ಬಂಟ್ವಾಳ : ಬಿ.ಸಿ. ರೋಡ್ ನಗರ ಕೇಂದ್ರ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸನಿಹ ಗೋಲ್ಡನ್ ಪಾರ್ಕ್‌ನಲ್ಲಿ ಜ. 25ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಉಜ್ವಲ ಗ್ಯಾಸ್ ಉಚಿತ ಸಂಪರ್ಕ ಫಲಾಭವಿಗಳ ಸಮಾವೇಶ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಮಾಹಿತಿ ಕಾರ್ಯಕ್ರಮಕ್ಕೆ ಜರ್ಮನ್ ಟೆಂಟ್ ಸಭಾಂಗಣವನ್ನು ಇದೇ ಮೊದಲ ಬಾರಿಗೆ ಬಂಟ್ವಾಳದಲ್ಲಿ ನಿರ್ಮಿಸಲಾಗಿದೆ.
ಮೈಸೂರಿನ ಸಂಸ್ಥೆ ಇದನ್ನು ಅನುಷ್ಠಾನಿ ಸಿದ್ದು, ಅವಶ್ಯ ಬಂದರೆ ಸಭಾಂಗಣವನ್ನು ಪೂರ್ಣ ಹವಾನಿಯಂತ್ರಿತವಾಗಿ ರೂಪಿಸಬಹುದಾಗಿದೆ.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ, ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶ ದಲ್ಲಿ ನಡೆಯುವ ಸಮಾವೇಶವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಉದ್ಘಾಟಿಸುವರು. ರಾಜ್ಯ ಸಚಿವ ರಮೇಶ ಜಿಗಜಿಣಗಿ, ವಿ.ಪ. ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಪ್ರಹ್ಲಾದ ಜೋಶಿ, ಜಿಲ್ಲೆಯ ಎಲ್ಲ ಶಾಸಕರ ಸಹಿತ ಪ್ರಮುಖರು ಭಾಗವಹಿಸುವರು.
ಸುಮಾರು 15 ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಆಗುವಂತೆ ಪ್ಲಾಸ್ಟಿಕ್ ಪೀಠೊ ಪಕರಣ ಸಜ್ಜಾಗಿದ್ದು, ಅಷ್ಟು ಮಂದಿಗೆ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ. 25 ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಸಭಾಂಗಣದ ನಡುವೆ ಕುಡಿಯುವ ನೀರು, ನಡುವೆ ಸಂಚರಿಸಲು 5 ಅಡಿಗಳ ದಾರಿಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮಟ್ಟ ಸಹಿತ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು, ಪತ್ರಕರ್ತರು, ಗಣ್ಯರಿಗೆ ಮೊದಲ ಸಾಲಿನಲ್ಲಿ ಸೋಫಾ ಮಾದರಿ ಪೀಠೊಪಕರಣ ಸಜ್ಜಾಗಿದೆ.
ಸಭಾಂಗಣದ ಒಳ ಹೊರಗೆ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ಪ್ರತ್ಯೇಕ ಬ್ಯಾಜ್ ನೀಡಿದ್ದು, ನಿರ್ದಿಷ್ಟ ಸ್ಥಳಗಳಿಗೆ ಅವರಿಗೆ ಮಾತ್ರ ಪ್ರವೇಶ ಅವಕಾಶವಿರುತ್ತದೆ. ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಕ್ಷೇತ್ರ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಸಹಿತ ಪಕ್ಷ ಪದಾಧಿಕಾರಿಗಳು ನೇತಾರರು ಸಮಾವೇಶ ಯಶಸ್ಸಿನ ಉಸ್ತುವಾರಿಯಲ್ಲಿದ್ದಾರೆ.
ವಿತರಕರು
ಸಮಾವೇಶದಲ್ಲಿ ವಿವಿಧ ಕಂಪೆನಿಗಳ ವಿತರಕರು ಭಾಗವಹಿಸಲಿದ್ದು, ಸ್ಥಳದಲ್ಲಿ ಗ್ಯಾಸ್ ಸಂಪರ್ಕಕ್ಕೆ ನೋಂದಾ ಯಿಸಲು ಬರುವ ಫಲಾನುಭವಿ ಗಳನ್ನು ಅರ್ಜಿಯನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದ ತನಕ ಅರ್ಜಿ ಸ್ವೀಕಾರ ನೋಂದಣಿ ನಡೆಯಲಿದೆ.