Advertisement

15 ವರ್ಷಗಳಿಂದ 5 ದಿನ ಬೀದಿ ಮಡೆಸ್ನಾನ ನಡೆಸುವ ಭಕ್ತ

03:35 AM Dec 11, 2018 | Karthik A |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ವೇಳೆ ದೇವರಿಗೆ ನೀಡುವ ವಿಶಿಷ್ಟ ಸೇವೆಗಳಲ್ಲಿ ಬೀದಿಮಡೆಸ್ನಾನ (ಉರುಳು ಸೇವೆ) ಸೇವೆಯೂ ಒಂದಾಗಿದೆ. ಈ ಸೇವೆಯನ್ನು ಹಲವು ಮಂದಿ ಭಕ್ತರು ಸ್ವಯಂ ಸ್ಪೂರ್ತಿ ಮತ್ತು ಭಕ್ತಿಯಿಂದ ನೆರವೇರಿಸುತ್ತಾರೆ. ಇಲ್ಲಿ ಭಕ್ತರೊಬ್ಬರು ಕಳೆದ 15 ವರ್ಷದಿಂದ 5 ದಿನವೂ ನಿರಂತರ ಈ ಸೇವೆ ನಡೆಸುತ್ತಿದ್ದಾರೆ. ಈ ಸೇವೆ ನಡೆಸಿದ ಭಕ್ತ ಧರ್ಮಸ್ಥಳದ ಹರೀಶ್‌ ಕೊಠಾರಿ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆ ಲಕ್ಷದೀಪೋತ್ಸವದ ಮರುದಿನದಿಂದ ಹಿಡಿದು ಮುಂದಿನ ಐದು ದಿನಗಳು ಬೀದಿ ಮಡೆಸ್ನಾನ ನಡೆಸುತ್ತಾರೆ. ಈ ಬಾರಿ ಡಿ. 12ರಂದು ಆರಂಭಿಸಿದ್ದು ಒಂದು ದಿನ ಹೆಚ್ಚಿಗೆ ಡಿ. 11ರ ಚೌತಿ ತನಕ ಅಂದರೆ ಆರು ದಿನಗಳು ಬೀದಿ ಮಡೆಸ್ನಾನ ಸೇವೆ ನಡೆಸಲು ನಿರ್ಧರಿಸಿರುವರು.

Advertisement

ವಿಶ್ರಾಂತಿ ಪಡೆಯದೆ ಉರುಳು
ಕುಮಾರಧಾರೆಯಿಂದ ದೇಗುಲದ ತನಕ 2 ಕಿ.ಮೀ ದೂರ ರಸ್ತೆಯಲ್ಲಿ ನಡೆಸುವ ಕಠಿನ ಸೇವೆ ಇದಾಗಿದೆ. ವರ್ಷದಲ್ಲಿ ಜಾತ್ರೆ ವೇಳೆ ಮಾತ್ರ ಈ ಸೇವೆ ನಡೆಯುತ್ತದೆ. ಉರುಳು ಸೇವೆ ನಡೆಸುವ ಮುಂಚೆ ಬಹಳಷ್ಟು ದಿನ ವ್ರತವನ್ನು ಕೈಗೊಂಡು ನಡೆಸುವ ಕಠಿಣವಾದ ಸೇವೆಯಿದು. ಲಕ್ಷದೀಪೋತ್ಸವ ಮರುದಿನ ಪಂಚಮಿ ದಿನದ ನಡುವಿನ ನಾಲ್ಕು ಕೆಲವೊಮ್ಮೆ ಐದು ದಿನಗಳ ಕಾಲ ಈ ಸೇವೆ ಸಲ್ಲಿಸಲಾಗುತ್ತದೆ. ಎರಡು ಕಿ.ಮೀ ಕ್ರಮಿಸಲು ಅಲ್ಲಲ್ಲಿ ವಿಶ್ರಾಂತಿ ಪಡೆದು ಸೇವೆ ಸಲ್ಲಿಸುವುದುಂಟು. ಆದರೆ ಕೊಠಾರಿಯವರು ಎಲ್ಲಿಯೂ ವಿಶ್ರಾಂತಿ ಪಡೆಯದೆ ಕೇವಲ 45 ನಿಮಿಷದಲ್ಲಿ ಈ ಸೇವೆ ಪೂರೈಸುತ್ತಾರೆ. ದೇಗುಲದ ಹೊರಾಂಗಣದಲ್ಲಿ ಐದು ಸುತ್ತು ಬರುತ್ತಾರೆ. ಅವರು ಲೋಕಕಲ್ಯಾಣಾರ್ಥ ಮೈಸೂರಿನ ಬೆಟ್ಟದಲ್ಲಿ 11 ಕಿ.ಮೀ. ಉರುಳು ಸೇವೆ ಮಾಡಿದ್ದರು.

