ಮಂಗಳೂರು: ದೇಶದ ಒಂಬತ್ತನೆಯ ಬಂದರು ಹಾಗೂ ವಿವಿಧ ಕೈಗಾರಿಕಾ ಕ್ಷೇತ್ರಗಳ ಮೂಲಕ ಕರ್ನಾಟಕ ಕರಾವಳಿಯ ಪ್ರಗತಿಯ ಹೆಬ್ಟಾಗಿಲು ಎಂದೇ ಜನಜನಿತವಾದ ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವೇ ಮಂಗಳೂರು ಉತ್ತರ. ಆರ್ಥಿಕ ಕ್ಷೇತ್ರವಾಗಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಹಲವಾರು ಚುನಾ ವಣಾ ವೈಶಿಷ್ಟ್ಯಗಳ ಮೂಲಕವೇ ಗುರುತಿಸಿಕೊಂಡಿದೆ. ನವಮಂಗಳೂರು ಬಂದರು, ಎಂಆರ್‌ಪಿಎಲ್, ಒಎನ್‌ಜಿಸಿ, ಪೆರ್ಮುದೆ ತೈಲ ಸಂಗ್ರಹಾಗಾರ ಘಟಕ ಹಾಗೂ ಸಾವಿರಾರು ಕಾರ್ಖಾನೆಗಳ ಮೂಲಕ ಕೈಗಾರಿಕಾ ವಲಯವನ್ನು ತನ್ನೊಳಗೆ ಇಟ್ಟುಕೊಂಡಿರುವ ಈ ಕ್ಷೇತ್ರವು ಉದ್ಯಮ ಕ್ಷೇತ್ರದಲ್ಲಿ ದೇಶದ ಮುಂಚೂಣಿಯ ಸ್ಥಳವಾಗಿ ಗುರುತಿಸಿಕೊಂಡಿದ್ದು, ಈಗ ಚುನಾವಣಾ ರಂಗು ಕಳೆಗಟ್ಟುತ್ತಿದೆ. ಇದು 2008ರವರೆಗೆ ಸುರತ್ಕಲ್ ಕ್ಷೇತ್ರವಾಗಿಯೇ ಗುರುತಿಸಿಕೊಂಡಿತ್ತು. ಆದರೆ 2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆಯಲ್ಲಿ ಈ ಕ್ಷೇತ್ರದ ಹೆಸರು ಬದಲಾಯಿತು. ಹೀಗಾಗಿ ಸುರತ್ಕಲ್ ‘ಮಂಗಳೂರು ನಗರ ಉತ್ತರ’ ವಿಧಾನಸಭಾ ಕ್ಷೇತ್ರವಾಗಿ ಮರು ನಾಮಕರಣಗೊಂಡಿತು. ಮಂಗಳೂರು ನಗರಕ್ಕೆ ಹೊಂದಿಕೊಂಡಿರುವ ಈ ಕ್ಷೇತ್ರವು ಮಂಗಳೂರು ಪಾಲಿಕೆಯ 60 ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಒಳಗೊಂಡಿದೆ.
1957ರಲ್ಲಿ ಮೈಸೂರು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸುರತ್ಕಲ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಆರ್. ಕರ್ಕೇರಾ (15,629 ಮತಗಳು) ಅವರು ಪ್ರಜಾ ಸೋಶಲಿಸ್ಟ್ ಪಕ್ಷದ (ಪಿಎಸ್ಪಿ) ಸಂಜೀವನಾಥ ಐಕಳ (11,789 ಮತ) ಅವರ ವಿರುದ್ಧ ಜಯ ಗಳಿಸಿದ್ದರು. 1962ರಲ್ಲಿ ಐಕಳ ಅವರು ಜಯ ಗಳಿಸಿದರು. 1967ರಲ್ಲಿ ಇದೇ ಪಕ್ಷದ ಪಿ.ವಿ. ಐತಾಳ ಅವರು ಗೆಲುವು ದಾಖಲಿಸಿದ್ದರು. ಅವರ ಎದುರಾಳಿ ಕಾಂಗ್ರೆಸ್‌ನ ಕೆ.ಎನ್. ಆಳ್ವ ಸೋಲು ಅನುಭವಿಸಿದ್ದರು. ಈ ಕ್ಷೇತ್ರದ ವಿಶೇಷವೆಂದರೆ, ಎರಡು ಬಾರಿ ಮಾಜಿ ಸ್ವಾತಂತ್ರ್ಯ ಹೋರಾಟಗಾರರನ್ನು ಚುನಾಯಿಸಿದ ಖ್ಯಾತಿ ಇಲ್ಲಿಗೆ ಸಲ್ಲುತ್ತದೆ. 1962ರಲ್ಲಿ ಸಂಜೀವನಾಥ ಐಕಳ ಹಾಗೂ 1983ರಲ್ಲಿ ಎಂ. ಲೋಕಯ್ಯ ಶೆಟ್ಟಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 2004 (ಆಗಿನ ಸುರತ್ಕಲ್) ಹಾಗೂ 2008ರಲ್ಲಿ (ಈಗಿನ ಮಂಗಳೂರು ಉತ್ತರ) ಬಿಜೆಪಿಯ ಕೃಷ್ಣ ಜೆ. ಪಾಲೆಮಾರ್ ಜಯ ದಾಖಲಿಸಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಪರಿಸರ ಜೀವಿಶಾಸ್ತ್ರ ಸಚಿವರಾಗಿಯೂ ಗುರುತಿಸಿಕೊಂಡಿದ್ದರು. ಇದೇ ಕ್ಷೇತ್ರದಲ್ಲಿ ಶಾಸಕರಾಗಿದ್ದ ಬಿ. ಸುಬ್ಬಯ್ಯ ಶೆಟ್ಟಿ ಅವರು ಕೂಡ ಸಚಿವರಾಗಿದ್ದರು. ಇವೆರಡು ಈ ಕ್ಷೇತ್ರಕ್ಕೆ ದೊರಕಿದ ಸಚಿವ ಸ್ಥಾನಗಳಿಗೆ ಉದಾಹರಣೆ.
ಪ್ರಸ್ತುತ ಮಂಗಳೂರು ಉತ್ತರದಲ್ಲಿ ಚುನಾವಣಾ ಕಾವು ತೀವ್ರಗೊಳ್ಳುತ್ತಿದೆ. ಕಳೆದ 5 ವರ್ಷದಲ್ಲಿ ನಡೆದ ಒಂದೊಂದು ವಿಚಾರಗಳು ಕೂಡ ಇಲ್ಲಿ ಬೇರೆ ಬೇರೆ ಪಕ್ಷಗಳಿಗೆ ಚುನಾವಣಾ ಪ್ರಚಾರದ ತಂತ್ರವಾಗಿ ಕಾಣಿಸುತ್ತಿವೆ. ಜತೆಗೆ ಹಲವು ವಿಚಾರಗಳ ಕಾರಣಕ್ಕಾಗಿ ಈ ಕ್ಷೇತ್ರವು ರಾಜ್ಯಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಹೀಗಾಗಿ ಇಲ್ಲಿ ಯಾರು, ಯಾರಿಗೆ ಒಲವು ತೋರುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವುದೇ ಕಷ್ಟಸಾಧ್ಯ. ಇಲ್ಲಿ ಕಾಂಗ್ರೆಸ್ ಟಿಕೆಟ್ ಬಿ.ಎ. ಮೊದಿನ್ ಬಾವಾ ಅವರಿಗೆ ಫೈನಲ್ ಆಗಿದ್ದು, ರವಿವಾರ ರಾತ್ರಿ ಅಂತಿಮ ಪ್ರಕಟನೆ ಹೊರಬಿದ್ದಿದೆ. ಬಾವಾ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ. 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
2013ರಲ್ಲಿ ಬಿಜೆಪಿಯ ಪಾಲೆಮಾರ್ ಅವರನ್ನು ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ದಾಖಲಿಸಿದ್ದರು. ಈ ಬಾರಿ ಬಾವಾ ಅವರಿಗೆ ಮೂರನೇ ಸ್ಪರ್ಧೆ. ಉಳಿದಂತೆ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಸತ್ಯಜಿತ್ ಸುರತ್ಕಲ್, ಭರತ್ ಶೆಟ್ಟಿ, ರಾಮಚಂದ್ರ ಬೈಕಂಪಾಡಿ ಹೆಸರು ಪ್ರಮುಖವಾಗಿ ಇಲ್ಲಿ ಬಿಜೆಪಿ ವಲಯದಿಂದ ಕೇಳಿಬರುತ್ತಿದ್ದು, ಒಂದೆರಡು ದಿನದಲ್ಲಿ ಅಂತಿಮ ಹೆಸರು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಒಂದು ವೇಳೆ ಪಾಲೆಮಾರ್ ಅವರಿಗೆ ಟಿಕೆಟ್ ದೊರೆತರೆ ಅವರದ್ದು ನಾಲ್ಕನೇ ಸ್ಪರ್ಧೆ. 2004, 2008ರಲ್ಲಿ ಗೆಲುವು ಪಡೆದಿದ್ದ ಪಾಲೆಮಾರ್, 2013ರಲ್ಲಿ ಸೋಲು ಅನುಭವಿಸಿದ್ದರು. ಈ ಮಧ್ಯೆ ಸಿಪಿಐಎಂನಿಂದ ಮುನೀರ್ ಕಾಟಿಪಳ್ಳ ಅವರು ಎಲ್ಲರಿಗಿಂತಲೂ ಮೊದಲೇ ತಮ್ಮ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಉಳಿದಂತೆ ಜೆಡಿಎಸ್, ಎಸ್.ಡಿ.ಪಿ.ಐ. ಇಲ್ಲಿ ಸ್ಪರ್ಧೆಯ ನಿರೀಕ್ಷೆಯಲ್ಲಿವೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಹಲವಾರು ರೀತಿಗಳಲ್ಲಿ ಗುರುತಿಸಿಕೊಂಡಿರುವ ಮಧ್ಯೆಯೇ ಚುನಾವಣಾ ಆಯೋಗವೂ ಈ ವರ್ಷ ಈ ಕ್ಷೇತ್ರದ ಚುನಾವಣೆಯ ಮೇಲೆ ವಿಶೇಷವಾಗಿ ಕಣ್ಣಿಟ್ಟಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಂತೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವನ್ನು ಕೂಡ ಚುನಾವಣಾ ವೆಚ್ಚ ಸೂಕ್ಷ್ಮ ಪ್ರದೇಶ ಎಂದು ಆಯೋಗ ಪರಿಗಣಿಸಿದೆ.
ಸುರತ್ಕಲ್- ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು:
1957-ಬಿ.ಆರ್. ಕರ್ಕೇರಾ – (ಕಾಂಗ್ರೆಸ್), 1962 – ಸಂಜೀವನಾಥ್ ಐಕಳ-(ಪಿಎಸ್‌ಪಿ), 1967 – ಪಿ.ವಿ. ಐತಾಳ – (ಪಿಎಸ್‌ಪಿ), 1972 – ಬಿ. ಸುಬ್ಬಯ್ಯ ಶೆಟ್ಟಿ – (ಕಾಂಗ್ರೆಸ್), 1978 – ಬಿ. ಸುಬ್ಬಯ್ಯ ಶೆಟ್ಟಿ-(ಕಾಂಗ್ರೆಸ್), 1983-ಎಂ.ಲೋಕಯ್ಯ ಶೆಟ್ಟಿ-(ಜನತಾ ಪಕ್ಷ), 1985-ಎನ್.ಎಂ.ಅಡ್ಯಂತಾಯ – (ಕಾಂಗ್ರೆಸ್), 1989 – ಕೆ. ವಿಜಯ್ ಕುಮಾರ್ ಶೆಟ್ಟಿ – (ಕಾಂಗ್ರೆಸ್), 1994 – ಕುಂಬ್ಳೆ ಸುಂದರ ರಾವ್ – (ಬಿಜೆಪಿ), 1999-ಕೆ. ವಿಜಯ ಕುಮಾರ್ ಶೆಟ್ಟಿ – (ಕಾಂಗ್ರೆಸ್), 2004-ಜೆ.ಕೃಷ್ಣ ಪಾಲೆಮಾರ್ – (ಬಿಜೆಪಿ), 2008-ಜೆ. ಕೃಷ್ಣ ಪಾಲೆಮಾರ್ – (ಬಿಜೆಪಿ), 2013- ಮೊದಿನ್ ಬಾವಾ – (ಕಾಂಗ್ರೆಸ್).
— ದಿನೇಶ್ ಇರಾ