ಕುಂದಗೋಳ: ರೈತರ ವಿಶಿಷ್ಟ ಹಬ್ಬ ಕಾರಹುಣ್ಣಿಮೆ ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ಹಬ್ಬವೆನಿಸಿದೆ. ಅದರಲ್ಲೂ ಕುಂದಗೋಳದಲ್ಲಿ ನಡೆಯುವ ಕಾರಹುಣ್ಣಿಮೆಯನ್ನು ಶ್ರೀ ಬ್ರಹ್ಮದೇವರ ಅಗ್ರಪೂಜೆಯೊಂದಿಗೆ ವಿಶಿಷ್ಟ ಸಂಪ್ರದಾಯದಂತೆ ಆಚರಿಸಲಾಗುತ್ತದೆ.
ಹಿರಿಯರು ಹೇಳುವಂತೆ ಈಗ ಬ್ರಹ್ಮದೇವರ ಗುಡಿ ಇರುವ ಸ್ಥಳದ ಸುತ್ತಲೂ ದಟ್ಟವಾದ ಅರಣ್ಯವಿತ್ತು. ಅಲ್ಲಿ ವಾಸವಾಗಿದ್ದ ರಾಕ್ಷಸನೊಬ್ಬ ಇಲ್ಲಿಯ ಜನರಿಗೆ ಮೇಲಿಂದ ಮೇಲೆ ತೊಂದರೆ ಕೊಡುತ್ತಿದ್ದ. ಅವನ ಉಪಟಳ ತಾಳಲಾರದೆ ಸಂವಾರಕ್ಕಾಗಿ ಗ್ರಾಮಸ್ಥರು ಪಣ ತೊಟ್ಟು, ಗ್ರಾಮದ 14 ಜನ ವೀರ ಯುವಕರು ಎರಡು ಬಂಡಿಗಳಲ್ಲಿ ಬ್ರಹ್ಮದೇವರ ಗುಡಿಗೆ ಬಂದು ಪ್ರಾರ್ಥಿಸಿ ದೈವಿಶಕ್ತಿ ಪಡೆದು ರಾಕ್ಷಸ ಸಂಹರಿಸಿದರು. ಅಂದಿನಿಂದ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಆರಂಭಿಸಲಾಗಿದೆ ಎಂಬ ಪ್ರತೀತಿಯಿದೆ. ಇಲ್ಲಿಯ ಕಾರಹುಣ್ಣಿಮೆ ಹಬ್ಬ ನೋಡಲು ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯದಿಂದಲೂ ಜನರು ಆಗಮಿಸುತ್ತಾರೆ.
ಕುಂದಗೋಳದ ಕಾರಹುಣ್ಣಿಮೆ ಕರಿಬಂಡಿ ಉತ್ಸವದಲ್ಲಿ ಎರಡು ಕರಿಬಂಡಿಗಳು ಭಾಗವಹಿಸುತ್ತವೆ ಒಂದು ಬಂಡಿಯನ್ನು ಗೌಡರ ಬಂಡಿ, ಇನ್ನೊಂದು ಶ್ಯಾನಭೋಗರ ಬಂಡಿ ಎಂದೂ ಗುರುತಿಸುತ್ತಾರೆ. ಈಗಲೂ ಒಂದು ಬಂಡಿ ಅಲ್ಲಾಪೂರ ಮನೆತನದವರದು, ಮತ್ತೂಂದನ್ನು ಬಿಳೆಬಾಳ ಮನೆತನದ ವರದು. ಶ್ರೀ ಬ್ರಹ್ಮಲಿಂಗ ದೇವರಿಗೆ ವಿಶೇಷ ಹೋಮ-ಹವನ, ಪೂಜೆಗಳೊಂದಿಗೆ ಬಂಡಿ ಉತ್ಸವ ಜರುಗುತ್ತದೆ.
ಎರಡು ಬಂಡಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಬ್ರಹ್ಮದೇವರ ನಾಮಸ್ಮರಣೆ ಮಾಡುತ್ತ ಮಡಿ ಉಟ್ಟು ತಲೆಗೆ ವಿಶಿಷ್ಟವಾದ ಪೇಟಾ ತೊಟ್ಟು ಕೈಯಲ್ಲಿ ಬಿಚ್ಚುಗತ್ತಿ ಹಿಡಿದು ಝಳಪಿಸುತ್ತಾ “ಜಯಬ್ಯಹ್ಮ ಲಿಂಗೊಂ, ಲಕ್ಷ್ಮೀನರಸಿಂಹೊಂ’ ಎಂದು ಘೋಷಣೆಗಳೊಂದಿಗೆ ವೀರಗಾರರು ಬಂಡಿ ಹತ್ತಿ ಬ್ರಹ್ಮದೇವರ ದೇವಸ್ಥಾನಕ್ಕೆ ಬರುವುದನ್ನು ನೊಡಲು ಸಾವಿರಾರು ಜನರು ಕಾತುರದಿಂದ ಕಾಯುತ್ತ ಘೋಷಣೆ ಕೂಗುತ್ತಾರೆ.
ನಂತರ ರಾತ್ರಿ ಕರೋಗಲ್ ಮನೆಯಿಂದ ವೀರಗಾರರು ಪಂಜಿನ ಬೆಳಕಲ್ಲಿ ಶ್ರೀ ಬ್ರಹ್ಮದೇವರ ಗುಡಿಗೆ ನಡೆದುಕೊಂಡು ಆಗಮಿಸುವಾಗ ರಸ್ತೆಯುದ್ದಕ್ಕೂ ಭಕ್ತಾಧಿಗಳು ಭಕ್ತಿ ಭಾವದಿಂದ ದೀಡ ನಮಸ್ಕಾರ ಮಾಡುತ್ತ ಬ್ರಹ್ಮದೇವರ ಗುಡಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ವೀರಗಾರರು ಹೊರಗೆ ಬಂದ ನಂತರ ಜನರು ಅವರಿಗೆ ಸಕ್ಕರಿ ಹಂಚಿ ಭಕ್ತಿಭಾವದಿಂದ ನಮಿಸುತ್ತಾರೆ.
ಕುಂದಗೋಳ ಪಟ್ಟಣ ಐತಿಹಾಸಿಕವಾಗಿದ್ದು, ಸಂಗೀತ, ಕಲೆ, ಸೇರಿದಂತೆ ಕಾರಹುಣ್ಣಿಮೆ ಬಂಡಿ ಉತ್ಸವವು ಪ್ರಖ್ಯಾತಿ ಹೊಂದಿದೆ. ಇಲ್ಲಿಗೆ ಬರುವ ಜನರಿಗೆ ಉಳಿಯಲು ಸ್ಥಳ ಹಾಗೂ ಮೂಲಸೌಕರ್ಯ ಕೊರತೆಯಿಂದ ಕುಂದಗೋಳ ಹಿಂದೆ ಉಳಿಯುವಂತಾಗಿದೆ. ಈ ಭಾಗದ ಶಾಸಕರು, ಸಂಸದರು, ಜನಪ್ರತಿನಿ ಧಿಗಳು ಇಲ್ಲಿ ಯಾತ್ರಿನಿವಾಸ ನಿರ್ಮಿಸಿ, ಮೂಲಸೌಕರ್ಯ ಒದಗಿಸಿ ಪ್ರವಾಸಿ ತಾಣವಾಗಿ ಮಾಡಬೇಕು. –
ಸೋಮರಾವ್ ದೇಸಾಯಿ ಅಧ್ಯಕ್ಷ, ರೈತಸಂಘ ಶೀತಲ ಮುರಗಿ