Advertisement
ಈಗಾಗಲೇ ರಾಜ್ಯದ ನಾನಾ ಕಡೆ ಹತ್ಯೆಗಳಾಗಿವೆ. ಅದನ್ನು ವಿರೋಧಿಸಿ ಪ್ರತಿಭಟನೆಗಳೂ ನಡೆದಿವೆ. ಆಗ ನಿಮ್ಮ ದನಿ ಕೇಳಲಿಲ್ಲ. ಈಗ (ಗೌರಿ ಹತ್ಯೆ ನಂತರ) ಕೇಳುತ್ತಿದೆಯಲ್ಲಾ?– ಹತ್ಯೆ ಯಾರದ್ದಾದರೂ, ಯಾವ ಕಾರಣಕ್ಕಾದರೂ ಖಂಡನೀಯ. ಸಾವಿಗೆ ಜಾತಿಯ, ಧರ್ಮದ, ಪಕ್ಷದ ಬಣ್ಣ ಬಳಿಯಬಾರದು ಕೂಡ. ನಮ್ಮ ರಾಜ್ಯದಲ್ಲಷ್ಟೇ ಅಲ್ಲ, ನಮ್ಮ ರಾಷ್ಟ್ರದಲ್ಲಷ್ಟೇ ಅಲ್ಲ. ಪ್ರಪಂಚದಲ್ಲಿ ಯಾವೊಬ್ಬ ವ್ಯಕ್ತಿಯ ಮೂಲಭೂತ ಹಕ್ಕನ್ನೂ, ಸ್ವಾತಂತ್ರ್ಯವನ್ನೂ ಹತ್ತಿಕ್ಕುವ ಪ್ರಯತ್ನಗಳು ನಡೆದದ್ದು ನನ್ನ ಗಮನಕ್ಕೆ ಬಂದಾಗಲೆಲ್ಲ ಖಂಡಿಸುತ್ತಲೇ ಬಂದಿದ್ದೇನೆ. ಇದು ನನ್ನನ್ನು ಎಲ್ಲಾ ಕಾಲಗಳಲ್ಲೂ ಗಮನಿಸುತ್ತಿರುವವರಿಗೆ ಗೊತ್ತು. ಅಲ್ಲೊಂದು, ಇಲ್ಲೊಂದು ಪ್ರಕರಣಗಳನ್ನು ಮಾತ್ರ ಎತ್ತಿ ಹೇಳುವ ಅವಶ್ಯಕತೆ ಇಲ್ಲ.
– ಪದೇ ಪದೇ ಹೇಳುತ್ತಿದ್ದೇನೆ. ಗೌರಿ ಹತ್ಯೆ ಯಾರು ಮಾಡಿದ್ದಾರೆಂದು ಇನ್ನೂ ಗೊತ್ತಿಲ್ಲ. ತನಿಖೆ ನಡೆಯುತ್ತಿದೆ. ಅದು ಗೊತ್ತಾಗುವವರೆಗೂ ಕಾಯೋಣ. ಈ ನಡುವೆ ಗೌರಿಯಂಥವರ ದಾರುಣ ಹತ್ಯೆಯನ್ನು ಸಂಭ್ರಮಿಸುತ್ತಿರುವವರನ್ನು ನೋಡಿ ಆತಂಕವಾಗುತ್ತಿದೆ ಎಂದು ಹೇಳುತ್ತಿದ್ದೇನೆ. ನೋಡಿ, ನಾನು ಏನೇ ಹೇಳಿದರೂ ಕೆಲವರು ತಮಗೆ ಹೇಗೆ ಬೇಕೋ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಕೇಳಿಸಿಕೊಳ್ಳುತ್ತಾರೆ. ಏನು ಮಾಡೋಣ ಹೇಳಿ? ಗೌರಿ ಹತ್ಯೆಯ ತನಿಖೆಯ ಹೊಣೆ ರಾಜ್ಯಸರ್ಕಾರದ್ದು, ಆದರೆ ಕೇಂದ್ರ ಸರ್ಕಾರವನ್ನ ಟೀಕಿಸುತ್ತಿದ್ದೀರಂತಲ್ಲಾ, ಸರೀನಾ?
