Advertisement

ಸವಾಲ್‌ ನಮ್ದು, ಸೀರೆ ನಿಮ್ದು : ರೈನ್‌ ಮೈನ್‌ ಕನ್ನಡ ಸಂಘದಿಂದ ವಿಶೇಷ ಕಾರ್ಯಕ್ರಮ

06:18 PM Apr 07, 2021 | Team Udayavani |

ಫ್ರಾಂಕ್‌ ಫ‌ರ್ಟ್‌ :  ಮಹಿಳಾ ದಿನಾಚರಣೆ ಅಂಗವಾಗಿ ಜರ್ಮನಿಯ ಫ್ರಾಂಕ್‌ಫ‌ರ್ಟ್‌ ರೈನ್‌ಮೈನ್‌ ಕನ್ನಡ ಸಂಘದಿಂದ ಮಾ. 21ರಂದು  ಮಹಿಳೆಯರಿಗಾಗಿಯೇ “ಸವಾಲ್‌ ನಮ್ದು ಸೀರೆ ನಿಮ್ದು ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.

Advertisement

ಕರ್ನಾಟಕದ ವಿವಿಧೆಡೆ ಕಳೆದ 12 ವರ್ಷಗಳಿಂದ ಸುಮಾರು 400ಕ್ಕೂ ಹೆಚ್ಚು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿರುವ ಅನುಷಾ ಲಕ್ಕಣ ಅವರು ಸಂಘದ ಮಹಿಳೆಯರಿಗೆ ಒಂದು ಸಂತಸದ ಸಂಜೆಗೆ ವೇದಿಕೆ ಒದಗಿಸಿದರು.

ಕಾರ್ಯಕ್ರಮದಲ್ಲಿ ಸೇರಿದ್ದ ಮಹಿಳೆಯರನ್ನು ಸಮಾನವಾಗಿ 5 ಗುಂಪುಗಳಾಗಿ ವಿಂಗಡಿಸಿ ಆ ಗುಂಪುಗಳಿಗೆ ನಮ್ಮ ರಾಷ್ಟ್ರದ ನದಿಗಳಾದ ಕಾವೇರಿ, ವರದಾ, ಶರಾವತಿ, ತುಂಗಭದ್ರಾ ಮತ್ತು ಸೌಪರ್ಣಿಕಾ ಹೆಸರನ್ನು ನೀಡಲಾಯಿತು. ಅನುಷಾ ಅವರು ಲವಲವಿಕೆಯಿಂದ ಎಲ್ಲರ ಮನರಂಜಿಸುತ್ತ ಬಲು ಸೊಗಸಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಮೊದಲನೇ ಸುತ್ತಿನಲ್ಲಿ ಕರ್ನಾಟಕ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಲಾಯಿತು. ಟಂಗ್‌ ಟ್ವಿಸ್ಟರ್‌ ರೌಂಡ್‌ ಹೇಳುವವರ ನಾಲಗೆಗೆ ಒಳ್ಳೆಯ ಕೆಲಸ, ಕೇಳುವವರ ಮನಸ್ಸಿಗೆ ಒಳ್ಳೆಯ ಮೋಜನ್ನು ಉಂಟು ಮಾಡಿತು.

ಕರ್ನಾಟಕದ ಹೆಸರಾಂತ ಮಹಿಳೆಯರ ಬಗ್ಗೆ ಪ್ರಶ್ನೋತ್ತರ ಸುತ್ತಿನಲ್ಲಿ ಜನರಿಗೆ ಸೇವೆ ಸಲ್ಲಿಸುತ್ತಿರುವ, ಸಾಹಿತ್ಯ ಕ್ಷೇತ್ರದಲ್ಲೂ ಪ್ರಸಿದ್ಧರಾದ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ,  ಪರಿಸರವಾದಿ,  ಸಾವಿರಾರು  ಸಸಿಗಳನ್ನು ನೆಟ್ಟಿರುವ  ಸಾಲು ಮರದ ತಿಮ್ಮಕ್ಕ, ಕರ್ನಾಟಕದ ಹೈಕೋರ್ಟ್‌ನ ಪ್ರಥಮ ಮಹಿಳಾ ನ್ಯಾಯಾಧೀಶೆ, ಕನ್ನಡದ ಮೊದಲ ಕವಯತ್ರಿ ಕುರಿತಾಗಿ  ಹಲವಾರು ಸವಾಲುಗಳನ್ನು ಕೇಳಿದರು.

