ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…
ಆನೆ ದಂತ ಮತ್ತು ರೈನೋ ಕೋಡು ಮತ್ತೆ ಬೆಳೆಯುವುದೇ?
ಚೀನಾದಲ್ಲಿ ಒಮ್ಮೆ 1200 ಮಂದಿಯನ್ನು ಸಮೀಕ್ಷೆಗೊಳಪಡಿಸಿ, ಆನೆ ಕುರಿತು ಪ್ರಶ್ನೆಯನ್ನು ಕೇಳಲಾಯ್ತು. ಅವರಲ್ಲಿ ಶೇ.70ರಷ್ಟು ಮಂದಿ, ಆನೆಯ ದಂತ ತಾನಾಗಿಯೇ, ಯಾವುದೇ ನೋವಿಲ್ಲದೆ ಕಳಚಿಕೊಳ್ಳುತ್ತದೆಂದು ತಿಳಿದಿದ್ದರು. ಏಕೆಂದರೆ, ಅವರು ದಂತವನ್ನು ಹಲ್ಲು ಎಂದು ತಿಳಿದಿದ್ದರು. ಆದರೆ ಅವರು ತಿಳಿದುಕೊಂಡಿದ್ದರಲ್ಲಿ ಒಂದು ವಿಚಾರವಂತೂ ಸರಿಯಾಗಿತ್ತು.
ದಂತವನ್ನು ಮನುಷ್ಯ ಆನೆಯಿಂದ ಕಿತ್ತುಕೊಳ್ಳುತ್ತಾನೆ ಎಂದು ಅವರಿಗೆ ಗೊತ್ತಿಲ್ಲದಿದ್ದರೂ, ಆನೆಯ ದಂತ ಅದರ ಹಲ್ಲು ಎಂದು ತಿಳಿದಿದ್ದು ಸರಿಯಾಗಿಯೇ ಇತ್ತು. ಒಮ್ಮೆ ಕಿತ್ತ ದಂತ ಮತ್ತೂಮ್ಮೆ ಬೆಳೆಯುವುದಿಲ್ಲ. ಆನೆಯ ದಂತ ಮತ್ತೆ ಬೆಳೆಯುವ ಹಾಗಿದ್ದಿದ್ದರೆ ಮನುಷ್ಯ ಅದನ್ನು ಕೊಲ್ಲುತ್ತಿರಲಿಲ್ಲ ಎಂದು ಮಾತ್ರ ತಿಳಿಯಬೇಡಿ! ಏಕೆ ಗೊತ್ತಾ? ಆನೆಯ ದಂತದಷ್ಟೇ ಬೆಲೆಬಾಳುವ ಘೇಂಡಾಮೃಗದ (ರೈನೋಸಿರಸ್) ಕೋಡು ಒಮ್ಮೆ ತುಂಡರಿಸಿದರೆ ಮತ್ತೆ ಬೆಳೆಯುತ್ತದೆ.
ಆದರೂ ಘೇಂಡಾಮೃಗವನ್ನು ಕೊಂದು ಮನುಷ್ಯ ಅದರ ಕೋಡನ್ನು ಕದಿಯುತ್ತಾನೆ. ಇರಲಿ, ಘೇಂಡಾಮೃಗದ ಕೋಡು ಮತ್ತೆ ಬೆಳೆೆಯುವುದಕ್ಕೆ ಕಾರಣ, ಅದು ಕೆರಾಟಿನ್ ಎಂಬ ಅಂಶದಿಂದ ಮಾಡಲ್ಪಟ್ಟಿರುವುದು. ಕೆರಾಟಿನ್ ಎಂದರೆ ಕೂದಲಿನಲ್ಲಿರುವ ಅಂಶ. ಹೀಗಾಗಿ ಕತ್ತರಿಸಿದ ಕೂದಲು ಹೇಗೆ ಬೆಳೆಯುತ್ತದೆಯೋ, ಅದೇ ರೀತಿ ರೈನೋಸಿರಸ್‌ನ ಕೋಡು ಕೂಡಾ ಬೆಳೆಯುತ್ತದೆ.