– ಮತ್ತದೇ ರಾಗ. ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಹತ್ಯೆ ಗಳ ಸರಣಿ ಅನ್ನೋದು ಜಗತ್ತಿಗೇ ಗೊತ್ತು. ರಾಜ್ಯ ಸರ್ಕಾರವೋ, ಕೇಂದ್ರ ಸರ್ಕಾರವೋ ಮೊದಲು ತನಿಖೆ ಮಾಡಲು ಬಿಡಿ. ಅದರ ರಹಸ್ಯವನ್ನು ಬೇಧಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಎಲ್ಲಾ ಜನ ಸಾಮಾನ್ಯರಂತೆ ನಾನೂ ಕಾಯುತ್ತಿದ್ದೇನೆಯೇ ಹೊರತು ಯಾರನ್ನೂ ದೂರಿಲ್ಲ.
Related Articles
– ಅವರವರ ಭಾವಕ್ಕೆ, ಅವರವರ ಭಕುತಿಗೆ ಬಿಟ್ಟದ್ದು. ನನ್ನ ದೇಶದ ಸಮಸ್ಯೆಗಳ ಬಗ್ಗೆ ತುಡಿಯೋ, ಭವಿಷ್ಯದ ಬಗ್ಗೆ ಚಿಂತಿಸೋ ಯಾವುದೇ ಸಂಘಟನೆಯ ವೇದಿಕೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಅವರ ವಿಚಾರಗಳನ್ನು ತಿಳಿದುಕೊಳ್ಳುವ, ನನ್ನ ವಿಚಾರಗಳನ್ನು ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತೇನೆ. ನನಗೆ ಮನುಷ್ಯರೂ, ಅವರ ಸಂವೇದನೆಗಳು ಮುಖ್ಯ. ಅವರು ಯಾವ ರಾಜ್ಯದವರು, ಯಾವ ಜಾತಿಯವರು, ಯಾವ ಪಕ್ಷದವರು, ಯಾವ ಪಂಥದವರೆಂದು ನಾನು ಯೋಚಿಸುವುದೂ ಇಲ್ಲ, ನನಗೆ ಬೇಕೂ ಇಲ್ಲ.
Advertisement
ಮೋದಿ ನಿಮ್ಮ ಟಾರ್ಗೆಟ್ಟಾ?– ಮೋದಿಯವರು ನನ್ನ ಪ್ರಧಾನಿ. ಈ ದೇಶದಲ್ಲಿ ಅವರಿಗೆ ವೋಟು ಹಾಕಿ ಚುನಾಯಿಸಿದವರಿಗಷ್ಟೇ ಅಲ್ಲ. ವೋಟು ಹಾಕದವರಿಗೂ ಅವರೇ ಪ್ರಧಾನಿ. ಇದು ನಮ್ಮ ಪ್ರಜಾಪ್ರಭುತ್ವದ ಸತ್ಯ. ಗೌರಿಯ ಹತ್ಯೆಯನ್ನು ಸಂಭ್ರಮಿಸುವವರು ಅವರನ್ನು ಹಿಂಬಾಲಿಸುವ ವ್ಯಕ್ತಿಗಳೆಂದು ತಿಳಿದೂ, ಅವರು ಅದನ್ನು ಖಂಡಿಸದೆ ಮೌನವಾಗಿರುವುದನ್ನು ನೋಡಿ ಒಬ್ಬ ಪ್ರಜೆಯಾಗಿ ನನ್ನಲ್ಲಿ ಆತಂಕ ಹುಟ್ಟಿಸಿದೆ. ಆ ಮನಃಸ್ಥಿತಿಯಲ್ಲಿ ಈ ಮೌನಕ್ಕೆ ಕಾರಣ ಏನು ಅಂತ ಕೇಳುವ ಹಕ್ಕು ನನಗಿದೆ. ಅದನ್ನು ಕೇಳಿದ್ದೇನೆ. ಹೀಗೆ ಕೇಳಿದರೆ ಅದು ಟಾರ್ಗೆಟ್ಟಾ, ಆ್ಯಂಟಿ ಮೋದಿನಾ? ರಜನೀಕಾಂತ್, ಕಮಲ್‌ಹಸನ್ ರಾಜಕೀಯಕ್ಕೆ ಬಂದಿದ್ದಾರೆ, ಪ್ರಕಾಶ್ ರೈ ಕೂಡ ರಾಜಕೀಯಕ್ಕೆ ಧುಮುಕಲು ಭೂಮಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಓಡಾಡ್ತಾ ಇದೆಯಲ್ಲಾ?
