Advertisement

ಸಂಪ್ರತಿ ವಾರ್ತಾಃ ಶ್ರೂಯಂತಾಮ್‌

11:25 AM Dec 15, 2019 | Lakshmi GovindaRaj |

ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಎಪ್ಪತ್ತರ ದಶಕದ ಮಧ್ಯಭಾಗದಿಂದ ಕೆಲವು ವರ್ಷಗಳ ಹಿಂದಿನವರೆಗೂ ಭಾರತೀಯರ ಬೆಳಗು ಮಾತ್ರ ಈ ಧ್ವನಿಯಿಂದಲೇ ಶುರುವಾಗುತ್ತಿತ್ತು. ಶಾಲೆಗೆ ಹೋಗುವ ಮಕ್ಕಳಿಗೆ, ಕಚೇರಿಗೆ ಹೊರಡುವವರಿಗೆ, ದೂರದಲ್ಲಿ ಹೊಲದಲ್ಲಿ ಕೆಲಸ ಮಾಡುವ ರೈತನಿಗೆ, ಮನೆಯಲ್ಲಿನ ಮಹಿಳೆಯರಿಗೆ- ಎಲ್ಲರಿಗೂ ಆಕಾಶವಾಣಿಯಿಂದ ಹೊರಹೊಮ್ಮುತ್ತಿದ್ದ ಈ ಧ್ವನಿಯೇ ಅಲಾರ್ಮ್ ಆಗಿಬಿಟ್ಟಿತ್ತು. ಈ ಧ್ವನಿಯನ್ನು ಕೇಳದ ಬೆಳಗುಗಳೇ ಇರುತ್ತಿರಲಿಲ್ಲ. ವಾಕ್ಯಗಳ ಅರ್ಥ ತಿಳಿಯದಿದ್ದರೂ ಇವರ ಧ್ವನಿಯ ಏರಿಳಿತ ಮಾತ್ರ ಪ್ರತಿ ಮುಂಜಾವಿನ ಸೊಗವನ್ನು ಹೆಚ್ಚಿಸುತ್ತಿತ್ತು.

Advertisement

ಬೆಳಗ್ಗೆ 6.55 ಆಗುತ್ತಿದ್ದಂತೆಯೇ ಆಕಾಶವಾಣಿಯಲ್ಲಿ ಹಾಗೊಂದು ಮಧುರಧ್ವನಿ ಮೂಡುತ್ತಿತ್ತು… “ಇಯಮ್‌ ಆಕಾಶವಾಣಿ| ಸಂಪ್ರತಿ ವಾರ್ತಾಃ ಶ್ರೂಯಂತಾಮ್‌| ಪ್ರವಾಚಕಃ ಬಲದೇವಾನಂದಸಾಗರಃ|’ ಹೀಗೆ ಸಾಗುತ್ತಿತ್ತು ಆ ದೇವವಾಣಿಯ ಧ್ವನಿಪ್ರವಾಹವು. ಮತ್ತೆ ಮುಂದಿನ ಐದು ನಿಮಿಷಗಳವರೆಗೂ ಅದೇ ಓಘ, ಅದೇ ಮಾಧುರ್ಯ, ಸ್ಪಷ್ಟ ಉಚ್ಚಾರಣೆ. ಆ ಗಂಭೀರ ಶಾರೀರದ (ಧ್ವನಿಯ) ಹಿಂದಿರುವ ವ್ಯಕ್ತಿತ್ವವೇ ಡಾ. ಬಲದೇವಾನಂದ ಸಾಗರ್‌.

