Advertisement
ಕೆಲವು ದಿನಗಳ ಹಿಂದೆ ಆತ್ಮೀಯ ಸ್ನೇಹಿತೆಯೊಬ್ಬಳು ಎದುರಾದಳು. ‘ಹೇಗಿದ್ದೀಯಾ, ಮನೆಯವರು ಹೇಗಿದ್ದಾರೆ?’ ಎಂದು ಕೇಳಿದೆ. ಆಕೆ ಕತ್ತೆತ್ತಿ ನನ್ನನ್ನು ನೋಡಿ, ತಗ್ಗಿದ ಧ್ವನಿಯಲ್ಲಿ ಅಂದಳು: ‘ಅಯ್ಯೋ ಬಹಳ ಬ್ಯುಸಿ ಆಗ್ಬಿಟಿದೀನಿ. ಯಾಕೋ ಯಾವ್ದಕ್ಕೂ ಸಮಯಾನೇ ಸಿಕ್ತಿಲ್ಲ.’ ಇದಾದ ಕೆಲ ಹೊತ್ತಿನಲ್ಲಿ ಮತ್ತೂಬ್ಬ ಪರಿಚಿತರನ್ನು ಭೇಟಿ ಮಾಡಿದೆ. ಅವರದ್ದೂ ಅದೇ ರಾಗ: ‘ಸಿಕ್ಕಾಪಟ್ಟೆ ಕೆಲಸ ಇದೆ. ಬಹಳ ಬ್ಯುಸಿ..’. ಅವರ ಧ್ವನಿಯಲ್ಲಿ ನೋವು ತುಂಬಿತ್ತು, ತುಂಬಾ ದಣಿದಿದ್ದಾರೆ ಎನ್ನಿಸುವಂತಿತ್ತು.
Related Articles
Advertisement
ಬ್ಯುಸಿ ಎನ್ನುವ ರೋಗ(ಹೌದು ಇದನ್ನು ರೋಗವೆಂದೇ ಕರೆಯೋಣ) ನಮ್ಮ ಆರೋಗ್ಯಕ್ಕೆ ಮತ್ತು ಯೋಗಕ್ಷೇಮಕ್ಕೆ ಆಧ್ಯಾತ್ಮಿಕ ವಿನಾಶ ಉಂಟುಮಾಡುತ್ತಿದೆ. ನಾವು ನಮ್ಮ ಕುಟುಂಬದ ಸದಸ್ಯರೊಡನೆ ಪೂರ್ಣವಾಗಿ ಹಾಜರಿರುವ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತಿದೆ. 1950ರಿಂದ ಜಗತ್ತಿನಲ್ಲಿ ಯಾವ ಪಾಟಿ ತಂತ್ರಜ್ಞಾನಿಕ ಆವಿಧಿಷ್ಕಾರಗಳು ಆದವು -ಆಗುತ್ತಿವೆಯೆಂದರೆ, ಈ ಆವಿಷ್ಕಾರಗಳು ನಮ್ಮ ಜೀವನವನ್ನು ಸರಳಗೊಳಿಸುತ್ತಿವೆ ಎಂದೇ ನಾವು ಭಾವಿಸುಧಿತ್ತಿದ್ದೆವು -ಭಾವಿಸುತ್ತಿದ್ದೇವೆ. ತಂತ್ರಜ್ಞಾನದಿಂದ ನಮ್ಮ ಜೀವನ ಸರಳವಾಗಿದೆಯೆಂದರೆ ದಶಕಗಳ ಹಿಂದೆ ನಮಗಿದ್ದ ಪುರುಸೊತ್ತು ಈಗ ಏಕಿಲ್ಲ? ಅದೇಕೆ ಸರಳ ಜೀವನ ಎನ್ನುವ ಪರಿಕಲ್ಪನೆಯೇ ವಿರಳವಾಗಿಬಿಟ್ಟಿದೆ? ಅದರಲ್ಲೂ ನಮ್ಮಂಥ ಉದ್ಯೋಗಸ್ಥರಿಗೆ ಮನೆ ಮತ್ತು ಕಚೇಧಿರಿಯ ನಡುವಿನ ರೇಖೆಯೇ ಅಸ್ಪಷ್ಟವಾಗುತ್ತಾ ಹೋಗುತ್ತಿದೆ. ಮನೆಯಲ್ಲಿದ್ದಾಗಲೂ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗ್ಳಿಗೆ – ಅದೂ ನಿರಂತರವಾಗಿ – ಅಂಟಿಕೊಂಡಿರುತ್ತೇವೆ.