– ರಾಜಕೀಯಕ್ಕೆ ಬರಬೇಕೆಂದರೆ, ಎಲ್ಲರಿಗೂ ನೇರವಾಗಿ ಹೇಳಿಯೇ ಬರಬೇಕು. ತೆರೆಮರೆಯಲ್ಲಿ ಆಟವಾಡುವುದರಲ್ಲಿ ಅರ್ಥವಿಲ್ಲ; ಪ್ರಯೋಜನವೂ ಇಲ್ಲ. ಕಮಲ್‌ಹಸನ್, ರಜನೀಕಾಂತ್ ಅವರ ದಾರಿ, ಅವರ ಪಯಣ ಅವರದು. ನನ್ನ ಮಟ್ಟಿಗೆ ನಾನು ನನ್ನ ಪ್ರಯಾಣದಲ್ಲಿ ನಿಂತಿರುವ ಈ ಘಟ್ಟದಲ್ಲಿ ಒಂದು ಪಕ್ಷ, ಒಂದು ಪಂಥಕ್ಕೆ ಸೀಮಿತವಾದರೆ ಕೆಲಸ ಮಾಡುವುದು ಕಷ್ಟ ಎಂದು ನಂಬುವವನು ನಾನು. ‘ಪ್ರಕಾಶಾ, ನಾವು ನಿರಂತರವಾಗಿ ವಿರೋಧ ಪಕ್ಷವಾಗಿರಬೇಕು, ನೇರ ನುಡಿಯವರಾಗಿರಬೇಕು, ಪ್ರಾಮಾಣಿಕವಾಗಿ ಪ್ರಶ್ನಿಸುವ, ಎಲ್ಲದಕ್ಕೂ ಮಿಡಿಯುವ ಅಂತಃಕರಣ ಉಳ್ಳವರಾಗಿರಬೇಕು’ ಅಂತ ಲಂಕೇಶ್ ಅವರು ಹೇಳಿದ ಮಾತು, ನನ್ನ ಕಿವಿಯಲ್ಲಿ ಇನ್ನೂ ಪ್ರತಿಧ್ವನಿಸುತ್ತಲೇ ಇದೆ. ನನ್ನ ಈ ಕ್ಷಣದ ಗ್ರಹಿಕೆಯಲ್ಲಿ ನಾನು ನಿಂತಿದ್ದೇನೆ. ನೀವು ಗೌರಿ ಹತ್ಯೆ ಬಗ್ಗೆ ತೋರಿಸುವ ಮುತುವರ್ಜಿ, ಕಾವೇರಿ ವಿಚಾರದಲ್ಲಿ ತೋರಿಸಲಿಲ್ಲವೇಕೆ?