ಕೇವಲ ಧ್ವನಿ ಹಾಗೂ ಹೆಸರನ್ನು ಮಾತ್ರ ಕೇಳಿ ಪರಿಚಯವಿದ್ದ ಕನ್ನಡಿಗರಿಗೆ ಬಲದೇವಾನಂದ ಸಾಗರ್‌ ಅವರನ್ನು ಸಂಪೂರ್ಣವಾಗಿ ಪರಿಚಯಿಸುವ ನಿಟ್ಟಿನಲ್ಲಿ ಕೈಗೊಂಡ ಸಾಕ್ಷಾತ್‌ ಸಂದರ್ಶನವಿದು. ಭಾರತದ ಈಶಾನ್ಯ ದಿಕ್ಕಿನಲ್ಲಿರುವ ತ್ರಿಪುರಾ ರಾಜಧಾನಿಯಾದ ಅಗರ್ತಲಾದಲ್ಲಿ ಇತ್ತೀಚೆಗೆ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ 17ನೇ ಅಂತಃಪರಿಸರೀಯ ನಾಟ್ಯಮಹೋತ್ಸವ ನಡೆಯಿತು. ಅಲ್ಲಿ ಉಪನ್ಯಾಸಕರಾಗಿರುವ ಲೇಖಕರು, “ಉದಯವಾಣಿ’ಗಾಗಿ ವಿಶೇಷ ಸಂದರ್ಶನ ನಡೆಸಿಕೊಟ್ಟಿದ್ದಾರೆ.

* ನಮಸ್ಕಾರ ಮಹೋದಯ, ದೇಶದಾದ್ಯಂತ ಮಕ್ಕಳಿಂದ ಮುದುಕರವರೆಗೆ ನೀವು ಧ್ವನಿಯ ಮೂಲಕವೇ ಸುಪರಿಚಿತರು. ಆದರೆ, ನಿಮ್ಮ ವೈಯಕ್ತಿಕ ಜೀವನದ ಬಗೆಗೆ ಬಹುಶಃ ಯಾರಿಗೂ ತಿಳಿದಿಲ್ಲ. ಅಷ್ಟೇನು, ನಿಮ್ಮ ಭಾವಚಿತ್ರವನ್ನೂ ಹೆಚ್ಚಿನವರು ಕಂಡಿರಲಿಕ್ಕಿಲ್ಲ. ನಿಮ್ಮ ಕುರಿತು ಹೇಳಬಹುದೇ?
ಮೊಟ್ಟಮೊದಲಿಗೆ ಎಲ್ಲ ಕನ್ನಡಿಗರಿಗೆ ನನ್ನ ನಮಸ್ಕಾರಗಳು. ನನ್ನ ಬಗ್ಗೆ ಹೇಳುವುದಾದರೆ, ನಾನು ಹುಟ್ಟಿದ್ದು 14 ಜೂನ್‌ 1952ರಲ್ಲಿ ಗುಜರಾತ್‌ ರಾಜ್ಯದ ಭಾವನಗರ ಜಿಲ್ಲೆಯ ವಲಭೀಪುರದಲ್ಲಿ. ನನ್ನ ಪ್ರಾಥಮಿಕ ಶಿಕ್ಷಣವು ಗುಜರಾತಿ ಮಾಧ್ಯಮದಲ್ಲೇ ನಡೆಯಿತು.

ಶಾಲೆಯಲ್ಲಿ ಆಗ ಹಿಂದಿ ಇತ್ತು ಬಿಟ್ಟರೆ, ಸಂಸ್ಕೃತದ ಅಧ್ಯಯನವೇನೂ ಇದ್ದಿರಲಿಲ್ಲ. ನಮ್ಮದು ಶಾಂಕರ ಪರಂಪರೆಯ ಸಾಂಪ್ರದಾಯಿಕ ಕುಟುಂಬ. ಶಾಂಕರ ಪರಂಪರೆಯ ಪೀಠಾಧಿಪತಿಗಳು ನಮ್ಮ ಕುಲಗುರುಗಳು. ಆಗಿನ ಯತಿಗಳ ಪ್ರಭಾವದಿಂದ ನಾನು ಸಂಸ್ಕೃತ ಅಧ್ಯಯನದ ಬಗ್ಗೆ ಆಕರ್ಷಿತನಾದೆ. 7ನೇ ತರಗತಿಯ ಅನಂತರ ನಾನು ಸಂಸ್ಕೃತದ ಅಧ್ಯಯನಕ್ಕಾಗಿಯೇ ಕಾಶಿಗೆ ತೆರಳಿದೆ. ಕಾಶಿಯ ದಕ್ಷಿಣಾಮೂರ್ತಿ ವೇದ-ಸಂಸ್ಕೃತ ವಿದ್ಯಾಲಯದಲ್ಲಿ ರಾಮ ಲಖನ ಪಾಂಡೇಯ ಮೊದಲಾದ ಗುರುಗಳ ಸಾನ್ನಿಧ್ಯ ದೊರೆಯಿತು. ಅವರಿಂದ ವ್ಯಾಕರಣ ಹಾಗೂ ವೇದಾಂತದರ್ಶನಗಳ ಅಧ್ಯಯನ ನಡೆಯಿತು.

