Advertisement

ಪ್ರತಿ ಹಳ್ಳಿಗೂ ಕಾನೂನಿನ ಜ್ಞಾನ ತಲುಪಬೇಕು: ಪ್ರೊ|ಈಶ್ವರ ಭಟ್‌

03:35 AM Jun 18, 2018 | Team Udayavani |

ಪುತ್ತೂರು: ಎಲ್‌.ಎಲ್‌.ಡಿ. ಪದವಿ ಪಡೆದ ಭಾರತದ ನಾಲ್ಕನೇ ವ್ಯಕ್ತಿ ಪುತ್ತೂರಿನ ಪಟ್ನೂರು ಹಾರಕೆರೆ ನಿವಾಸಿ ಪ್ರೊ| ಈಶ್ವರ ಭಟ್‌. ಇವರು ಹುಬ್ಬಳ್ಳಿಯಲ್ಲಿರುವ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಈಚೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಕಾನೂನು ಸಂಬಂಧಿ ಐದು ಪುಸ್ತಕಗಳನ್ನು ಬರೆದಿರುವ ಪ್ರೊ| ಭಟ್‌ 115ಕ್ಕೂ ಅಧಿಕ ಸಂಶೋಧನ ಲೇಖನ ರಚಿಸಿದ್ದಾರೆ, 20ಕ್ಕೂ ಅಧಿಕ ಪಿ.ಎಚ್‌.ಡಿ.ಗಳಿಗೆ ಮಾರ್ಗ ದರ್ಶನ ನೀಡಿದ್ದಾರೆ. ಅನೇಕ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿದ್ದಾರೆ. ಕೆನಡಾದಲ್ಲಿ ವಿಸಿಟಿಂಗ್‌ ಪ್ರೊಫೆಸರ್‌ ಆಗಿ, 2011- 2018ರ ವರೆಗೆ ಪ. ಬಂಗಾಲದ ನ್ಯಾಷನಲ್‌ ಯುನಿವರ್ಸಿಟಿ ಆಫ್‌ ಜ್ಯುರಿಡಿಕಲ್‌ ಸೈನ್ಸಸ್‌ನ ಉಪಕುಲಪತಿ ಆಗಿದ್ದರು. ಪುತ್ತೂರು ಬೋರ್ಡ್‌ ಹೈಸ್ಕೂಲ್‌, ವಿವೇಕಾನಂದ ಕಾಲೇಜು, ಉಡುಪಿ ಲಾ ಕಾಲೇಜಿನಲ್ಲಿ ಎಲ್‌.ಎಲ್‌.ಬಿ., ಮೈಸೂರು ವಿ.ವಿ.ಯಲ್ಲಿ ಎಲ್‌ಎಲ್‌ಎಂ ಪದವಿ, ಕೆಥೊಲಿಕ್‌ ವಿ.ವಿ. ಆಫ್‌ ಅಮೆರಿಕದಲ್ಲಿ ಫುಲ್‌ ಬ್ರೈಟ್‌ ಫೆಲೋಶಿಪ್‌ ಪಡೆದುಕೊಂಡಿದ್ದಾರೆ. ಭಾಷಾ ಹಕ್ಕುಗಳ ಬಗ್ಗೆ ಕೆನಡಾದಲ್ಲಿ ಅಧ್ಯಯನ ನಡೆಸಿದ್ದಾರೆ. ಇವರು ಮೂಲತಃ ಪಟ್ನೂರು ಗ್ರಾಮದ ಹಾರಕೆರೆ ನಿವಾಸಿ. ಪಡೀಲ್‌ ಶಂಕರ ಭಟ್‌ – ಗಂಗಮ್ಮ ದಂಪತಿ ಪುತ್ರ. ಈಗ ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ. ಈ ಹಿನ್ನೆಲೆಯಲ್ಲಿ ‘ಉದಯವಾಣಿ’ ಜತೆ ಮಾತನಾಡಿದ್ದಾರೆ.