– ಕಾವೇರಿ ಜಲವಿವಾದದ ಬಗ್ಗೆ ನಾನು ಏನೂ ಮಾಡುತ್ತಿಲ್ಲ ಅಂತ ಏಕೆ ಅಂದುಕೊಂಡಿದ್ದೀರಿ? ನಾನು ಅತಿ ಹೆಚ್ಚು ಕೆಲಸ ಮಾಡುತ್ತಿರುವುದೇ ನೀರು, ಅದರಲ್ಲೂ ಕಾವೇರಿ ಸಮಸ್ಯೆ ಬಗ್ಗೆ. ಅವೆಲ್ಲಾ ನಿಮಗೆ ಗೊತ್ತಾಗುತ್ತಿಲ್ಲ ಅಷ್ಟೇ. ಕಳೆದ ಹಲವು ದಶಕಗಳಿಂದ ಕಾವೇರಿ ಸಮಸ್ಯೆ ಬಗ್ಗೆ ಅದೆಷ್ಟೋ ಮುಖ್ಯಮಂತ್ರಿಗಳು, ವಿರೋಧಪಕ್ಷದ ನಾಯಕರು, ಸಂಸದರು, ಶಾಸಕರು, ರೈತನಾಯಕರು ಮಾತಾಡಿಲ್ಲ ಹೇಳಿ? ಕರ್ನಾಟಕ, ತಮಿಳುನಾಡು ನಾಯಕರ ನಡುವೆ ಸಂಧಾನ ಕೂಡ ಆಗಿದೆ. ಆದರೂ ಫಲಿತಾಂಶ ಏನು? ಏನೂ ಇಲ್ಲ. ಏಕೆಂದರೆ, ಈ ವಿವಾದ, ಈ ಸಮಸ್ಯೆಗೆ ಪರಿಹಾರ ಮಾತುಕತೆಯಿಂದಾಗಲೀ, ಕಾನೂನಿನ ಮೊರೆಯಿಂದಾಗಲೀ ಆಗೋಲ್ಲ. ಸತ್ಯ ಏನೆಂದರೆ, ಹತ್ತು ವರ್ಷಗಳ ನಂತರ ಕಾವೇರಿ ವಿವಾದದ ಬಗ್ಗೆ ಮಾತನಾಡುವ ಅವಶ್ಯಕತೆಯೇ ಬರೋದಿಲ್ಲ. ಅಷ್ಟೊತ್ತಿಗೆ ಕಾವೇರಿ ನದಿಯೇ ಸತ್ತುಹೋಗಿರುತ್ತದೆ. ನದಿಯೇ ಇಲ್ಲದ ಮೇಲೆ ವಿವಾದ ಎಲ್ಲಿಂದ? ಕೊಡಗಿನಲ್ಲಿ ಕಾಡು ನಾಶವಾಗಿದೆ, ಕಾವೇರಿ ಕಣಿವೆಗೆ ನೀರು ಹೀರುವ ಶಕ್ತಿ ಕಳೆದುಕೊಂಡು ಬಹಳ ವರ್ಷಗಳಾಗಿವೆ. ಜಲಾನಯನ ಪ್ರದೇಶ ನಾಶವಾಗಿದೆ, ನದಿಗೆ ವಿಷ ಸೇರಿಸಿದ್ದೇವೆ. ಕಾವೇರಿಯನ್ನು ಉಳಿಸಿಕೊಳ್ಳುವ ಯೋಚನೆ, ಯೋಜನೆ ಮಾಡುತ್ತಿಲ್ಲ. ಬರೀ ಎಮೋಷನಲ್ಲಾಗಿ ಮಾತನಾಡುತ್ತಿದ್ದೇವೆ ಅಷ್ಟೇ. ಇದನ್ನು ಬಹಳ ಸಲ ಹೇಳುತ್ತಲೇ ಬಂದಿದ್ದೇನೆ. ಹೀಗೆ ನೀವು ಮರದ ರೆಂಬೆಯ ಬಗ್ಗೆ ಯೋಚನೆ ಮಾಡುತ್ತಿದ್ದೀರಿ, ನಾನು ಬುಡದ ಉಳಿವಿನ ಬಗ್ಗೆ ಚಿಂತಿಸುತ್ತಿದ್ದೇನೆ. ಬುಡವಿದ್ದರೆ ತಾನೇ ರೆಂಬೆ ಚಿಗುರುವುದು? ಅಷ್ಟೇ ಏಕೆ, ಈ ಹಿಂದೆ ಇದೇ ಪತ್ರಿಕೆಯಲ್ಲಿ ‘ಕಾವೇರಿ ಸಮಸ್ಯೆಗೆ ನಾವೇರೀ ಕಾರಣ’ ಅನ್ನೋ ಅಂಕಣ ನಾನೇ ಬರೆದಿದ್ದೇನೆ. ಒಮ್ಮೆ ಓದಿ. ಸತ್ಯ ಏನೆಂದರೆ, ಕೆಲ ಜನರಿಗೆ ಕೆಲವೊಂದು ಮಾತುಗಳು ಮಾತ್ರ ಜೋರಾಗಿ ಕೇಳಿಸುತ್ತವೆ. ಕೆಲವು ಮಾತುಗಳು ಕೇಳಿಸುವುದೇ ಇಲ್ಲ. ಏನು ಮಾಡೋಣ? ನೀವು ಕೋಪಕ್ಕೆ ಬುದ್ಧಿಯನ್ನು ಕೊಡ್ತೀರಾ ಅನ್ನೋ ಆರೋಪ ಇದೆಯಲ್ಲಾ?