Advertisement

* ಆಕಾಶವಾಣಿಯ ಸಂಪರ್ಕಕ್ಕೆ ಹೇಗೆ ಬಂದಿರಿ? ವಾರ್ತಾವಾಚಕರಾಗಬೇಕೆಂದು ಈ ಮೊದಲೇ ಅಂದುಕೊಂಡಿದ್ದಿರೋ ಅಥವಾ ಆಕಸ್ಮಿಕವೋ?
ವಾರ್ತಾವಾಚಕನಾಗಬೇಕೆಂದಾಗಲೀ, ಆಗುತ್ತೇನೆಂದಾಗಲೀ ಯಾವಾಗಲೂ ಅಂದುಕೊಂಡಿದ್ದೇ ಇಲ್ಲ. ಕಾಶಿಯಲ್ಲಿ ಸಂಸ್ಕೃತ ಶಾಸ್ತ್ರಾಧ್ಯಯನವು ಪೂರ್ಣಗೊಂಡ ಮೇಲೆ ನನ್ನ ಮಿತ್ರರೆಲ್ಲ ಐ.ಎ.ಎಸ್‌. ಪರೀಕ್ಷೆ ಬರೆಯಲು ಸಲಹೆಯಿತ್ತರು. ಅದಕ್ಕಾಗಿ ದೆಹಲಿಗೆ ತೆರಳಿದೆ. ಅಲ್ಲಿನ ಪ್ರವೇಶ ಪರೀಕ್ಷೆಯಲ್ಲೂ ಉತ್ತೀರ್ಣನಾದೆ. ಮುಖ್ಯಪರೀಕ್ಷೆಗೆ ತಯಾರಾಗುತ್ತಿದ್ದ ಹೊತ್ತಲ್ಲಿ, ಅಂದರೆ 1974ರ ಮೇ ತಿಂಗಳಿನಲ್ಲಿ ಪತ್ರಿಕೆಯಲ್ಲಿ ಒಂದು ಜಾಹೀರಾತು ಪ್ರಕಟವಾಗಿದ್ದು ಗಮನಕ್ಕೆ ಬಂತು. ಅದೇನೆಂದರೆ, ಆಕಾಶವಾಣಿಯು ಪ್ರಾಯೋಗಿಕವಾಗಿ ಸಂಸ್ಕೃತವಾರ್ತೆಯ ಪ್ರಸಾರವನ್ನು ಆರಂಭಿಸುವುದಾಗಿಯೂ, ಅದಕ್ಕಾಗಿ ಸಂಸ್ಕೃತ ಬಲ್ಲವರನ್ನು ಗುತ್ತಿಗೆಯ ಆಧಾರದಲ್ಲಿ ನೇಮಿಸಿಕೊಳ್ಳುವುದಾಗಿಯೂ ತಿಳಿಸಲಾಗಿತ್ತು. ನೋಡೋಣವೆಂದು ಅರ್ಜಿ ಹಾಕಿದೆ. ಲಿಖೀತ ಪರೀಕ್ಷೆ, ಧ್ವನಿಪರೀಕ್ಷೆ, ವಾಕ್‌ ಪರೀಕ್ಷೆಗಳ ಅನಂತರ ನಾಲ್ವರನ್ನು ಆಯ್ಕೆ ಮಾಡಲಾಯಿತು. ಅದರಲ್ಲಿ ನನ್ನ ಹೆಸರು ಮೂರನೇ ಕ್ರಮದಲ್ಲಿತ್ತು.

