Advertisement

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

11:05 PM Jun 02, 2024 | Team Udayavani |

-ಸಂಖ್ಯಾಜ್ಞಾನ, ಅಕ್ಷರದ ಅರಿವಿಲ್ಲದ ಮಕ್ಕಳ ಕಲಿಕಾ ಸುಧಾರಣೆಗೆ ತರಗತಿ – ಅರ್ಧಕ್ಕರ್ಧ ಹೈಸ್ಕೂಲ್‌ ವಿದ್ಯಾರ್ಥಿಗಳು ಹಿಂದುಳಿದಿರುವುದು ಸಮೀಕ್ಷೆಯಲ್ಲಿ ಪತ್ತೆ

Advertisement

ಬೆಂಗಳೂರು: ಮೇಲಿನ ತರಗತಿಗಳಲ್ಲಿ ಓದುತ್ತಿದ್ದರೂ ಅಕ್ಷರ ಮತ್ತು ಸಂಖ್ಯಾಜ್ಞಾನವನ್ನು ಸರಿಯಾಗಿ ಹೊಂದಿರದ ವಿದ್ಯಾರ್ಥಿಗಳಿಗೆ ಈ ವರ್ಷ ಆರಂಭಿಕ ಶಿಕ್ಷಣ ಮತ್ತು ಸಂಖ್ಯಾಜ್ಞಾನ ವಿಶೇಷ ತರಗತಿಗಳನ್ನು ಕ್ರಮಬದ್ಧವಾಗಿ ನಡೆಸಲು ಶಾಲಾ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

5, 7ನೇ ತರಗತಿ ಅಥವಾ ಪ್ರೌಢಶಿಕ್ಷಣದ ಹಂತಕ್ಕೆ ಬಂದಿದ್ದರೂ 2 ಮತ್ತು 3ನೇ ತರಗತಿಯಲ್ಲಿ ಕಲಿಯಬೇಕಾಗಿರುವ ಅಕ್ಷರಗಳು, ಸಂಖ್ಯೆ ಮತ್ತು ಸರಳ ಲೆಕ್ಕಗಳ ಅರಿವು ಮಕ್ಕಳಿಗೆ ಇಲ್ಲದಿರುವುದು 2023-24ನೇ ಸಾಲಿನಲ್ಲಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯೂಎಎಸಿ) ನಡೆಸಿದ್ದ ರಾಜ್ಯ ಕಲಿಕಾ ಸಾಧನಾ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು. ತಾವು ಓದುತ್ತಿರುವ ತರಗತಿಗಳಿಗಿಂತ ಕೆಳಗಿನ ತರಗತಿಗಳ ಮಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಇದ್ದಿದ್ದು, 3, 5, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ನಡೆದ ಈ ಸಮೀಕ್ಷೆಯಲ್ಲಿ ಪತ್ತೆಯಾಗಿತ್ತು.

2,618 ಪ್ರಾಥಮಿಕ ಶಾಲೆ ಮತ್ತು 694 ಪ್ರೌಢಶಾಲೆಗಳಗಳ ಒಟ್ಟು 2.11 ಲಕ್ಷ ವಿದ್ಯಾರ್ಥಿಗಳ ಮೇಲೆ ನಡೆಸಿದ್ದ ಸಮೀಕ್ಷೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿಗಳು ಶೇ.83 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಶೇ. 71ರ ಕಲಿಕಾ ಸಾಮರ್ಥ್ಯ ತೋರಿದ್ದರೆ, ಪ್ರೌಢಶಾಲೆ (8,9 ಮತ್ತು 10ನೇ ತರಗತಿ) ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಶೇ. 50 ಮಾತ್ರವಿತ್ತು. ಅದರಲ್ಲೂ ಹೈಸ್ಕೂಲ್‌ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತೀರಾ ಹಿಂದುಳಿದಿರುವುದು ಮತ್ತು ವಿದ್ಯಾರ್ಥಿಗಳ ಬರವಣಿಗೆ ಸಾಮರ್ಥ್ಯ ಕುಂಠಿತಗೊಂಡಿರುವುದು ದಾಖಲಾಗಿತ್ತು. ಇದೆಲ್ಲದಕ್ಕಿಂತ ಹೆಚ್ಚಾಗಿ 2018-19ನೇ ಸಾಲಿಗೆ ಹೋಲಿಸಿದಾಗ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಭಾರೀ ಪ್ರಮಾಣದಲ್ಲಿ ಕುಸಿದಿರುವುದು ದಾಖಲಾಗಿತ್ತು. ಆದ್ದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಸುಧಾರಣೆ ತರಬೇಕಾದ ಆವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳು ಮುಖ್ಯ ಶಿಕ್ಷಕರು ಮತ್ತಷ್ಟು ಸುಧಾರಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕೆಎಸ್‌ಕ್ಯೂಎಎಸಿ ಸೂಚನೆ ನೀಡಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಮೂಲಕ ಶಿಕ್ಷಣ ಇಲಾಖೆಯು ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಿಯಾ ಯೋಜನೆ ರೂಪಿಸಿದೆ. ಜೂನ್‌ ತಿಂಗಳಲ್ಲಿಯೇ ಯೋಜನೆಯ ಅಗತ್ಯವಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಶೈಕ್ಷಣಿಕ ವರ್ಷದ ಮುಕ್ತಾಯದ ಹೊತ್ತಿಗೆ ಅವರಲ್ಲಿ ಶೇ. 90ರ ಪ್ರಗತಿ ಸಾಧಿಸುವ ಗುರಿಯನ್ನು ನೀಡಲಾಗಿದೆ.

Advertisement

ತಮಗಿಂತ ಕೆಳಗಿನ ತರಗತಿಗಳ ಪಠ್ಯವನ್ನು ಓದಲು, ಬರೆಯಲು ಸಾಧ್ಯವಾಗದೇ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿರುವುದು ಮತ್ತು ಅವರ ಶೈಕ್ಷಣಿಕ ಭವಿಷ್ಯವನ್ನು ಗಮನಿಸಿ ಸರಕಾರ ಈ ಕ್ರಮ ಕೈಗೊಂಡಿದೆ. ಹೈಸ್ಕೂಲ್‌ನಲ್ಲಿ ಓದುತ್ತಿದ್ದರೂ ಪ್ರಾಥಮಿಕ ಶಾಲೆಯ ಸರಳ ಲೆಕ್ಕಗಳು, ಹಿರಿಯ ಪ್ರಾಥಮಿಕ ಶಾಲೆಯ ಹಂತಕ್ಕೆ ಬಂದಿದ್ದರೂ ಅಕ್ಷರಗಳ ಅರಿವು ಇಲ್ಲದಿರುವುದು ಸಮೀಕ್ಷೆಯಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಮಕ್ಕಳ ಮಾಹಿತಿ ಸಂಗ್ರಹಕ್ಕೆ ಸೂಚನೆ
2024 -25ರ ಸಾಲಿನಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಧಿಸಬೇಕಾದ ಮಕ್ಕಳ ಮಾಹಿತಿಯನ್ನು ಜೂನ್‌ ತಿಂಗಳಿನಲ್ಲಿಯೇ ತರಗತಿ, ಶಾಲೆ, ಕ್ಲಸ್ಟರ್‌, ತಾಲೂಕು ಮತ್ತು ಜಿಲ್ಲಾವಾರು ಸಂಗ್ರಹಿಸಬೇಕು. ಈ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗಿನೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಡಯಟ್‌ನ ನೋಡಲ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯೋಜನೆಯ ಅಗತ್ಯವಿರುವ ಮಕ್ಕಳನ್ನು ಹಂತವಾರು ಗುರುತಿಸಿ, ವೈಯಕ್ತಿಕ ಯೋಜನೆಯನ್ನು ಮಕ್ಕಳವಾರು ಸಿದ್ಧಪಡಿಸಿ ಶಿಕ್ಷಕರ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಮಕ್ಕಳಿಗೆ ವಿಶೇಷ ತರಗತಿ, ನಲಿಕಲಿ ಮಾದರಿಯಲ್ಲಿ ಪಠ್ಯ ಚಟುವಟಿಕೆ ಸಹಿತ ಆದರ್ಶ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕಲಿಕಾ ಸಾಧನೆಯಲ್ಲಿ ಉತ್ತಮ ನಿರ್ವಹಣೆ ತೋರಿರುವುದರಿಂದ ಅದೇ ಮಾದರಿಯಲ್ಲಿನ ಪಠ್ಯ ಚಟುವಟಿಕೆ ನಡೆಸುವುದು ಮುಂತಾದ ಕ್ರಮಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಪ್ರಯತ್ನಿಸುವಂತೆ ಸೂಚನೆ ನೀಡಲಾಗಿದೆ.

– ರಾಕೇಶ್‌ ಎನ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next