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಸೂಚನೆ ನೀಡಿದರು.

Advertisement

ನಗರದ ಗಂಧದ ಕೋಠಿ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡಗಳು, ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಲೇಜು ಕಟ್ಟಡಗಳ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಆದಷ್ಟು ತ್ವರಿತವಾಗಿ ಹಾಗೂ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನೂ ಪರಿಶೀಲನೆ ನಡೆಸಿದರು.

ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಕ್ಕೆ ಸೌಕರ್ಯ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ನಗರದ ಸಂತೆ ಪೇಟೆ, ಚಿಪ್ಪಿನಕಟ್ಟೆ ಸೇರಿದಂತೆ ನಗರದ ವಿವಿಧೆಡೆ ಎಲ್‌ಕೆಜಿಯಿಂದ ಪಿಯುಸಿ ವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಪಬ್ಲಿಕ್‌ ಶಾಲೆಗಳ ಪ್ರಾರಂಭಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ತ್ವರಿತವಾಗಿ ಅಂದಾಜು ವೆಚ್ಚ ಪಟ್ಟಿ, ನಕಾಶೆ, ಕ್ರಿಯಾ ಯೋಜನೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ತಾಲೂಕು ಕೇಂದ್ರದಲ್ಲಿ ಸೌಲಭ್ಯ ಕಲ್ಪಿಸಿ: ತಾಲೂಕು ಕೇಂದ್ರಗಳಲ್ಲಿಯೇ ಉನ್ನತ ಶಿಕ್ಷಣ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕಾಲೇಜುಗಳಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲಿಯೇ ಶಿಕ್ಷಣ ಸೌಲಭ್ಯ ಉತ್ತಮಗೊಳಿಸಿದರೆ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರಕ್ಕೆ ಬರುವುದು ತಪ್ಪಲಿದೆ. ಹಾಸನ ನಗರದಲ್ಲಿ ಬಾಲಕಿಯರು ಸೇರಿದಂತೆ ಸಾರಾರು ವಿದ್ಯಾರ್ಥಿಗಳಲ್ಲಿ ವಸತಿಯುಕ್ತ ಕಾಲೇಜು ಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ರೇವಣ್ಣ ಹೇಳಿದರು.

ಗಂಧದ ಕೋಠಿಯಲ್ಲಿ ವಿಭಜಿತ ಮತ್ತು ಪ್ರಧಾನ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಟ್ಟಡಗಳ ಕಾಮಗಾರಿ ನಡೆಯುತ್ತಿದ್ದು ಶೀಘ್ರವಾಗಿ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕನಿಷ್ಠ 5ಸಾವಿರ ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅವಕಾಶ ಒದಗಿಸಬೇಕು ಎಂದು ತಾಕೀತು ಮಾಡಿದ ಅವರು, ಅದೇ ಆವರಣದಲ್ಲಿ 1,500 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಉಳ್ಳ ಸುಸಜ್ಜಿತ ಬಹು ಮಹಡಿ ವಸತಿ ನಿಲಯ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಡ, ಹಾಸನ ವೈದ್ಯಕೀಯ ಕಾಲೇಜಿನ ಹೆಚ್ಚುವರಿ ಹಾಸಿಗೆಗಳ ಕಟ್ಟಡಗಳ ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

Advertisement

ಹಾಸ್ಟೆಲ್‌ ಕಟ್ಟಡ ಕಾಮಗಾರಿ ತ್ವರಿತವಾಗಲಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೈಗೊಳ್ಳಲಾಗುವ ಹಾಸ್ಟೆಲ್‌ ಕಾಮಗಾರಿಗಳು ತ್ವರಿತವಾಗಿ ಪೂರ್ಣವಾಗಬೇಕು. ಎಲ್ಲಾ ವಸತಿ ನಿಲಯಗಳಲ್ಲಿ ಸಂಜೆ ವಿಶೇಷ ಬೋಧಕರ ನೇಮಕವಾಗಬೇಕು ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ವಸತಿ ಶಾಲೆ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ ತುರ್ತು ದುರಸ್ಥಿ ಅಗತ್ಯವಿರುವ ಕಾಮಗಾರಿಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿರುವ ಹಣವನ್ನು ಬಳಸಿ ದುರಸ್ಥಿ ಮಾಡಬೇಕು ಎಂದು ಹೇಳಿದರು.

ನೀರಿನ ಸೌಲಭ್ಯ ಕಲ್ಪಿಸಿ: ಹಾಸನ ನಗರದಲ್ಲಿ ಸಿದ್ದಯ್ಯನಗರ, ಚಿಪ್ಪಿನಕಟ್ಟೆ, ಅಂಬೇಡ್ಕರ್‌ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರು ಮತ್ತು ಚರಂಡಿ ಸೌಲಭ್ಯದ ಕೊರತೆಯಿದ್ದು ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಆದ್ಯತೆ ಮೇಲೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕೈಗೊಳ್ಳಬೇಕು. ಇದಕ್ಕೆ ಕೊಳಚೆ ನಿರ್ಮೂಲನೆ ಮಂಡಳಿಯ ಸಹಕಾರವನ್ನು ಪಡೆದುಕೊಳ್ಳಿ ಎಂದು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

ನಗರದ ಸಂತೆ ಪೇಟೆ ಹಾಗೂ ಚಿಪ್ಪಿನಕಟ್ಟೆಗಳಿಗೆ ಭೇಟಿ ನೀಡಿ ಕರ್ನಾಟಕ ಪಬ್ಲಿಕ್‌ ಶಾಲೆಗಳ ಪ್ರಾರಂಭಕ್ಕೆ ಹಾಗೂ ಇತರೆ ಶೈಕ್ಷಣಿಕ ಸೌಲಭ್ಯಕ್ಕೆ ಕಟ್ಟಡ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸಿ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜುನಾಥ್‌ ಹಾಗೂ ನಗರಸಭೆ ಎಂಜಿನಿಯರ್‌ಗಳಿಗೆ ನಿರ್ದೇಶನಗಳನ್ನು ನೀಡಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್‌, ನಗರಸಭೆ ಆಯುಕ್ತೆ ರೂಪಾಶೆಟ್ಟಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಂಜು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹರ್ಷ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next