Advertisement

ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದ  ಶೆರ್ಲಿ ಅವರು ಆನ್‌ಲೈನ್‌ ಮೂಲಕ ಎಲ್ಲರನ್ನೂ ಭೇಟಿ, ತಮ್ಮ ಮಳಿಗೆಯಲ್ಲಿರುವ ಸೀರೆ, ಒಡವೆಗಳು, ಗಂಡು ಮಕ್ಕಳ ಉಡುಪುಗಳ ಸಂಗ್ರಹದ ಕುರಿತಾಗಿ ಒಂದು ಪುಟ್ಟ ವೀಡಿಯೋ ಅನ್ನು ಪ್ರದರ್ಶಿಸಿದರು.

ಮುಂದೆ, ವಿಧವಿಧವಾದ ಸೀರೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಫ್ರಾಂಕ್‌ಫ‌ರ್ಟ್‌ನ  ಮಹಿಳೆಯರು ಅತಿ ಉತ್ಸುಕತೆಯಿಂದ ಉತ್ತರ ನೀಡಿದರು.

ಸೀರೆ ನೋಡಿ ಬೆಲೆ ಹೇಳಿ ಕೊನೆಯ ಸುತ್ತಿನಲ್ಲಿ  ಹೆಣ್ಣು ಮಕ್ಕಳ ಪ್ರೀತಿಯ ಉಡುಪಾದ ಮೈಸೂರ್‌ ಸಿಲ್ಕ… ಸೀರೆಯ ನಿಖರ ಬೆಲೆಯನ್ನು ಊಹಿಸುವ ಖುಷಿ ಹಾಗೂ ಉತ್ತರ ತಿಳಿಯುವ  ಕುತೂಹಲ ಎಲ್ಲರ ಮುಖದಲ್ಲಿ ಕಾಣಲಾಗಿತ್ತು. ಚರ್ಚೆ ಮೇಲೆ ಚರ್ಚೆಗಳು ನಡೆಯುತ್ತಲೇ ಇದ್ದವು.

ಎಲ್ಲರಿಗೂ ಮುದ ನೀಡಿದ ಈ ರಸಸಂಜೆ  ಕಾರ್ಯಕ್ರಮವು ಲಕ್ಕೀ ಡ್ರಾ ಮೂಲಕ ಸೀರೆ ಗೆಲ್ಲುವ 5 ವಿಜೇತರನ್ನು ಆರಿಸುವ ಮೂಲಕ ಮುಕ್ತಾಯಗೊಂಡಿತು.

ಸಂತಸ ಭರಿತ ಸಂಜೆ:

ತಮ್ಮ ಚೆನ್ನೈ – ಬೆಂಗಳೂರು ಪ್ರಯಾಣ ಮುಗಿದರೂ ಹೆಣ್ಣು ಮಕ್ಕಳ ಸೀರೆ ಚರ್ಚೆ ಕೊನೆ ತಲುಪಿರಲು  ಸಾಧ್ಯವಿಲ್ಲವೆಂದು ಊಹಿಸಿದ್ದರು ಮುಖ್ಯ ಅತಿಥಿ ವಾಸುಕಿ ವೈಭವ. ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ , ಗಾಯಕ, ನಟ , ಬಿಗ್‌ಬಾಸ್‌ 7ರ ಸ್ಪರ್ಧಿ ವಾಸುಕಿ ವೈಭವ ಅವರು ಫ್ರಾಂಕ್‌ಫ‌ರ್ಟ್‌ನ ಬೆಡಗಿಯರ ಮನವನ್ನು ಗೆಲ್ಲಲು ಬಂದಿದ್ದರು. ಅತಿ ಸರಳವಾಗಿ ಎಲ್ಲರನ್ನು ಮಾತನಾಡಿಸುತ್ತಾ, ಅವರ ಹಾಡುಗಳಿಂದ ಎಲ್ಲರ ಮನರಂಜಿಸಿದರು.

 

 – ರಮ್ಯಾ ಲಕ್ಷ್ಮೀಶ, ಫ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next