Advertisement
‘ರಾಮ’ ಎಂಬುದು ಇಂದು ಭಾರತದ ನೆಲದಲ್ಲಿ ಹುಟ್ಟಿ ಬೆಳೆದ ಸನಾತನ, ಬೌದ್ಧ, ಜೈನ, ಶೈವ, ಪಾಶುಪತ, ವೈಷ್ಣವ… ಹೀಗೆ ಎಲ್ಲ ಪಂಥದವರೂ ಭಾವನಾತ್ಮಕವಾಗಿ ಸ್ವೀಕರಿಸಿ, ಅದರೊಡನೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಂಡಿರುವ ಹೆಸರು.
Related Articles
Advertisement
ರಾಮನ ದೇವಾಲಯಗಳ ಬಗ್ಗೆ ತಿಳಿಯುವುದೂ ಪ್ರಸ್ತುತವೆನಿಸುತ್ತದೆ. ಒಟ್ಟು ಐತಿಹಾಸಿಕವಾಗಿ ದೇವಾಲಯ ಕೇಂದ್ರಿತ ಆಚರಣೆಗಳು ಪ್ರಿಯವಾಗಿ ಬೆಳೆದದ್ದು ಸುಮಾರು ಕ್ರಿ.ಶ. 4-5ನೇ ಶತಮಾನಗಳ ಅನಂತರದಲ್ಲಿ. ವಿಷ್ಣು ಮತ್ತು ಆತನ ಅವತಾರಗಳು, ಶಿವ, ದುರ್ಗೆ, ಸೂರ್ಯ, ಗಣ ಪತಿ, ಸ್ಕಂದ ಇತ್ಯಾದಿ ಪ್ರಧಾನ ದೇವತೆಗಳಿಗೆ ಸಂಬಂಧಿಸಿ. ಆದರೆ ಶಂಕರಾಚಾರ್ಯರ ಕಾಲಕ್ಕೆ ರಾಮನ ದೇವಾಲಯಗಳು ಪ್ರಾಯಃ ಇರಲಿಲ್ಲ.
ಕಾರಣ, ವಾಲ್ಮೀಕಿ ರಾಮಾಯಣವು ಅವರ ಪೂರ್ವದ್ದೇ ಆದರೂ ಅಲ್ಲಿ ರಾಮನನ್ನು ವಾಲ್ಮೀಕಿಯು ಎಲ್ಲೂ ವಿಷ್ಣುವಿನ ಅವತಾರವಾಗಿ ಚಿತ್ರಿಸಿದ್ದು ಕಾಣುವುದಿಲ್ಲ; ‘ಪುರುಷೋತ್ತಮ’ನಾಗಿ ಆತನನ್ನು ವರ್ಣಿಸುತ್ತಾನೆ ಅಷ್ಟೇ. ಮಹಾಭಾರತದಲ್ಲಿ ಕೃಷ್ಣನನ್ನು ಮಾತ್ರ, ಗೀತೆ, ವಿಷ್ಣುಸಹಸ್ರನಾಮ, ಶಾಂತಿಪರ್ವದ ಭೀಷ್ಮನ ಮಾತುಗಳಲ್ಲಿ ಸ್ಪಷ್ಟವಾಗಿ ಪರದೈವವಾಗಿಯೇ ಹೇಳಲಾಗಿದೆ.
ಕ್ರಿ.ಪೂ.ದ ಬೌಧಾಯನ ಸೂತ್ರದ ಸ್ಮತಿಗಳಲ್ಲಿಯೂ ವಿಷ್ಣುವಿನ 12 ಹೆಸರುಗಳಲ್ಲಿ ರಾಮನಿಲ್ಲ. ಆದರೆ ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಮತ್ತು ವಾಸುದೇವರಿದ್ದಾರೆ. ಹೀಗೆ ಸ್ಮತಿಗಳಲ್ಲಿ ಕೃಷ್ಣನಿದ್ದಾನೆ; ರಾಮನು ಕಾಣುವುದಿಲ್ಲ. ಮಹಾಭಾರತದಲ್ಲಿ ಬರುವ ವಿಷ್ಣುವಿನ ಅವತಾರಗಳು ಕೇವಲ ಆರು ಮಾತ್ರ – ಅದರಲ್ಲಿ ಮೊದಲ ಬಾರಿಗೆ ಆತ ವಿಷ್ಣುವಿನ ಅವತಾರವಾಗಿದ್ದಾನೆ (ಶಾಂತಿ ಪರ್ವದಲ್ಲಿ). ಮತ್ಸ್ಯ, ಕೂರ್ಮ, ಬುದ್ಧ ಮತ್ತು ಕಲ್ಕಿ ಅಲ್ಲಿ ಇನ್ನೂ ಸೇರಿಕೊಂಡಿಲ್ಲ. ಪುರಾಣಗಳೂ ರಾಮನಿಗೆ ಕೃಷ್ಣನಷ್ಟು ಪ್ರಾಧಾನ್ಯ ನೀಡಿಲ್ಲ. ಅತ್ಯಂತ ಪ್ರಾಚೀನವೆನ್ನಬಹುದಾದ ವಾಯುಪುರಾಣ ರಾಮನ ಬಗ್ಗೆ ವಿಷ್ಣುವಿನ ಇತರ ಅವತಾರಗಳಂತೆ ಕೇವಲ ಎರಡು ವಾಕ್ಯಗಳಲ್ಲಿ ಹೇಳಿಮುಗಿಸುತ್ತದೆ. ಅಂದರೆ ದೇವತ್ವದ ದೃಷ್ಟಿಯಿಂದ ರಾಮನು ಕೃಷ್ಣನಿಗಿಂತ ಹಿಂದೆ ಬಿದ್ದವನು. ಕೃಷ್ಣನಿಗೆ ದೇವಾಲಯಗಳು ಕ್ರಿ.ಪೂ. 2-3 ಶತಮಾನದಿಂದಲೇ ಲಭಿಸುತ್ತವೆ. ಇಲ್ಲಿಗೆ ಬಂದ ಶಕರು, ಕುಶಾನರು, ಯವನರು ಆತನ ಭಕ್ತಿಗೆ ಮರುಳಾಗಿ ಭಾಗವತರಾದ ಉದಾಹರಣೆಗಳಿವೆ.