Advertisement

ರಾಜ್ಯ ಕಾನೂನು ವಿ.ವಿ.ಯಡಿಯ 100ರಷ್ಟು ಕಾನೂನು ಕಾಲೇಜುಗಳನ್ನು ಒಂದೇ ಸೂರಿನಡಿ ಕೊಂಡೊಯ್ಯುವಾಗ ಎದುರಾಗುವ ಸವಾಲು ಮತ್ತು ಪರಿಹಾರ ಏನು?
ಗುಣಮಟ್ಟ ದೃಷ್ಟಿಯಿಂದ ಇದುವರೆಗೆ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದೆ. ಶೈಕ್ಷಣಿಕವಾಗಿ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಇದನ್ನು ಸಾಮಾಜಿಕ ಜೀವನದತ್ತಲೂ ಕೊಂಡೊಯ್ಯುವುದು ಮುಂದಿರುವ ಸವಾಲು. ಅಂಧ ಶ್ರದ್ಧೆ ನಿರ್ಮೂಲನೆಗೆ ಹುಬ್ಬಳ್ಳಿ ವಿ.ವಿ.ಯಿಂದಲೂ ವರದಿ ನೀಡಲಾಗಿದೆ. ಇಂತಹ ಸಾಮಾಜಿಕ ಕೆಲಸಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೊಂಡೊಯ್ಯಬೇಕಿದೆ. ಕಾನೂನು ವಿಷಯಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವುದು, ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುವುದು ಮುಂದಿನ ಕೆಲಸಗಳಲ್ಲಿ ಸೇರಿಕೊಂಡಿದೆ. ಕಾಲೇಜುಗಳಲ್ಲಿರುವ ಲೀಗಲ್‌ ಏಡ್‌ ಕ್ಲಿನಿಕ್‌ಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ.

ಕಾನೂನು ಶಿಕ್ಷಣದ ವ್ಯಾಪ್ತಿ, ಶಿಕ್ಷಣ ಅಭಿವೃದ್ಧಿಗೆ ಉಪಕುಲಪತಿಯಾಗಿ ನೀವು ಕೈಗೊಳ್ಳುವ ಕ್ರಮಗಳೇನು?
ಕಾನೂನು ಶಿಕ್ಷಣ ಸಾಮಾಜಿಕ ಜೀವನದಲ್ಲಿ ಮಿಳಿತ ಆಗಬೇಕು. ಸ್ಥಳೀಯ ಸಂಸ್ಕೃತಿಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಕಾನೂನು ರೂಪುಗೊಳ್ಳಬೇಕು. ಸಾಮಾಜಿಕ ಜೀವನದಲ್ಲಿರುವ ಅಂಧಶ್ರದ್ಧೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಾಯೋಗಿಕ ಕೆಲಸ ಆಗಬೇಕಿದೆ.ಅಂಧಶ್ರದ್ಧೆಯಿಂದ ಅಪರಾಧ ಚಟುವಟಿಕೆಯೂ ನಡೆಯುತ್ತಿದ್ದು, ಕಡಿವಾಣ ಅಗತ್ಯ. ಇದನ್ನು ಕಾನೂನಾತ್ಮಕವಾಗಿಯೇ ಡೀಲ್‌ ಮಾಡಬೇಕಿದೆ.

ರಾಜ್ಯ ಕಾನೂನು ಕಾಲೇಜುಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಪೈಪೋಟಿ ನೀಡುವಷ್ಟು ಸಮರ್ಥ ಆಗಿವೆಯೇ?
ಸ್ಥಳೀಯ ಕಾಲೇಜುಗಳಲ್ಲಿ ಕಲಿತರೆ ಅಂತಾರಾಷ್ಟ್ರೀಯ ಗುಣಮಟ್ಟ ಸಿಗುವುದಿಲ್ಲ ಎಂಬ ಅಭಿಪ್ರಾಯ ತಪ್ಪು. ರಾಜ್ಯದ ಕಾನೂನು ಕಾಲೇಜುಗಳು ಯಾವುದರಲ್ಲೂ ಕಡಿಮೆಯಿಲ್ಲ. ಆದರೆ ಕಾನೂನು ಶಿಕ್ಷಣದ ಚಟುವಟಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಲ್ಲಿ ಎಡವಿದ್ದೇವೆ. ರಾಷ್ಟ್ರೀಯ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳ ರಜಾ ದಿನದ ಪ್ರಾಕ್ಟೀಸ್‌, ಬರವಣಿಗೆಯ ತರಬೇತಿ, ಕಾಲೇಜಿನಿಂದ ಹೊರಬರುವಾಗಲೇ ಸ್ವತಂತ್ರವಾಗಿ ಕೆಲಸ ಮಾಡುವಷ್ಟು ಪರಿಣತರನ್ನಾಗಿಸುತ್ತದೆ. ಇದನ್ನು ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳು ಮಾಡಿದರೆ, ಆ ಮಟ್ಟಕ್ಕೆ ಬೆಳೆಯಬಹುದು.

