ಬೆಂಗಳೂರು: ರಾಜ್ಯದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಧ್ಯಾವಧಿ ರಜೆಯಲ್ಲಿ ಅ. 8ರಿಂದ 17ರ ವರೆಗೆ ವಿಶ್ವಾಸ ಕಿರಣ ವಿಶೇಷ ತರಬೇತಿ ಆಯೋಜಿಸಲಾಗಿದೆ.
ಪಿಯುಸಿಗೆ ರಾಷ್ಟ್ರೀಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆ ಹಾಗೂ ರಾಷ್ಟ್ರಮಟ್ಟದಲ್ಲಿ ಉನ್ನತ ಶಿಕ್ಷಣ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸರಕಾರಿ ಪಿಯು ಕಾಲೇಜಿನ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಈ ವಿಶೇಷ ತರಗತಿ ನಡೆಸಲಾಗುತ್ತದೆ. ಈ ತರಗತಿಯಲ್ಲಿ ಭಾಗವಹಿಸಿ, ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ವಿಶೇಷ ಬಹುಮಾನ ನೀಡಲಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಧೈರ್ಯ ತುಂಬುವುದು ಮತ್ತು ಪಿಯು ಫಲಿತಾಂಶವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮೂಲ ಗುರಿಯಾಗಿದೆ. ರಾಜ್ಯದ ಪ್ರತಿ ತಾಲೂಕು ಕೇಂದ್ರದ ನೋಡಲ್ ಕಾಲೇಜು ಗುರುತಿಸಿ, ಅಲ್ಲಿಯೇ ತರಬೇತಿ ಕಾರ್ಯಕ್ರಮ ನಡೆಸಲಿದ್ದಾರೆ.
ಆಯಾ ತಾಲೂಕಿನ ಸರಕಾರಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ವಿಶೇಷ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದ ವಿಷಯಗಳಲ್ಲಿ ವಿಶೇಷ ತರಬೇತಿ ನಡೆಸಲಾಗುತ್ತದೆ. ಇದರ ಜವಾಬ್ದಾರಿಯನ್ನು ಜಿಲ್ಲಾ ಪಿಯು ಉಪನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು ನೋಡಿಕೊಳ್ಳಲಿದ್ದಾರೆ.
ಪ್ರತಿ ತರಗತಿಗೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ 40 ವಿದ್ಯಾರ್ಥಿಗಳನ್ನು ಸೇರಿಸಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಪ್ರತಿ ವಿಷಯದಲ್ಲಿ ಕನಿಷ್ಠ 15 ವಿದ್ಯಾರ್ಥಿ ಇರಲೇ ಬೇಕು. ಪ್ರತಿದಿನ 90 ನಿಮಿಷದ ನಾಲ್ಕು ತರಗತಿ ನಡೆಸಲು ಇಲಾಖೆಯಿಂದ ತಿಳಿಸಲಾಗಿದೆ. ಬೆಳಗ್ಗೆ 10 ರಿಂದ ಸಂಜೆ 4.30ರ ತನಕ ತರಗತಿ ಇರುತ್ತದೆ. ಬೇರೆ ಬೇರೆ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ವೇಳಾಪಟ್ಟಿ ಸಿದ್ಧಪಡಿಸಬೇಕು ಮತ್ತು ಬಯೊಮೆಟ್ರಿಕ್ ಹಾಜರಾತಿ ಪಡೆಯುವಂತೆ ಇಲಾಖೆಯಿಂದ ನಿರ್ದೇಶಿಲಾಗಿದೆ.