Advertisement

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

10:34 AM Jan 10, 2025 | Team Udayavani |

ಬೆಂಗಳೂರು: ತನ್ನ ಕೋಳಿಯನ್ನು ತಿಂದಿದೆ ಎಂಬ ಕಾರಣಕ್ಕೆ ಜರ್ಮನ್‌ ಶೆಫ‌ರ್ಡ್‌ ತಳಿಯ ನಾಯಿಯನ್ನು ದೊಣ್ಣೆಯಿಂದ ಮನಬಂದಂತೆ ಥಳಿಸಿ ಹತ್ಯೆಗೈದು ಕ್ರೌರ್ಯ ಮೆರೆದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದಿದೆ.

Advertisement

ವಿದ್ಯಾರಣ್ಯಪುರ ವಡೇರಹಳ್ಳಿ ನಿವಾಸಿ, ಅಂಗನವಾಡಿ ಆಶಾ ಕಾರ್ಯಕರ್ತೆಯೂ ಆಗಿರುವ ಪುಷ್ಪಲತಾ ಅವರು ಒಂದು ವರ್ಷದ ಜರ್ಮನ್‌ ಶೆಫ‌ರ್ಡ್‌ ಶ್ವಾನದ ಜೊತೆಗೆ ಹಸು ಹಾಗೂ ಕೋಳಿಗಳನ್ನು ಸಾಕುತ್ತಿದ್ದರು. ಪ್ರತಿದಿನ ಬೆಳಗ್ಗೆ ಅವುಗಳಿಗೆ ಆಹಾರ ನೀಡಿ ಅಂಗನವಾಡಿ ಕೆಲಸಕ್ಕೆ ಹೋಗುತ್ತಿದ್ದರು. ಡಿ.24ರಂದು ಮನೆಯ ಮುಂಭಾಗ ಸಾಕುನಾಯಿಯನ್ನು ಕಟ್ಟಿಹಾಕಿ ಪುಷ್ಪಲತಾ ಕೆಲಸಕ್ಕೆ ತೆರಳಿದ್ದರು. ಬಳಿಕ ಸಂಜೆ ಮನೆಗೆ ಹಿಂತಿರುಗಿದ ಪುಷಷ್ಪಲತಾ ಅವರು ತಮ್ಮ ಮನೆಯ ಮುಂದೆ ಕಟ್ಟಿಹಾಕಲಾಗಿದ್ದ ಜರ್ಮನ್‌ ಶೆಫ‌ರ್ಡ್‌ ತಳಿಯ ಶ್ವಾನದ ಕಣ್ಣು ಹಾಗೂ ಬಾಯಿ ಭಾಗದಲ್ಲಿ ರಕ್ತದ ಗಾಯವಾಗಿರುವುದು ಕಂಡು ಬಂದಿತ್ತು. ಗಂಭೀರ ಗಾಯಗೊಂಡಿದ್ದರಿಂದ ಚೇತರಿಸಿಕೊಳ್ಳದೆ ಜನವರಿ 3ರಂದು ನಾಯಿ ಮೃತಪಟ್ಟಿತ್ತು.

ಏಕಾಏಕಿ ತೀವ್ರ ರಕ್ತಗಾಯವಾಗಿ ಅನಾರೋಗ್ಯದಿಂದ ಜರ್ಮನ್‌ ಶೆಫ‌ರ್ಡ್‌ ನಾಯಿ ಮೃತಪಟ್ಟಿರುವುದಕ್ಕೆ ಅನುಮಾನ ಕೊಂಡ ಪುಷ್ಪಲತಾ ಮನೆ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದರು. ಅದರಲ್ಲಿ ಆರೋಪಿ ಮನೋಜ್‌, ನಾಯಿಗೆ ಕೋಲಿನಿಂದ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವುದು ಸೆರೆಯಾಗಿತ್ತು. ಈ ಹಲ್ಲೆ ಘಟನೆಯನ್ನು ಪ್ರಶ್ನಿಸಿದಾಗ ಮನೋಜ್‌ ಅಸಭ್ಯವಾಗಿ ಮಾತನಾಡಿ ತಮ್ಮ ಮೇಲೆಯೂ ಹಲ್ಲೆಗೆ ಯತ್ನಿಸಿರುವುದಾಗಿ ಪುಷ್ಪಲತಾ ದೂರಿನಲ್ಲಿ ವಿವರಿಸಿದ್ದಾರೆ.

ಪ್ರಕರಣ ಸಂಬಂಧ ಆರೋಪಿ ಮನೋಜ್‌ನನ್ನು ವಿಚಾರಣೆಗೊಳಪಡಿಸಿದಾಗ ತಾನೂ ಸಾಕುತ್ತಿದ್ದ ಕೋಳಿಯನ್ನು ಶ್ವಾನ ತಿಂದಿರುವುದು ಕಂಡುಬಂದಿತ್ತು. ಅದರಿಂದ ಅಕ್ರೋಶಗೊಂಡು ನಾಯಿಗೆ ಥಳಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?

Advertisement

 ಜರ್ಮನ್‌ ಶೆಫ‌ರ್ಡ್‌ ನಾಯಿ ಸಾಕಿದ್ದ ಮಹಿಳೆ

 ಕೋಳಿ ತಿಂದಿದೆ ಎಂದು ನಾಯಿಗೆ ಥಳಿಸಿದ ವ್ಯಕ್ತಿ

 ಗಂಭೀರ ಗಾಯಗೊಂಡು ಮೃತಪಟ್ಟ ಶ್ವಾನ

 ದಿಢೀರ್‌ ನಾಯಿ ಸತ್ತಿದ್ದಕ್ಕೆ ಸಿಸಿ ಕ್ಯಾಮೆರಾ ಪರಿಶೀಲನೆ

 ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿರುವುದು ಪತ್ತೆ

 ಠಾಣೆಗೆ ದೂರು ನೀಡಿದಾಗ ತಪ್ಪೊಪ್ಪಿಕೊಂಡ ಆರೋಪಿ

Advertisement

Udayavani is now on Telegram. Click here to join our channel and stay updated with the latest news.

Next