* ಅಂದರೆ, ಆಕಾಶವಾಣಿಯ ಸಂಸ್ಕೃತವಾರ್ತೆಯ ಪ್ರಾರಂಭ ಹಾಗೂ ನಿಮ್ಮ ಉದ್ಯೋಗದ ಪ್ರಾರಂಭ, ಇವೆರಡೂ ಒಟ್ಟೊಟ್ಟಿಗೇ ಆಯಿತು ಅಂತಾಯಿತು. ಆಗ ನಿಮ್ಮ ಸಂಬಳ, ಮೊದಲ ಅನುಭವಗಳು…
(ನಗುತ್ತಾ) ಪ್ರತಿ ಸಂಚಿಕೆಗೆ ಅಂದರೆ, 5 ನಿಮಿಷದ ವಾರ್ತೆಗೆ 12 ರೂ. ಸಿಗುತ್ತಿತ್ತು. (ಈಗ ಪ್ರತಿ ವಾರ್ತೆಗೆ 800ರೂ.ಗಳವರೆಗೆ ಸಿಗುತ್ತದೆ ಎಂದು ಕೇಳಿದ್ದೇನೆ). ಆದರೆ, ಅಷ್ಟು ನಿಮಿಷದ ವಾರ್ತೆಯನ್ನು ಸಿದ್ಧಪಡಿಸಲು ಹಲವಾರು ಗಂಟೆಗಳ ಕಾಲ ಇಂಗ್ಲಿಷ್‌ನಿಂದ ಅನುವಾದ ಕಾರ್ಯವನ್ನು ಸ್ವತಃ ಮಾಡಬೇಕಾಗುತ್ತದೆ. ನ್ಯೂಸ್‌ ರೂಮಿನಲ್ಲಿ ಎಲ್ಲ ಪ್ರಾಂತೀಯ ಭಾಷೆಗಳ ವಾರ್ತಾವಾಚಕರೊಂದಿಗೆ ಮೀಟಿಂಗ್‌ ಮಾಡಿ, ಅವತ್ತಿನ ವಾರ್ತೆಯನ್ನು ಇಂಗ್ಲಿಷಿನಲ್ಲಿ ಕೊಡಲಾಗುತ್ತಿತ್ತು. ಅದನ್ನು ನಾವು ಆಯಾ ಭಾಷೆಗೆ ಭಾಷಾಂತರಿಸಿ, 5 ನಿಮಿಷದ ಅವಧಿಯಲ್ಲಿ ಓದಬೇಕು.

