Advertisement

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ

09:25 PM Sep 25, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹೆಚ್ಚಿಸುವ ದಿಸೆಯಲ್ಲಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರತಿ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ವಿಶೇಷ ತರಗತಿಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಆರ್‌.ಲತಾ ಪ್ರೌಢ ಶಾಲೆ ಮುಖ್ಯ ಶಿಕ್ಷಕರಿಗೆ ಸೂಚಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಶೈಕ್ಷಣಿಕ ಕಾರ್ಯಪಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ವೃದ್ಧಿಸಬೇಕಾದರೆ ಕಲಿಕೆಯಲ್ಲಿ ನಿಧಾನಗತಿ ಇರುವ ಮಕ್ಕಳನ್ನು ಗುರುತಿಸಿ, ಅವರಿಗೆ ವಿಶೇಷ ತರಗತಿಗಳನ್ನು ಆಯೋಜಿಸುವುದು ಬಹಳ ಮುಖ್ಯ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಗುರುತಿಸುವಿಕೆಗೆ ಪ್ರತಿ ಶಾಲೆಯಲ್ಲಿ ಕಿರು ಪರೀಕ್ಷೆ ನಡೆಸಬೇಕು ಎಂದು ಹೇಳಿದರು.

ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸದೇ ನಾವು ಎಲ್ಲ ಮಕ್ಕಳಿಗೆ ಒಂದೇ ರೀತಿ ಪಾಠ, ಪ್ರವಚನಗಳನ್ನು ಮಾಡುವುದು ಸರಿಯಲ್ಲ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಪಠ್ಯ ಬೋಧನೆ ಅಗತ್ಯವಾಗಿದೆ. ಈ ರೀತಿಯ ಕ್ರಮದಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕೂಡ ಕಲಿಕೆಯಲ್ಲಿ ಮುಂದುವರಿದ ಮಕ್ಕಳ ಸಮಾನವಾಗಿ ಫ‌ಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಶೇ.25 ಅಂಕಗಳಿಗೆ ಕಿರುಪರೀಕ್ಷೆಯನ್ನು ನಡೆಸಬೇಕು.

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ವಿದ್ಯಾರ್ಥಿಗಳ ಪಾಲಿಗೆ ಹೆಚ್ಚಿನ ಮಹತ್ವದಾಗಿರುವುದರಿಂದ ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರತಿ ಶನಿವಾರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೂ ಪಾಠ, ಪ್ರವಚನಗಳನ್ನು ನಡೆಸಬೇಕು. ಮಕ್ಕಳಿಗಾಗಿಯೆ ವಿಶೇಷ ಪಠ್ಯ ರೂಪಿಸಬೇಕು. ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಹೇಳಬೇಕು. ಶಾಲೆಗಳಲ್ಲಿ ಕೊರತೆ ಇರುವ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಬಗೆಹರಿಸಲಾಗುವುದು.

ಈಗಾಗಲೇ ಶಾಲಾ ಶಿಕ್ಷಕರ ಸಮಸ್ಯೆ ತಿಳಿಯಲು ಮುಂದಿನ ತಿಂಗಳಲ್ಲಿ ಪ್ರತಿ ತಾಲೂಕಿನಲ್ಲಿ ಶಿಕ್ಷಣ ಅದಾಲತ್‌ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಗಳಿಗೆ ರೂಪಿಸಿರುವ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

Advertisement

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌, ವಿಷಯ ಪರಿವೀಕ್ಷಕರಾದ ಶಿವಲಿಂಗಯ್ಯ, ಶಿವಪುತ್ರಪ್ಪ, ಜಿಲ್ಲೆಯ ಅನುದಾನಿಕ ಶಾಲೆಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲೆಯ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಜಿಲ್ಲಾ ಶೈಕ್ಷಣಿಕ ಕಾರ್ಯಪಡೆ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಶೈಕ್ಷಣಿಕ ಕಾರ್ಯ ಪಡೆ ಸಲಹೆಗಾರರಾದ ಬೆಂಗಳೂರಿನ ಆರ್‌.ವಿ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜಯ್ಯ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ಮಾಡದೇ ಫ‌ಲಿತಾಂಶ ಸುಧಾರಿಸಲು ಸಾಧ್ಯವಿಲ್ಲ.

ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಸುಧಾರಣೆ ಜೊತೆಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ವಿದ್ಯಾರ್ಥಿಗಳಿಗೆ ತಿಂಗಳ ಕಿರು ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಬೇಕೆಂದರು. ವಸತಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಇರುವ ಮಕ್ಕಳಿಗೆ ರಾತ್ರಿ ಪಾಳೆಯಲ್ಲಿ ವಿಶೇಷ ತರಗತಿಗಳನ್ನು ಆಯೋಜಿಸಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next