Advertisement

ಜಿಲ್ಲೆಯಲ್ಲಿ ವಿಶೇಷ ಆರೋಗ್ಯ ಸಮೀಕ್ಷೆ

02:40 PM Apr 18, 2020 | mahesh |

ಚಾಮರಾಜನಗರ: ಶೂನ್ಯ ಕೋವಿಡ್ -19 ಪಾಸಿಟಿವ್‌ ಹೊಂದಿರುವ ಜಿಲ್ಲೆಯಲ್ಲಿ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹಿರಿಯ ನಾಗರಿಕರು
ಹಾಗೂ 6ರಿಂದ 10 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಆರಂಭಿಸಲಾಗಿದೆ. ಜೊತೆಗೆ ತೀವ್ರ ಉಸಿರಾಟ ತೊಂದರೆ, ಶೀತದಂತಹ ಲಕ್ಷಣ
ಇರುವ ಪ್ರಕರಣಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ನಿರ್ದೇಶನದಂತೆ ಹಮ್ಮಿಕೊಂಡಿರುವ ಈ ಎರಡು ಬಗೆಯ ಸಮೀಕ್ಷೆ ಆರೋಗ್ಯ ಕಾಳಜಿಯಿಂದ ಕೂಡಿದೆ. ಗ್ರಾಮಮಟ್ಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯ ಕರ್ತೆಯರ ತಂಡ ಆಯಾ ಗ್ರಾಮದ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಮಕ್ಕಳು ಹಾಗೂ ವಯೋವೃದ್ಧರ ಆರೋಗ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Advertisement

ಸಮೀಕ್ಷೆ ವೇಳೆ ಗುರುತಿಸುವ ಪ್ರಕರಣಗಳಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಲಿದ್ದಾರೆ. ಜಿಲ್ಲೆಯಲ್ಲಿ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತೆಯರನ್ನೊಳಗೊಂಡ 1421 ಸಮೀಕ್ಷಾ ತಂಡಗಳನ್ನು ರಚಿಸಲಾಗಿದೆ. ಉಪಕೇಂದ್ರದ ವ್ಯಾಪ್ತಿಯಲ್ಲಿ ಹಿರಿಯ ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ನೇತೃತ್ವದಲ್ಲಿ
152 ಪರಿಶೀಲನಾ ತಂಡಗಳನ್ನು ರಚಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಮೇಲ್ವಿಚಾರಕಿಯರೊಡನೆ 62
ಮೇಲ್ವಿಚಾರಣಾ ತಂಡ ರಚಿಸಲಾಗಿದೆ.

ಈ ಮೂರು ಹಂತದ ಕೆಲಸ ಕಾರ್ಯಗಳನ್ನು ಪರಿಶೀಲಿಸಲು ತಾಲೂಕು ಮಟ್ಟದಲ್ಲಿ ತಾಲೂಕು ವೈದ್ಯಾಧಿಕಾರಿಗಳು, ಸಿಡಿಪಿಒಗಳೊಇಗೆ ಜವಾಬ್ದಾರಿ ನೀಡಲಾಗಿದೆ. ಕರ್ತವ್ಯ ಲೋಪವಾದರೆ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಎಪಿಡಮಿಕ್‌ ಡಿಸೀಸ್‌ ಕಾಯ್ದೆ-1897 ಪ್ರಕಾರ ಶಿಸ್ತುಕ್ರಮ ಕೈಗೊಳ್ಳುವುದಾಗಿ ಡೀಸಿ ಆದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಆರಂಭಿಸಿರುವ ಸಮೀಕ್ಷೆ ಅತ್ಯಂತ ಮಹತ್ವದ್ದಾಗಿದೆ. ಸಮೀಕ್ಷಾ ಕಾರ್ಯ20ರೊಳಗೆ ಪೂರ್ಣ ಗೊಳಿಸುವಂತೆ ಸೂಚಿಸಲಾಗಿದೆ. ಪ್ರತಿನಿತ್ಯ ಕೈಗೊಂಡ
ಸಮೀಕ್ಷಾ ವರದಿಯನ್ನು ನಿಗದಿತ ನಮೂನೆಗಳಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕೈಗೊಂಡಿರುವ ಸಮೀಕ್ಷಾ ಸಂದರ್ಭದಲ್ಲಿ ಜನರು ನಿಖರ ಮಾಹಿತಿ ನೀಡುವ
ಮೂಲಕ ಸಹಕರಿಸಬೇಕು.
● ಡಾ.ಎಂ.ಆರ್‌.ರವಿ, ಡೀಸಿ

● ಕೆ.ಎಸ್‌.ಬನಶಂಕರ ಆರಾಧ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next