ಪ್ರಯೋಗಾತ್ಮಕವಾಗಿ ಆರಂಭಗೊಂಡ ಅವಧಿಯಲ್ಲಿ ಸಂಸ್ಕೃತ ವಾರ್ತಾ ಪ್ರಸಾರವು ಬೆಳಗ್ಗೆ 9ಕ್ಕೆ ನಿಗದಿಯಾಗಿತ್ತು. ಹಾಗಾಗಿ, ಬೆಳಗ್ಗೆ ಐದೂವರೆಗೆಲ್ಲ ಆಕಾಶವಾಣಿ ಕೇಂದ್ರದಲ್ಲಿರಬೇಕಾಗುತ್ತಿತ್ತು. ಜೊತೆಗೆ ಹತ್ತು ಹಲವು ಆಧುನಿಕ ಶಬ್ದಗಳಿಗೆ, ಆಡಳಿತಾತ್ಮಕ ಹುದ್ದೆಗಳಂಥ ಹೆಸರುಗಳಿಗೆಲ್ಲ ಸಂಸ್ಕೃತದಲ್ಲಿ ಪದಗಳನ್ನು ಸೃಷ್ಟಿಸಿಕೊಳ್ಳಬೇಕಾಗುತ್ತಿತ್ತು. ಜೊತೆಗೆ ಸಂಸ್ಕೃತದಲ್ಲಿ ಭಾಷಾಶುದ್ಧಿಯೇ ಕ್ಷಿುುಖ್ಯವಾದ್ದರಿಂದ, ವ್ಯಾಕರಣದೋಷಗಳಾಗದಂತೆ ಅನುವಾದ ಮಾಡುವುದೊಂದು ಸವಾಲಿನ ಕೆಲಸವಾಗಿತ್ತು. ಹಲವಾರು ಶಬ್ದಕೋಶಗಳನ್ನು ತಡಕಾಡಿ, 5 ನಿಮಿಷದ ವಾರ್ತೆಯನ್ನು ರಚಿಸುವವರೆಗೆ ಬಸವಳಿಯಬೇಕಿತ್ತು. ಎರಡು ವರ್ಷಗಳ ಅನಂತರ ನಿಯಮಿತವಾಗಿ ನೇಮಕಗೊಂಡ ಮೇಲಂತೂ ಕ್ರಮೇಣ ಇದು ಅಭ್ಯಾಸವಾಗಿದ್ದರಿಂದ ಕಾಲಾಂತರದಲ್ಲಿ ಇದು ನನ್ನ ಜೀವನದ ಜೊತೆ ಬೆರೆತುಹೋಯಿತು.

ಪ್ರಶ್ನೆ: ನೀವು ಪ್ರಯೋಗಿಸಿದ ಹೊಸ ಶಬ್ದಗಳ ಒಂದೆರಡು ಉದಾಹರಣೆ ಕೊಡಬಹುದೇ?
Actಅಧಿನಿಯಮ, ordinance- ಅಧ್ಯಾದೇಶ, ಸಿಸಿಟಿವಿ- ನಿಗೂಢ ಛಾಯಾಂಕಕ, ಡಬ್ಬಲ್‌ ಡೆಕ್ಕರ್‌ ಬಸ್‌- ದ್ವಿತಲೀಯಂ ಬಸ್‌ ಯಾನಮ…, ಸ್ಮಾರ್ಟ್‌ ಕಾರ್ಡ್‌ – ಸ್ಮಾರ್ತ ಪತ್ರಮ…, ಸಿಮ್‌- ಸ್ಮತಿಪುಟಕಮ್‌ ಇತ್ಯಾದಿ…