– ಕಾಣುವ, ನನಗೆ ಅರ್ಥವಾಗುವ, ನಾನು ತುಡಿಯುವ ಸಮಸ್ಯೆಗಳ ಬಗ್ಗೆ ನಿಷ್ಠುರವಾಗಿ ಮಾತನಾಡುತ್ತೇನೆ. ಯಾರನ್ನೋ ಮೆಚ್ಚಿಸುವಂತೆ ಮಾತನಾಡುವ ಹಂಗಿಲ್ಲ ನನಗೆ. ಈ ನನ್ನ ಧ್ವನಿ ಲಂಕೇಶರಿಂದ, ತೇಜಸ್ವಿ ಅವರಿಂದ ಬಂದದ್ದು. ಅದೂ ಕೆಲವರಿಗೆ ಕಸಿವಿಸಿ ಮಾಡುವುದು ಸಹಜ. ಅದನ್ನೂ ಕೋಪವೆಂದುಕೊಂಡರೆ ಕೋಪವೇ ಆಗಿರಲಿ, ಅಂತಃಕರಣದ ವೇದನೆ ಎನಿಸಿದರೆ ವೇದನೆಯೇ ಆಗಿರಲಿ. ಇಲ್ಲಿ ಪ್ರಕಾಶ್ ರೈ, ಅಲ್ಲಿ ಪ್ರಕಾಶ್ ರಾಜ್ ಆಗಿದ್ದು ಏಕೆ, ಉದ್ದೇಶ ಏನು?
– ಕನ್ನಡಿಗರಿಗೆ ನಾನು ಪ್ರಕಾಶ್ ರೈ. ಬೇರೆ ರಾಜ್ಯಗಳಿಗೆ ಪ್ರಕಾಶ್ ರಾಜ್. ಅದು ಹಾಗೇ ಇರಲಿ. ನೋಡಿ, ಒಬ್ಬ ನಟ ಸಿನಿಮಾಗೆ ಬಂದ ಮೇಲೆ ಬೆಳ್ಳಿ ತೆರೆಗೆ ಅಂತಲೇ ಹೆಸರು ಬರುವುದು ಸಹಜ. ಅದು ಬಹಳಷ್ಟು ಸಲ ಜಾತಿ, ಮತ, ಕುಲ, ಊರು ಯಾವುದನ್ನೂ ಬಿಂಬಿಸದ ಹೆಸರಾಗಿರುತ್ತದೆ. ನೋಡುವ ಪ್ರೇಕ್ಷನಿಗೆ ಅದು ಮುಖ್ಯವಾಗಬಾರದೆಂಬುದು ಅದರ ಹಿಂದಿನ ಉದ್ದೇಶ. ನಮ್ಮ ಮೇರುನಟರಾದ ಡಾಕ್ಟರ್ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅಷ್ಟು ಏಕೆ, ರಜನೀಕಾಂತ್, ದಿಲೀಪ್‌ಕುಮಾರ್, ಮಲೆಯಾಳಂ ಸೂಪರ್‌ಸ್ಟಾರ್ ಮಮ್ಮೂಟಿ ಹೀಗೆ ತೆರೆಗೆ ಬಂದ ನಂತರ ಹೆಸರು ಬದಲಾಯಿಸಿಕೊಂಡವರ ಪಟ್ಟಿಯೇ ಇದೆ. ಇವರೆಲ್ಲರನ್ನೂ ಬೇರುಗಳನ್ನು ಮರೆತವರು, ಅವರವರ ಮಣ್ಣಿನ ದ್ರೋಹಿಗಳೆಂದು ಕರೆಯುತ್ತೀರೇನು? ಸಂದರ್ಶನ : ಕಟ್ಟೆ ಗುರುರಾಜ್