ಲಕ್ಷದೀಪೋತ್ಸವದ ಶ್ರೀ ದೇವರ ಚಂದ್ರಮಂಡಲ ರಥೋತ್ಸವ ನೆರವೇರಿದ ಬಳಿಕ ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಪ್ರಿಯವಾದ ಬೀದಿ ಮಡೆಸ್ನಾನ ಸೇವೆ ನಡೆಯುತ್ತದೆ. ಚೌತಿ ಮತ್ತು ಪಂಚಮಿಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಸೇವೆಯನ್ನು ತೀರಿಸುತ್ತಾರೆ. ಸಂಜೆಯಿಂದ ಮಾರನೆಯ ದಿನ ಬೆಳಗ್ಗೆಯವರೆಗೆ ಈ ಸೇವೆಯನ್ನು ಭಕ್ತರು ನೆರವೇರಿಸುತ್ತಾರೆ. ಅವರು ಸುಮಾರು 22 ವರ್ಷಗಳಿಂದ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲೂ ಸೇವೆ ನಡೆಸುತ್ತಾ ಬಂದಿದ್ದಾರೆ. ಅದೇ ರೀತಿ ಕುಕ್ಕೆಯಲ್ಲೂ ಬೀದಿ ಮಡಸ್ನಾನ ಸೇವೆ ನೆರವೇರಿಸುತ್ತಿದ್ದಾರೆ. ಇಪ್ಪತ್ತು ವರ್ಷಕ್ಕೂ ಮಿಕ್ಕಿ ವರ್ಷದಿಂದ ಇಲ್ಲಿ ಬೀದಿ ಮಡಸ್ನಾನ ಸೇವೆ ನಡೆಸುವ ಭಕ್ತರು ಕೂಡ ಷಷ್ಠಿ ವೇಳೆ ಕಂಡುಬರುತ್ತಾರೆ.

ಈ ಬಾರಿ ಹೆಚ್ಚಳ
ಈ ಹಿಂದೆ ಮಡೆಮಡೆಸ್ನಾನ ಸೇವೆ ನಡೆಯುತ್ತಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಅನಂತರದಲ್ಲಿ ಮಡೆಸ್ನಾನದ ಬದಲು ಪರ್ಯಾಯ ಎಡೆಸ್ನಾನ ಸೇವೆ ಜಾರಿಗೆ ಬಂದಿದೆ. ಎಡೆಸ್ನಾನ ಜಾರಿಗೆ ಬಂದ ಬಳಿಕ ಬೀದಿ ಮಡೆಸ್ನಾನ ಸೇವೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ವರ್ಷ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಈ ಬೀದಿ ಮಡೆಸ್ನಾನ ಸೇವೆಯನ್ನು ನಡೆಸುತ್ತಿರುವುದು ಕಂಡುಬಂದಿದೆ.

ಸೇವೆಯಿಂದ ಸಂತೃಪ್ತಿ
ಯಾವುದೇ ಹರಕೆ ಹೊತ್ತು ಈ ಸೇವೆಯನ್ನು ಸಲ್ಲಿಸುತಿಲ್ಲ. ಭಕ್ತಿಯಿಂದ ನೆರವೇರಿಸುವ ಸೇವೆ ಇದು. ನಿರಂತರ ಸೇವೆಯಿಂದ ನನಗೆ ಒಳಿತಾಗಿದೆ. ದೇವರ ಆಶಿರ್ವಾದ ದೊರೆತಿದೆ. ಮುಂದೆಯೂ ಸೇವೆ ಮುಂದುವರೆಸುವೆ.
– ಹರೀಶ್‌ ಕೊಠಾರಿ, ಧರ್ಮಸ್ಥಳ

Advertisement

— ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next