* 40 ವರ್ಷಗಳ ನಿಮ್ಮ ಸುದೀರ್ಘ‌ ವಾರ್ತಾವಾಚಕತ್ವದ ಜೀವನದಲ್ಲಿ ಕೇಳುಗರ ಪ್ರತಿಕ್ರಿಯೆಗಳು ಹೇಗಿರುತ್ತಿದ್ದವು?
ಆಕಾಶವಾಣಿಯಲ್ಲಿ ಆಡಿಟ್‌ ಬ್ಯೂರೋ ಎಂಬ ಒಂದು ವ್ಯವಸ್ಥೆ ಇರುತ್ತದೆ. ಆಕಾಶವಾಣಿಯ ಯಾವ ಕಾರ್ಯಕ್ರಮಗಳನ್ನು ಎಷ್ಟು ಜನ ಕೇಳುತ್ತಾರೆ, ಯಾವ ವರ್ಗದ ಜನ ಕೇಳುತ್ತಾರೆ ಎಂದೆಲ್ಲ ಸರ್ವೇ ಮಾಡುವುದು ಇದರ ಕೆಲಸವಾಗಿತ್ತು. ಸಂಸ್ಕೃತವಾರ್ತೆಯ ಪ್ರಸಾರಣಕ್ಕಿಂತ ಮೊದಲು ರಾಷ್ಟ್ರಮಟ್ಟದಲ್ಲಿ ಹಿಂದಿ, ಇಂಗ್ಲಿಷ್‌ ಹಾಗೂ ಉರ್ದು ಭಾಷೆಗಳ ವಾರ್ತೆಗಳು ಮೊದಲ ಮೂರು ಸ್ಥಾನಗಳಲ್ಲಿದ್ದವು. ಸಂಸ್ಕೃತ ವಾರ್ತೆಯ ಪ್ರಸಾರಣದ ಅನಂತರ ಮೊದಲ ಸ್ಥಾನದಲ್ಲಿ ಹಿಂದಿ, ಎರಡನೇ ಸ್ಥಾನದಲ್ಲಿ ಸಂಸ್ಕೃತವಾರ್ತೆ, 3ನೇ ಸ್ಥಾನದಲ್ಲಿ ಇಂಗ್ಲಿಷ್‌ ವಾರ್ತೆ, 4ನೇ ಸ್ಥಾನಕ್ಕೆ ಉರ್ದು ವಾರ್ತೆ ನೂಕಲ್ಪಟ್ಟಿತು. ಇದು ನಮಗೆ ಬಹಳ ಆಶ್ಚರ್ಯ ತಂದಿತು. ಇದಕ್ಕೆ ಕಾರಣವೇನೆಂದು ಕೇಳಿದಾಗ, ಜನರಲ್ಲಿ ಸಂಸ್ಕೃತ ಭಾಷೆಯ ಬಗೆಗೆ ಇರುವ ಶ್ರದ್ಧೆ ಹಾಗೂ ಪೂಜ್ಯಭಾವವೇ ಕಾರಣವೆಂದು ತಿಳಿಯಿತು. ಸರಿಯಾಗಿ ಅರ್ಥವಾಗದಿದ್ದರೂ ಜನರು ಕೇಳುತ್ತಿದ್ದರು. ಜೊತೆಗೆ ನೂರಾರು ಪತ್ರಗಳು ಬರುತ್ತಿದ್ದವು. ವ್ಯಾಕರಣದೋಷಗಳ ತಿದ್ದುಪಡಿಯನ್ನೂ ಕೆಲವರು ಕಳಿಸುತ್ತಿದ್ದರು.

ಪ್ರಶ್ನೆ: ದೂರದರ್ಶನದಲ್ಲೂ ನೀವು ಸಂಸ್ಕೃತ ವಾರ್ತಾವಾಚಕರಾಗಿ ಸೇವೆ ಸಲ್ಲಿಸಿದ್ದೀರಿ. ಇದು ಪ್ರಾರಂಭವಾದ ಬಗೆ ಹೇಗೆ?
ದೂರದರ್ಶನದಲ್ಲಿ ಮೊಟ್ಟಮೊದಲ ಸಂಸ್ಕೃತವಾರ್ತೆ ಪ್ರಾರಂಭವಾಗಿದ್ದು 1994ರ ಆ.21ರಂದು. ಆಗ ಪಿ.ವಿ. ನರಸಿಂಹ ರಾವ್‌ ಅವರು ಪ್ರಧಾನಿಯಾಗಿದ್ದರು. ಮೊದಲ ಸಂಸ್ಕೃತ ವಾರ್ತೆಯನ್ನು ದೂರದರ್ಶನದಲ್ಲಿ ಓದುವ ಸೌಭಾಗ್ಯ ನನಗೇ ದೊರೆತಿತ್ತು. ಮೊದಲು ವಾರದಲ್ಲಿ ಒಮ್ಮೆ ಮಾತ್ರ ಪ್ರಸಾರವಾಗುತ್ತಿತ್ತು. ದೂರದರ್ಶನದಲ್ಲಿ ಸಂಸ್ಕೃತ ವಾರ್ತೆಯ ಪ್ರಸಾರದ ಸೂಚನೆಯು ಕೇವಲ ಹತ್ತು ದಿನದ ಮುಂಚೆ ನಮಗೆ ದೊರೆತಿತು. ಆಕಾಶವಾಣಿಯಲ್ಲಿ ವಾರ್ತಾವಾಚಕರಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಕೆಲವರು ದೂರದರ್ಶನದಲ್ಲಿಯೂ ಅಸ್ಥಾಯಿ ರೂಪದಲ್ಲಿ ವಾರ್ತಾವಾಚಕರಾಗಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸೂಚನೆಯ ಮೇರೆಗೆ ನಾವು ಕೆಲವರು ಕ್ಯಾಮೆರಾ ಟೆಸ್ಟಿಂಗ್‌ ಕೈಗೊಂಡೆವು. ಆಮೇಲೆ ವಾಜಪೇಯಿಯವರ ಸರ್ಕಾರ ಬಂದ ಮೇಲೆ ಸುಷ್ಮಾ ಸ್ವರಾಜ್‌ ಅವರು ವಾರ್ತಾ ಮತ್ತು ಪ್ರಸಾರ ಖಾತೆಯ ಮಂತ್ರಿಯಾಗಿದ್ದಾಗ ಅವರದೇ ಆಸ್ಥೆಯಿಂದ ಸಾಪ್ತಾಹಿಕ ವಾರ್ತೆಯು ದೈನಂದಿನ ವಾರ್ತೆಯಾಗಿ ಬದಲಾಯಿತು. ಅಂದಿನಿಂದ ಬೆಳಗ್ಗೆ ಆಕಾಶವಾಣಿಯಲ್ಲಿ ಹಾಗೂ ಸಂಜೆ ದೂರದರ್ಶನದಲ್ಲಿ ವಾರ್ತೆಯನ್ನು ಓದುತ್ತಿದ್ದೆ.