ಇಮೇಲ್‌ಗಳೊಂದಿಗೆ ನನ್ನ ದಿನನಿತ್ಯದ ಹೊಡೆದಾಟವಂತೂ ಇನ್ನೂ ನಿಂತಿಲ್ಲ. ಈ ಹೋರಾಟವನ್ನು ನಾನು ‘ಇಮೇಲ್ ವಿರುದ್ಧದ ಜಿಹಾದ್’ ಎಂದು ಕರೆಯುತ್ತೇನೆ. ನಿತ್ಯವೂ ನೂರಾರು ಇಮೇಲ್‌ಗಳ ಸಾಗರ ನನಗೆ ಬಂದಪ್ಪಳಿಸುತ್ತಿರುತ್ತದೆ. ಇವುಗಳನ್ನು ಹೇಗೆ ತಡೆಯಬೇಕೋ ಇನ್ನೂ ತಿಳಿಯುತ್ತಿಲ್ಲ. ಸಾಯಂಕಾಲದ ಹೊತ್ತಷ್ಟೇ ಮಿಂಚಂಚೆಗಳಿಗೆ ಉತ್ತರಿಸುವುದು, ವಾರಾಂತ್ಯದಲ್ಲಿ ಮಾತ್ರ ನನ್ನ ಇನ್‌ಬಾಕ್ಸ್ ಪರೀಕ್ಷಿಸುವುದು, ಸಂದೇಶ ಕಳುಹಿಸಿದವರಿಗೆ ‘ಎದುರಿಗೆ ಕುಳಿತು ಮಾತಾಡೋಣ’ ಎಂದು ಕೇಳಿಕೊಳ್ಳುವುದು. ಊಹೂಂ. ಒಟ್ಟಲ್ಲಿ ಏನು ಮಾಡಿದರೂ ಖಾಸಗಿ ಮಿಂಚಂಚೆಗಳು, ಬ್ಯುಸಿನಸ್ ಇಮೇಲ್‌ಗಳು ನಿಲ್ಲುತ್ತಲೇ ಇಲ್ಲ. ಅದರಲ್ಲೂ, ಸಂದೇಶ ಕಳುಹಿಸುವವರೂ ಅದೇನೋ ಅವಸರದಲ್ಲಿರುತ್ತಾರೆ. ಅವರಿಗೆ ಈಗಲೇ, ಈ ಕೂಡಲೇ ಉತ್ತರಿಸಿಬಿಡಬೇಕು! ಅಂದರೆ, ಅವರಿಗಾಗಿ ನಾನೂ ತುಂಬಾ ಬ್ಯುಸಿಯಾಗಿಬಿಟ್ಟಿದ್ದೇನೆ.
ವಾಸ್ತವ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಎನ್ನುವುದು ಸತ್ಯ. ಕೆಲವರು ತಮ್ಮ ಕುಟುಂಬವನ್ನು ಎತ್ತಿಹಿಡಿಯಲು ಎರಡೆರಡು ನೌಕರಿ ಮಾಡುತ್ತಿರುತ್ತಾರೆ. ಅಮೆರಿಕದಲ್ಲಿ 20 ಪ್ರತಿಶತ ಮಕ್ಕಳು ಬಡತನದಲ್ಲಿ ಬದುಕುತ್ತಿದ್ದಾರೆ. ತಮ್ಮ ಮನೆಯ ಸೂರನ್ನು ಉಳಿಸಲು, ಒಂದು ಹೊತ್ತಿನ ಅನ್ನ ಸಂಪಾದಿಸಲು ಅಸಂಖ್ಯ ಪೋಷಕರು ಕಡಿಮೆ ಸಂಬಳದ ನೌಕರಿಯಲ್ಲಿ ದುಡಿಯುತ್ತಿದ್ದಾರೆ. ಇನ್ನೊಂದೆಡೆ ಕೂಡು ಕುಟುಂಬ ವ್ಯವಸ್ಥೆ ಇಂದು ನೆನಪಾಗಿ ಉಳಿದಿದೆ. ಈಗ ನಮ್ಮಲ್ಲಿನ ಬಹುತೇಕ ಕುಟುಂಬಗಳು ಸಿಂಗಲ್ ಫ್ಯಾಮಿಲಿಗಳಷ್ಟೇ (ಗಂಡ – ಹೆಂಡತಿ – ಮಕ್ಕಳನ್ನು ಬಿಟ್ಟರೆ ಮತ್ತೂಬ್ಬರ ದಿಕ್ಕಿರುವುದಿಲ್ಲ). ಇಂಥ ಕುಟುಂಬಗಳಲ್ಲಿ ಪತಿ -ಪತ್ನಿ ನಿತ್ಯದ ಬಹುಪಾಲು ವೇಳೆಯನ್ನು ದುಡಿಮೆಯಲ್ಲೇ ಕಳೆಯುತ್ತಿದ್ದಾರೆ. ತಮ್ಮ ಹೃದಯದ ಮಾತು ಕೇಳಿಸಿಕೊಳ್ಳಲು ಅವರಿಗೆ ಸಮಯವೇ ಇಲ್ಲ!
