Advertisement

ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಆರೈಕೆ

11:22 AM Jul 28, 2017 | |

ಹುಣಸೂರು: ವೈಭವದ ನಾಡಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲ ಆನೆಗಳಿಗೆ ವಿವಿಧ ಶಿಬಿರಗಳಲ್ಲಿ ವಿಶೇಷ ತಯಾರಿ ನಡೆಸಲಾಗುತ್ತಿದ್ದು, ವಿಶೇಷ ಆರೈಕೆ ಮಾಡಲಾಗುತ್ತಿದೆ. ಈ ಬಾರಿ ದಸರಾದಲ್ಲಿ ಭಾಗವಹಿಸುವ ಗಜ ಪಡೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು, ಬಳ್ಳೆ, ಕೊಡಗಿನ ದುಬಾರೆ, ಕೆ.ಗುಡಿ ಶಿಬಿರಗಳಲ್ಲಿ ಮಹಾಮಜ್ಜನ, ಬೂರೀ ಭೋಜನ ನಡೆಯುತ್ತಿದೆ.

Advertisement

ವಿಶೇಷ ನಿಗಾದಲ್ಲಿರುವ ಕ್ಯಾಪ್ಟನ್‌: ನಾಗರಹೊಳೆ ಉದ್ಯಾನವನದ ಹೃದಯ ಭಾಗವಾದ ಬಳ್ಳೆ ಶಿಬಿರದಲ್ಲಿ ಅಂಬಾರಿ ಹೊರುವ ಕ್ಯಾಪ್ಟನ್‌ ಅರ್ಜುನನಿಗೆ ಆರ್‌ಎಫ್ಒ ವಿನಯ್‌ ಉಸ್ತುವಾರಿಯಲ್ಲಿ ಮಾವುತ ವಿನು, ಕವಾಡಿ ಸಣ್ಣಪ್ಪ ಪ್ರತಿನಿತ್ಯ ಕಬಿನಿ ಹಿನ್ನೀರಿನಲ್ಲಿ ದಿನಕ್ಕೆರಡು ಬಾರಿ ಮಜ್ಜನ ಮಾಡಿಸಿ, ಶಿಬಿರಕ್ಕೆ ಕರೆತಂದು ಎಣ್ಣೆ ಮಜ್ಜನ ಮಾಡಿ, ಹರಳೆಣ್ಣೆಯಿಂದ ಮಸಾಜ್‌ ಮಾಡುವರು. ಮೈಮೇಲೆ ಸೊಳ್ಳೆ-ನೊಣ ಕೂರದಂತೆ ಬೇವಿನ ಎಣ್ಣೆ ಹಚ್ಚುವುದು, ವಿಶೇಷ ತಿಂಡಿ ನೀಡುವರು, ಆನೆಗೆ ಪ್ರಿಯವಾದ ಹುಲ್ಲಿನೊಂದಿಗೆ ಭತ್ತ, ಬೆಲ್ಲ ಮಿಶ್ರಣಮಾಡಿ ಕುಸುರೆಯಲ್ಲಿ ಬೆಳಗ್ಗೆ-ಸಂಜೆ ನೀಡುತ್ತಿದ್ದಾರೆ.

ಮತ್ತಿಗೋಡಿನಲ್ಲೂ ಮಹಾ ಮಜ್ಜನ: ಇದೇ ಮಾದರಿಯಲ್ಲಿ ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲ ಗಜಪಡೆಗೆ ಇಲ್ಲಿನ ಸಾಕಾನೆಗಳೊಂದಿಗೆ ಮತ್ತಿಗೋಡು  ಅರಣ್ಯ ಇಲಾಖೆ ಕಚೇರಿಯ ಸನಿಹದಲ್ಲೇ ಇರುವ ಕಂಠಾಪುರ ಕೆರೆಯಲ್ಲಿ ನಿತ್ಯ ಸ್ನಾನ ಮಾಡಿಸುವರು. ನೀರೆಂದರೆ ಆನಂದದಿಂದ ಜಳಕವಾಡುವ ಆನೆಗಳು, ಮಾವುತರು, ಕವಾಡಿಗಳು ಹಾಗೂ ಅವರ ಮಕ್ಕಳಿಂದ ನೀರಿನಲ್ಲೇ ಮಲಗಿ ಮೈ ಉಜ್ಜಿಸಿಕೊಳ್ಳುವ, ಈಜುತ್ತಾ, ಪರಸ್ಪರ ನೀರೆರೆಚುತ್ತಾ ಮೈದಡವುತ್ತಾ, ಆಟವಾಡುವುದನ್ನು ಕಣ್ತುಂಬಿಕೊಳ್ಳುವುದೇ ನೋಡಲು ಬಲುಚೆಂದ, ಮಜ್ಜನದ ನಂತರ ಶಾಲಾ ವಿದ್ಯಾರ್ಥಿಗಳಂತೆ ಶಿಬಿರಕ್ಕೆ ಸಾಲಾಗಿ ಹೆಜ್ಜೆ ಹಾಕುತ್ತಾ ಬಂದ ನಂತರ ಎಣ್ಣೆ ಮಜ್ಜನ ನಡೆಸಿ, ಶಿಬಿರದಲ್ಲಿ ತಯಾರು ಮಾಡುವ ಬಗೆ ಬಗೆಯ ತಿಂಡಿ, ಭತ್ತ-ಹುಲ್ಲು ಮಿಶ್ರಣದ ಕುಸುರೆ ನೀಡುವರು.