ನ್ಯಾಷನಲ್‌ ಲಾ ಯುನಿವರ್ಸಿಟಿ ಆಫ್‌ ಇಂಡಿಯಾ ರಾಜ್ಯದ ಕಾನೂನು ಕಾಲೇಜುಗಳಿಂದ ಪ್ರತ್ಯೇಕವಾಗಿಯೇ ಇದೆ. ಈ ಮಟ್ಟದ ಶಿಕ್ಷಣ ರಾಜ್ಯದ ಕಾನೂನು ಕಾಲೇಜುಗಳಿಂದ ನಿರೀಕ್ಷೆ ಇಟ್ಟುಕೊಳ್ಳಬಹುದೇ?
ಕಾನ್ಫರೆನ್ಸ್‌ಗೆ ಬರುವ ಉಪನ್ಯಾಸಕ, ಪ್ರೊಫೆಸರ್‌ ಗಳಿಗೆ ವಿದ್ಯಾರ್ಥಿಗಳನ್ನು ತರಬೇತು ಮಾಡುವ ವಿಷಯದಲ್ಲಿ ಹೆಚ್ಚಿನ ಆಸಕ್ತಿ ನೀಡುವಂತೆ ತಿಳಿಸಲಾಗುತ್ತಿದೆ. ರಾಷ್ಟ್ರೀಯ ಕಾನೂನು ಕಾಲೇಜುಗಳಲ್ಲಿ ಕಲಿತವರು ಹೆಚ್ಚಾಗಿ ಕಾರ್ಪೊರೇಟ್‌ ವಲಯಕ್ಕೆ ಹೋಗುತ್ತಾರೆ. ಆದರೆ ಸಾಂಪ್ರದಾಯಿಕ ಕಾಲೇಜುಗಳಲ್ಲಿ ಕಲಿತವರು, ಕೋರ್ಟ್‌ ನ್ಯಾಯಾಧೀಶ, ವಕೀಲರಾಗಿ ಗುರುತಿಸಿಕೊಳ್ಳುತ್ತಾರೆ. ಇದು ಸಮಾಜಕ್ಕೆ ಅನುಕೂಲ. ಆದ್ದರಿಂದ ರಾಜ್ಯದ ಕಾಲೇಜುಗಳೇ ಉತ್ತಮ ಅಲ್ಲವೇ?

Advertisement

ಎಲ್‌.ಎಲ್‌.ಡಿ. ಪದವಿಗೆ ನಿಮ್ಮ ಆಯ್ಕೆಯ ವಿಷಯ ಯಾವುದು?
ಪಿಎಚ್‌ಡಿ ಬಳಿಕ ಪೋಸ್ಟ್‌ ಡಾಕ್ಟೋರಲ್‌ ವರ್ಕ್‌ನ ಮಂಡನೆಗೆ ಎಲ್‌ಎಲ್‌ಡಿ ಪದವಿ ಸಿಗುತ್ತದೆ. ಗುಣಮಟ್ಟ, ಪ್ರಸೆಂಟೇಷನ್‌ ಇಲ್ಲಿ ಮುಖ್ಯ. ‘ನಾನ್‌ ಪ್ರಾಫಿಟ್‌ ವೊಲೆಂಟೆರಿ ಆರ್ಗನೈಜೇಷನ್ಸ್‌ ಲಾ’ ವಿಷಯದಲ್ಲಿ ಎಲ್‌.ಎಲ್‌.ಡಿ. ಪದವಿ ಪಡೆದಿದ್ದೇನೆ. ದತ್ತಿ, ದಾನ, ರಿಜಿಸ್ಟರ್‌ ಸೊಸೈಟಿ, ಕಾರ್ಪೊರೇಟಿವ್‌ ಸೊಸೈಟಿ ವಿಷಯ ಇದರಡಿ ಬರುತ್ತವೆ. ರಾಜ್ಯದ ಕೆಲವು ಕಡೆಗಳಲ್ಲಿ ಕಾನೂನು ಪರಿಣಾಮಕಾರಿ ಆಗಿಲ್ಲ. ಟ್ರಸ್ಟ್‌ ಆ್ಯಕ್ಟ್‌ನ ಅಡಿಯಲ್ಲಿ ರೆಗ್ಯುಲೇಷನ್‌ ಗಳೇ ಇಲ್ಲ ಎನ್ನುವುದನ್ನು ಇದರಲ್ಲಿ ಉಲ್ಲೇಖೀಸಿದ್ದೆ.

— ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next