ಆದರೆ ಬದುಕು ಹೀಗೆಯೇ ಮುಗಿದುಹೋಗಬೇಕೇನು? ಮುಸಲ್ಮಾನ ಸಂಸ್ಕೃತಿಯಲ್ಲಿ ಒಂದು ಪರಿಪಾಠವಿದೆ. ಯಾರಾದರೂ ಪರಿಚಿತರು ಎದುರಾದಾಗ ಅರಬಿಕ್‌ನಲ್ಲಿ ‘ಕಾಯ್ಫ್ ಹಾಲ್- ಇಕ್” ಅಥವಾ ಪರ್ಷಿಯನ್‌ನಲ್ಲಿ ‘ಹಾಲ್-ಎ ಶೋಮಾ ಚೇತೊರೇಹ್’? (ಹೇಗಿದ್ದೀರಿ) ಎಂದು ಕೇಳುತ್ತಾರೆ. ಈ ಹಾಲ್ ಎನ್ನುವುದರ ಒಳಾರ್ಥವೇನು ಗೊತ್ತೇ? ‘ನಮ್ಮ ಹೃದಯದ ಸದ್ಯದ ಸ್ಥಿತಿ!’ ಕ್ಯಾ ಹಾಲ್ ಹೇ ಎಂದು ಕೇಳಿದರೆ ಅದರರ್ಥವಿಷ್ಟೆ: ‘ಈಗ, ಈ ಕ್ಷಣದಲ್ಲಿ ನಿಮ್ಮ ಹೃದಯ ಹೇಗಿದೆ?’ ಎಂದು. ನಾನು ನಿಮ್ಮ ‘ಹಾಲ್’ ಬಗ್ಗೆ ಕೇಳಿದೆನೆಂದರೆ, ‘ಈಗ ನಿಮ್ಮ ಹೃದಯದ ಪರಿಸ್ಥಿತಿ ಹೇಗಿದೆ?’ ಎಂದು ವಿಚಾರಿಸುತ್ತಿದ್ದೇನೆ ಎಂದರ್ಥ. ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ, ಇನ್ಯಾವ ಕೆಲಸಗಳು ಬಾಕಿ ಉಳಿದಿವೆ, ಎಷ್ಟು ಇಮೇಲ್‌ಗಳಿಗೆ ಉತ್ತರಿಸಬೇಕಿದೆ ಎಂದು ನಾನು ಕೇಳುತ್ತಿಲ್ಲ. ಬದಲಾಗಿ, ನಿಮ್ಮ ಹೃದಯ ಈ ಕ್ಷಣ ಏನು ಮಾಡುಧಿತ್ತಿದೆ ಎಂದು ತಿಳಿದುಕೊಳ್ಳಲು ಬಯಸುತ್ತಿದ್ದೇನೆ. ಹೇಳಿ, ನಿಮ್ಮ ಹೃದಯ ಸಂತೋಷದಿಂದಿದೆಯೇ, ನೋವುಣ್ಣುತ್ತಿದೆಯೇ, ಬೇಸರದಲ್ಲಿದೆಯೇ, ಮಾನವೀಯ ಸ್ಪರ್ಶಕ್ಕಾಗಿ ಹಂಬಲಿಸುತ್ತಿದೆಯೇ? ನೀವು ಮನುಷ್ಯರು ಎನ್ನುವುದನ್ನು ಮರೆತುಬಿಟ್ಟಿಲ್ಲ ತಾನೆ? ಪ್ರತಿ ಕ್ಷಣ ಏನಾದರೊಂದು ಮಾಡಲೇಬೇಕು ಎಂಬ ಒಂದು ಯಂತ್ರವಾಗಿ ನೀವು ಬದಲಾಗಿಲ್ಲ ತಾನೆ? ನಿಮ್ಮ ಮನಸ್ಸನ್ನು, ಆತ್ಮವನ್ನು, ಹೃದಯವನ್ನು ಪರೀಕ್ಷಿಸಿಕೊಳ್ಳಿ. ಅಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಹೇಳಿ. ಸಹ ಮನುಷ್ಯರ ಸ್ಪರ್ಶವನ್ನು, ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತಾಧಿಡುವ ಆಪ್ತತೆಯನ್ನು ನಾವು ಮರೆತುಬಿಟ್ಟೆವೇಕೆ? ಮೊಬೈಲಿನಿಂದ ಮಾತನಾಡುವುದೇ ಆಯಿತಲ್ಲ? ಹೃದಯದಿಂದ ಹೃದಯಕ್ಕೆ ಸಂವಹನ ನಡೆಯುವುದು ಯಾವಾಗ? ನಾನೊಂದು ವಿಶ್ವವಿದ್ಯಾಲಯದಲ್ಲಿ ದುಡಿಯುತ್ತಿದ್ದೇನೆ. ನನ್ನ ವಿದ್ಯಾರ್ಥಿಗಳೆಲ್ಲರೂ ‘ಹೆಚ್ಚು ಓದು, ಹೆಚ್ಚು ಪಾರ್ಟಿ ಮಾಡು’ ಎಂಬ ಶೈಲಿಗೆ ಹೆಮ್ಮೆಯಿಂದ ಅಂಟಿಕೊಂಡುಬಿಟ್ಟಿದ್ದಾರೆ. ಸದ್ಯದ ಜಗತ್ತಿನ ಜೀವನ ಶೈಲಿಯ ಪ್ರತಿಫಲನವಿದು. ನಾವಿಂದು ರಿಲ್ಯಾಕ್ಸ್ ಆಗುವುದು ಎಂದರೆ ಇನ್ನಷ್ಟು ಬ್ಯುಸಿಯಾಗುವುದು ಎಂದು ಭಾವಿಸಿಬಿಟ್ಟಿದ್ದೇವೆ. ಸುಮ್ಮನೆ ಗಮನಿಸಿ. ನಾವೆಲ್ಲ ಈಗ ವಿಶ್ರಾಂತಿ ಪಡೆಯುತ್ತಿರುವುದು ಹೇಗೆ? ಅರ್ಥಹೀನ ಸಿನೆಮಾಗಳನ್ನು, ವೀಡಿಯೋಗಳನ್ನು, ಸುದ್ದಿಗಳನ್ನು ನೋಡುವ ಮೂಲಕವೇ ಅಲ್ಲವೇ? ವೀಕೆಂಡ್‌ಗಳನ್ನು ಕಳೆಯುತ್ತಿರುವುದು ಹೇಗೆ? ಅನ್ಯ ದಿನಗಳಿಗಿಂತಲೂ ಹೆಚ್ಚು ಬ್ಯುಸಿಯಾಗುವ ಮೂಲಕವೇ ಅಲ್ಲವೇ? ಈ ಸಮಸ್ಯೆಗೆ ನನ್ನ ಬಳಿ ಮಾಯಾವಿ ಪರಿಹಾರವಂತೂ ಇಲ್ಲ. ಆದರೆ, ನಾವೆಲ್ಲ ನಿಜಕ್ಕೂ ಮನುಷ್ಯರಾಗಿ ಬದುಕುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದಷ್ಟೇ ನನಗೆ ಗೊತ್ತು. ನಮಗಿಂದು ಬೇಕಿರುವುದು ಅರ್ಥಪೂರ್ಣ ಜೀವನ, ಸಮುಧಿದಾಯ ಪ್ರಜ್ಞೆ, ಸಮತೋಲಿತ ಅಸ್ತಿತ್ವ. ಫಾಸ್ಟ್ ಆಗಿ ಕೆಲಸ ಮಾಡುವ ಅಂತರ್ಜಾಲ ಮತ್ತು ಐಫೋನ್‌ಗಳಲ್ಲ. ಐರಿಷ್ ಕವಿ ಡಬ್ಲ್ಯು. ಬಿ. ಯೇಟ್ಸ್ ಒಮ್ಮೆ ಹೀಗೆ ಬರೆದಿದ್ದರು: ‘ಒಬ್ಬ ಯೋಧನಿಗೆ ರಣರಂಗದಲ್ಲಿ ಸೆಣೆಸುವುದಕ್ಕೆ ಅಗತ್ಯವಿರುವ ಧೈರ್ಯಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಧೈರ್ಯ, ನಮ್ಮ ಆತ್ಮದಲ್ಲಿ ಅಡಗಿರುವ ಅಂಧಕಾರದ ಮೂಲೆಗಳನ್ನು ಹುಡುಕಲು ಬೇಕಾಗುತ್ತದೆ’. ಈ ಬ್ಯುಸಿ ರೋಗದಿಂದ ಮುಕ್ತರಾಗುವುದು ಹೇಗೆಂದು ಚರ್ಚಿಸುವುದಕ್ಕೆ- ಬದಲಾಗುವುದಕ್ಕೆ ನಾವೆಲ್ಲ ಸಿದ್ಧರಿದ್ದೇವಾ? ಒಟ್ಟಲ್ಲಿ, ನಮ್ಮ ಜೀವನಶೈಲಿಯ, ಸಮಾಜದ, ಕುಟುಂಬದ, ಸಮುದಾಯದ ಈಗಿನ ರಚನೆಯನ್ನು ಬದಲಿಸಿ ಮತ್ತೂಂದು ಮಾದರಿಯನ್ನು ರಚಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ನನಗನಿಸುತ್ತದೆ. ನನ್ನ ಮಕ್ಕಳು ಗದ್ದಲ ಮಾಡಬೇಕೆಂದು ನಾನು ಬಯಸುತ್ತೇನೆ, ಮಣ್ಣಲ್ಲಿ ಆಟವಾಡಿ ಗಲೀಜಾಗಬೇಕೆಂದು ನಾನು ಬಯಸುತ್ತೇನೆ. ಎದುರಿನ ವ್ಯಕ್ತಿಯ ಹೃದಯದ ‘ಹಾಲ್’ ಅನ್ನು ವಿಚಾರಿಸಿ ಅದಕ್ಕೆ ಸ್ಪಂದಿಸುವ ಮನುಷ್ಯರಾಗಬೇಕೆಂದು ನಾನು ಇಚ್ಛಿಸುತ್ತೇನೆ. ಅವರು ತಮ್ಮ ಮನಸ್ಸಿನಲ್ಲಿರುವ ಅಂಧಕಾರವನ್ನು ಇಣುಕಿ ನೋಡಿ ಅದರಲ್ಲಿ ಬೆಳಕು ತುಂಬಲು ಪ್ರಯತ್ನಿಸಬೇಕೆಂದು ನಾನು ಬಯಸುತ್ತೇನೆ. ಇನ್ಮುಂದೆ ನಿಮ್ಮನ್ನು ಭೇಟಿಯಾದ ಯಾರಾದರೂ ‘ಯಾವ್ದಕ್ಕೂ ಸಮಯವೇ ಸಿಕ್ತಿಲ್ಲ. ನಾನು ತುಂಬಾ ಬ್ಯುಸಿ’ ಎಂದು ಹೇಳಿದರೆ, ಅವರಿಗೆ ಹೀಗೆ ಹೇಳಿ: ‘ಹೌದು, ನೀನಷ್ಟೇ ಅಲ್ಲ, ಎಲ್ಲರೂ ಬ್ಯುಸಿಯಿದ್ದೇವಲ್ಲವೇ? ಅದೆಲ್ಲ ಬಿಡು. ಈಗ, ಈ ಕ್ಷಣದಲ್ಲಿ ನಿನ್ನ ಹೃದಯದ ಸ್ಥಿತಿ ಹೇಗಿದೆಯೋ ಹೇಳು…’ ಅಂದಹಾಗೆ, ನಿಮ್ಮ ಹೃದಯ ಹೇಗಿದೆ? – ಓಮಿದ್ ಸಫಿ
(ಲೇಖಕರು ಅಮೆರಿಕದ ಡ್ಯೂಕ್ ವಿ.ವಿ.ಯ ಇಸ್ಲಾಮಿಕ್ ಅಧ್ಯಯನ ವಿಭಾಗದ ನಿರ್ದೇಶಕರು)