ಮತ್ತಿಗೋಡು ಶಿಬಿರದಲ್ಲಿ ಸಂಭ್ರಮ: ಮತ್ತಿಗೋಡು ಶಿಬಿರದ 17ರ ಹರೆಯದ ಭೀಮ, 35ರ ದ್ರೋಣ, 56ರ ಕೃಷ್ಣ ಆನೆಗಳು ದಸರಾದಲ್ಲಿ ಶಿಬಿರದ ಇತರೆ ಐದು ಆನೆಗಳೊಂದಿಗೆ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು. ಇಡೀ ಶಿಬಿರದಲ್ಲಿ ಹಬ್ಬದ ವಾತಾವರಣ ಉಂಟಾಗಿದ್ದು, ಮಾವುತರು, ಕವಾಡಿಗಳು  ದಸರೆಗೆ ತಯಾರಿಯಲ್ಲಿ ನಿರತರಾಗಿದ್ದಾರೆ. ನಮಗೂ ಕೂಡ ಸಂತೋಷವಿದೆ ಎನ್ನುತ್ತಾರೆ ಇಲ್ಲಿನ ಮಾವುತರು, ಕವಾಡಿಗಳು.

ದಸರಾದಲ್ಲಿ 15 ಆನೆಗಳು ಭಾಗಿ: ವಿಶ್ವ ವಿಖ್ಯಾತ ದಸರಾದಲ್ಲಿ ಈ ಬಾರಿ 15 ಆನೆಗಳ ತಂಡ ಪಾಲ್ಗೊಳ್ಳುತ್ತಿದ್ದು, ಸತತ ನಾಲ್ಕನೇ ಬಾರಿಗೆ ಅಂಬಾರಿ ಹೊರಲು ಸಿದ್ಧನಾಗಿರುವ ಅರ್ಜುನನಿಗೆ ಎಚ್‌.ಡಿ.ಕೋಟೆ ತಾಲೂಕಿನ ಕೇರಳದ ಗಡಿಯಂಚಿನ ಬಳ್ಳೆ ಶಿಬಿರದಲ್ಲೂ, 13 ಬಾರಿ ಅಂಬಾರಿ ಹೊತ್ತಿದ್ದ ಸೌಮ್ಯ ಸ್ವಭಾವದ ಬಲರಾಮ, ವೀರ ಪರಾಕ್ರಮಿ ಅಭಿಮನ್ಯು, ಕುಮ್ಕಿ ಆನೆ ವರಲ ಕ್ಷ್ಮೀ, ಗೋಪಾಲಸ್ವಾಮಿ ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಭೀಮ, ಕೃಷ್ಣ, ದ್ರೋಣ ಆನೆಗಳು ಮತ್ತಿಗೋಡು ಶಿಬಿರದಲ್ಲೂ, ಕಾವೇರಿ, ವಿಕ್ರಮ, ಗೋಪಿ, ಹರ್ಷ, ಪ್ರಶಾಂತ ಕೊಡಗಿನ ದುಬಾರೆ ಕ್ಯಾಂಪಿನಲ್ಲಿ ಹಾಗೂ ಗಜೇಂದ್ರ ಕೆ.ಗುಡಿ ಶಿಬಿರದಲ್ಲಿ ನಿತ್ಯವೂ ವಿಶೇಷ ಗಮನವಹಿಸಲಾಗಿದೆ.