ಮೈನಸ್ ತಾಪಮಾನದಲ್ಲೂ ಕಾವು ಕೊಡುವ ಪೆಂಗ್ವಿನ್‌ಗಳು
ಸಂಸಾರದಲ್ಲಿ ಪತಿ-ಪತ್ನಿ ಇಬ್ಬರೂ ಜವಾಬ್ದಾರಿಗಳನ್ನು ಸಮನಾಗಿ ಹಂಚಿಕೊಳ್ಳಬೇಕು ಎನ್ನುತ್ತಾರೆ. ಅದನ್ನು ಮನುಷ್ಯಜೀವಿಗಳು ಅದೆಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ ಪೆಂಗ್ವಿನ್‌ಗಳಂತೂ ಪಾಲಿಸುತ್ತಿವೆ. ಪೆಂಗ್ವಿನ್‌ಗಳಲ್ಲಿ ಮೊಟ್ಟೆ ಇಟ್ಟ ಬಳಿಕ ಹೆಣ್ಣುಗಳ ಕರ್ತವ್ಯ ಮುಗಿದುಹೋಗುತ್ತದೆ.
ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವ ಜವಾಬ್ದಾರಿ ಗಂಡಿನದು. ಹೆಣ್ಣು ಪೆಂಗ್ವಿನ್‌ಗಳು ಅಲ್ಲಿಯವರೆಗೆ ಬಹಳ ದೂರಕ್ಕೆ ಪ್ರಯಾಣ ಬೆಳೆಸುತ್ತವೆ. ಮರಿಯಾದ ನಂತರವೇ ಅವು ಹಿಂದಿರುಗುವುದು. ಕೋಳಿ ಮೊಟ್ಟೆ ಇಟ್ಟ ನಂತರ ಮೂರು ನಾಲ್ಕು ವಾರಗಳಲ್ಲಿ ಕೋಳಿ ಮರಿಗಳು ಹೊರಬರುತ್ತವೆ. ಆದರೆ ಪೆಂಗ್ವಿನ್‌ಗಳಿರುವುದು ದಕ್ಷಿಣ ಧ್ರುವ ಪ್ರದೇಶವಾದ್ದರಿಂದ ಅಲ್ಲಿ ತಾಪಮಾನ ಬಹುತೇಕ ಸಮಯ ಸೊನ್ನೆಗಿಂತಲೂ ಕೆಳಗಿರುತ್ತದೆ (ಸಬ್ ಜೀರೋ) ಎನ್ನುವುದನ್ನು ನೆನಪಿಡಬೇಕು.
ಈ ತಾಪಮಾನದಲ್ಲಿ ಮೊಟ್ಟೆಗೆ ಕಾವು ಕೊಡುವುದು ಎಂದರೆ ಬಿರುಗಾಳಿ ಮಧ್ಯೆ ಬೆಂಕಿ ಹಚ್ಚುವಷ್ಟೇ ಕಷ್ಟ. ಆದರೆ, ಅಂಥ ಕ್ಲಿಷ್ಟಕರ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗುತ್ತವೆ ಗಂಡು ಪೆಂಗ್ವಿನ್‌ಗಳು! ಅದು ಹೇಗೆಂದರೆ, ಮೊಟ್ಟೆಗಳನ್ನು ತಮ್ಮ ಕಾಲುಗಳ ಮೇಲೆ ಇರಿಸಿ, ಎದೆಯ ಭಾಗಕ್ಕೆ ಒತ್ತಿ ಹಿಡಿಯುತ್ತವೆ. ಆ ಭಾಗದಲ್ಲಿ ಕೂದಲುಗಳಿರುವುದಿಲ್ಲ, ಚರ್ಮವಿರುತ್ತದೆ. ದೇಹದ ಉಷ್ಣ ಆ ಭಾಗದ ಮುಖಾಂತರ ಮೊಟ್ಟೆಯನ್ನು ತಲುಪುತ್ತದೆ.
— ಹರ್ಷವರ್ಧನ್ ಸುಳ್ಯ