ಪ್ರಶ್ನೆ: ನಿಮ್ಮ ಪ್ರಕಾರ, ಸಂಸ್ಕೃತ ಭಾಷೆಯ ಹಾಗೂ ಸಂಸ್ಕೃತ ಪತ್ರಿಕೋದ್ಯಮದ ಭವಿಷ್ಯ ಹೇಗಿದೆ ಅನ್ನಿಸುತ್ತದೆ?
ಸಂಸ್ಕೃತದ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಭಾಷಿಕರ ಸಂಖ್ಯೆ ಇಂದು ಗಣನೀಯವಾಗಿ ಹೆಚ್ಚುತ್ತಿರುವುದು ಸಂತಸದ ಸಂಗತಿ. ಆದರೆ, ಆಕಾಶವಾಣಿಯಾಗಲಿ, ದೂರದರ್ಶನವಾಗಲಿ ಕೇವಲ ಸಂಸ್ಕೃತ ವಾರ್ತೆಗಷ್ಟೇ ಸೀಮಿತವಾಗಿದೆ. ಸಂಸ್ಕೃತ ಕಾವ್ಯಗಳ, ನಾಟಕಗಳ, ಶಾಸ್ತ್ರೀಯ ಚರ್ಚೆಗಳ ಪ್ರಸಾರಗಳೂ ಆಗಬೇಕು. ಅಷ್ಟೇ ಅಲ್ಲ, ಯೋಗ, ಆಯುರ್ವೇದ, ವಾಸ್ತುಶಾಸ್ತ್ರ, ಜ್ಯೋತಿಷ ಶಾಸ್ತ್ರಗಳ ಬಗೆಗಿನ ಬೇಡಿಕೆ ಹೆಚ್ಚುತ್ತಿದೆ. ಈ ಎಲ್ಲ ವಿಷಯಗಳ ಬಗೆಗೆ ಲೇಖನಗಳು, ಪ್ರಾತ್ಯಕ್ಷಿಕೆಗಳು, ಸಂಶೋಧನೆಗಳು ಮಾಧ್ಯಮಗಳಲ್ಲಿ ಸ್ಥಾನವನ್ನು ಪಡೆಯಬೇಕು. ಪ್ರಪಂಚ ಮತ್ತೂಮ್ಮೆ ಸಂಸ್ಕೃತದತ್ತ ಹೊರಳುತ್ತಿದೆ. ಪ್ರಪಂಚದ ಅನೇಕ ದೇಶಗಳಲ್ಲಿ ಈಗ ಸಂಸ್ಕೃತಜ್ಞರ ಬೇಡಿಕೆಯೂ ಹೆಚ್ಚುತ್ತಿದೆ. ಜೊತೆಗೆ ಸಂಸ್ಕೃತ ಕಲಿತವನು ಯಾವುದೇ ಕ್ಷೇತ್ರದಲ್ಲಿ ಬಹುಬೇಗ ಹೊಂದಿಕೊಳ್ಳುತ್ತಾನೆ. ಸ್ಥಾನೀಯ ಭಾಷೆಗಳ ಪತ್ರಿಕೆಗಳಲ್ಲೂ ಶುದ್ಧವಾಗಿ ಬರೆಯುವವರು, ಶುದ್ಧವಾಗಿ ಉಚ್ಚರಿಸುವವರ ಅಗತ್ಯವಿದೆ. ಹಾಗಾಗಿ, ಸಂಸ್ಕೃತಜ್ಞರು ಪತ್ರಿಕೋದ್ಯಮದಲ್ಲಿ ಹೆಚ್ಚೆಚ್ಚು ಸೇರಿಕೊಳ್ಳುವಂತಾಗಬೇಕು. ಶುದ್ಧ ಪತ್ರಿಕೋದ್ಯಮ ಇದರಿಂದ ಸಾಧ್ಯ.