Advertisement

ಅತೀ ಕಿರಿಯ ತುಂಟ ಭೀಮ: ಕಳೆದ 17 ವರ್ಷಗಳ ಹಿಂದೆ ಭೀಮನನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಳಲೂರು ಬಳಿಯ ಭೀಮನಕಟ್ಟೆಯಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ, 2002ರಲ್ಲಿ ರಕ್ಷಿಸಿ ಮತ್ತಿಗೋಡು ಶಿಬಿರದಲ್ಲಿ ಸಲಹಿದ್ದು, ಇದೀಗ ಕಟ್ಟು ಮಸ್ತಾಯಾಗಿ ಬೆಳೆದಿದ್ದು. ಇಡೀ ಶಿಬಿರಕ್ಕೆ ಕಳೆಗಟ್ಟಿದ್ದಾನೆ. ಸಣ್ಣ ವಯಸ್ಸಿನಲ್ಲಿ ತುಂಟಾಟ ನಡೆಸಿದ್ದಾತನನ್ನೀಗ  ಕಾಡಾನೆಗಳ ನಿಯಂತ್ರಣ, ಹಿಡಿಯಲು ಕರೆದೊಯ್ಯುತ್ತಾರೆ. ಎಂತಹ ಆನೆಗಳನ್ನೂ ಹೆಡೆಮುರಿ ಕಟ್ಟುವ ಅಭಿಮನ್ಯುವಿನ ನಂತರ ಭೀಮ ಆ ಸ್ಥಾನ ತುಂಬಲಿದ್ದಾನೆ. ಹಾಗೂ ಭವಿಷ್ಯದಲ್ಲಿ ಅಂಬಾರಿ ಹೊರುವ ಎಲ್ಲ ಲಕ್ಷಣಗಳೂ ಈತನಲ್ಲಿದ್ದು, ದಸರಾದಲ್ಲಿ ಪಾಲ್ಗೊಳ್ಳುವ ಅತಿ ಕಿರಿಯ ಆನೆ ಅನಿಸಿದ್ದಾನೆ.

ಭೂರೀ ಭೋಜನ: ಶಿಬಿರದಲ್ಲಿ ಎಂದಿನಂತೆ ನೀಡಲಾಗುವ ರಾಗಿ ಮುದ್ದೆ ಜೊತೆಗೆ ಪೌಷ್ಠಿಕಾಂಶ ಯುಕ್ತ ಗೋದಿ ಹುಡಿ, ಕುಸಲಕ್ಕಿಯನ್ನು ಬೇಯಿಸಿ, ಉಂಡೆ ಮಾಡಿ ನೀಡಲಾಗುತ್ತಿದೆ. ಅಲ್ಲದೆ ಭತ್ತದ ಕುಸುರೆಯನ್ನೂ ಕೊಡಲಾಗುವುದು. ಪಶುವೈದ್ಯ ಡಾ.ಉಮಾಶಂಕರ್‌, ಡಾ.ನಾಗರಾಜ್‌ ನಿತ್ಯ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದು, ಬಳ್ಳೆ ಶಿಬಿರದಲ್ಲಿ ಆರ್‌ಎಫ್ಒ ವಿನಯ್‌ ಹಾಗೂ ಮತ್ತಿಗೋಡು ಶಿಬಿರದಲ್ಲಿ ಆರ್‌ಎಫ್ಒ ಕಿರಣ್‌ಕುಮಾರ್‌ ಮಾರ್ಗದರ್ಶನದಲ್ಲಿ ಶಿಬಿರದ ಉಸ್ತುವಾರಿ ಡಿಆರ್‌ಎಫ್ಒ ಜಗದೀಶನಾಯ್ಕ, ಅರಣ್ಯ ರಕ್ಷಕಿ ಶಾರದಮ್ಮ ಕಣ್ಗಾವಲಿನಲ್ಲಿ ಆರೈಕೆ ನಡೆಯುತ್ತಿದೆ.

ಮೊದಲ ಬಾರಿಗೆ ದಸರಾಕ್ಕೆ ಭೀಮನನ್ನು ಕರೆದೊಯ್ಯುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಈತ 70ಕ್ಕೂ ಹೆಚ್ಚು ಆನೆ, ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಸೈ ಎನಿಸಿದ್ದಾನೆ. ಇಡೀ ಶಿಬಿರದ ಬಲ ಭೀಮನಾಗಿದ್ದು, ಮುಂದೆ ಅಂಬಾರಿ ಹೊರುವ ಅವಕಾಶ ಸಿಗಲೆಂದು ನಮ್ಮ ಮಹದಾಸೆ.
-ವಸಂತ, ಶಿಬಿರದ ಮಾವುತ

ಜೊತೆಗೆ ನಿತ್ಯ ಎರಡು ಬಾರಿ ಸ್ನಾನ ಮಾಡಿಸಿ ಕಾಡಿಗೆ ಹೋಗುವ ಮೊದಲು ನಂತರದಲ್ಲಿ ಆಹಾರ ನೀಡುತ್ತಿದ್ದೇವೆ. ದಸರಾದಲ್ಲಿ ಭಾಗವಹಿಸುವ ಆನೆಗಳ ಬಗ್ಗೆ ನಿಗಾವಹಿಸಿದ್ದು, ಈ ಬಾರಿ ಹೊಸದಾಗಿ ಮೂರು ಆನೆಗಳು ದಸರಾದಲ್ಲಿ ಭಾಗವಹಿಸಲು ತೆರಳುತ್ತಿರುವುದು ಸಂತಸ ತಂದಿದೆ.
-ಜಗದೀಶ್‌ನಾಯ್ಕ, ಡಿಆರ್‌ಎಫ್ಒ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next