ಪ್ರಶ್ನೆ: ನಿವೃತ್ತಿಯ ಅನಂತರ ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೀರಿ?
ಆಕಾಶವಾಣಿಯಲ್ಲಿದ್ದಾಗಲೇ ಒಂದೂವರೆ ವರ್ಷಗಳ ಅವಧಿಯ ಅಭಿನಯದ ತರಗತಿಗೆ ಸೇರಿಕೊಂಡಿದ್ದೆನಾದ್ದರಿಂದ ರಂಗಭೂಮಿ ಚಟುವಟಿಕೆಯಲ್ಲಿ ಮೊದಲಿನಿಂದಲೂ ಸಕ್ರಿಯನಾಗಿದ್ದೆ. ಆಕಾಶವಾಣಿ, ದೂರದರ್ಶನಗಳಿಗಾಗಿ ಅನೇಕ ನಾಟಕಗಳನ್ನು ರಚಿಸಿ, ಅಭಿನಯಿಸುವ ಕೆಲಸದಲ್ಲಿ ಮೊದಲಿನಂತೆ ಈಗಲೂ ತೊಡಗಿಸಿಕೊಂಡಿದ್ದೇನೆ. ಜೊತೆಗೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕನಾಗಿ ಉಪನ್ಯಾಸಗಳನ್ನು ಕೊಡುತ್ತಿರುತ್ತೇನೆ. ಆಕಾಶವಾಣಿಯು ನನಗೆ ಕೊಟ್ಟಿರುವ ಜನಪ್ರಿಯತೆಯಿಂದಾಗಿ ಎಲ್ಲಿ ಹೋದರೂ ಜನ ಗುರುತಿಸುತ್ತಾರೆ. ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ. ಆಗೆಲ್ಲ ನನ್ನ ಜೀವನ ಧನ್ಯ ಎನಿಸುತ್ತದೆ. ಸಂಸ್ಕೃತ ಹಾಗೂ ಆಕಾಶವಾಣಿಗೆ ನಾನೆಂದಿಗೂ ಚಿರಋಣಿ.

* ಡಾ. ವಿಶ್ವನಾಥ ಸುಂಕಸಾಳ, ಸಂಸ್ಕೃತ ಉಪನ್ಯಾಸಕ, ತ್ರಿಪುರ

Advertisement

Udayavani is now on Telegram. Click here to join our channel and stay updated with the latest news.

Next