ರಾಮನ ವಿಗ್ರಹ, ಗುಹೆಯೊಳಗಿನ ಶಿಲಾಚಿತ್ರ, ದೇವಾಲಯಗಳು ಇವೆಲ್ಲ ಆರಂಭವಾಗುವುದು ಕ್ರಿ.ಶ. 6ನೇ ಶತಮಾನದ ಅವಧಿಗೆ. ಭಾಸ, ಭವಭೂತಿ ಇತ್ಯಾದಿ ಕವಿಗಳೂ ಆತನನ್ನು ನಾರಾಯಣನ ಮನುಷ್ಯಾವತಾರವೆಂದು ವರ್ಣಿಸಿದ್ದರು. ಕ್ರಿ.ಶ. 6ನೇ ಶತಮಾನದಲ್ಲಿ ರಾಮನ ವಿಗ್ರಹ ಲಕ್ಷಣವನ್ನು ವರಾಹಮಿಹಿರನು ವಿವರಿಸಿದ್ದ.ಆದರೂ ಗುಪ್ತರ ಕಾಲದ ಕೊನೆಯವರೆಗೂ ವಿಷ್ಣುವಿನ ಅವತಾರಗಳಲ್ಲಿ ದೇಗುಲಗಳ ಮಟ್ಟಿಗೆ ಕೃಷ್ಣ, ವರಾಹ, ನರಸಿಂಹರಿಗೇ ಹೆಚ್ಚು ಪ್ರಾಶಸ್ತ್ಯ. ರಾಮನ ಪ್ರಭಾವ ಕಾಶ್ಮೀರಕ್ಕೂ ಚಾಚಿತ್ತಾದರೂ ಅಲ್ಲಿ 7ನೇ ಶತಮಾನದ ಬಳಿಕ ಬೆಳೆದ ಪಾಶುಪತ-ಪ್ರತ್ಯಭಿಜ್ಞ ಶೈವ, ಕೌಲ ಪಂಥಗಳು ರಾಮನ ಪ್ರಭಾವವನ್ನು ಕುಗ್ಗಿಸಿದವು. ರಾಮನ ಉಲ್ಲೇಖ ಕಾಣುವ ಪುರಾಣಗಳಲ್ಲಿ ಪ್ರಧಾನವಾದವು ವಿಷ್ಣು ಪುರಾಣ, ವಾಯು, ಮತ್ಸ್ಯ ಮತ್ತು ವರಾಹಪುರಾಣ. ಹಾಗಾಗಿ ಸುಮಾರು ಕ್ರಿ.ಶ. 6-7ನೇ ಶತಮಾನದ ಕಾಲಕ್ಕೆ ರಾಮನು ಪುರಾಣಗಳಲ್ಲೂ ಪ್ರಾಶಸ್ತ್ಯವನ್ನು ಪಡೆಯುತ್ತಾನೆ, ಭಾಗವತ ಪುರಾಣದವರೆಗೂ. ಪುರಾಣಗಳು ಆತನನ್ನು ಅವತಾರ ಪುರುಷನೆಂದು ಘೋಷಿಸಿದರೆ, ಆತನನ್ನು ಮಾನುಷ ಜಗತ್ತಿನಲ್ಲಿ ಒಬ್ಬ ಆದರ್ಶಪುರುಷನಾಗಿ ಬೆಳೆಸಿದ್ದು ರಾಮಾಯಣದ ಆಧಾರದಲ್ಲಿ ರಚಿತವಾದ ಕಾವ್ಯ-ನಾಟಕಗಳು. ಸರ್ವಾಕರ್ಷಣೀಯವಾದ ಆದರ್ಶ ವ್ಯಕ್ತಿತ್ವದ, ಸುಂದರ ಚಿತ್ರಣವನ್ನು ನೀಡಿದ್ದು ಈ ಲೌಕಿಕ ಕಾವ್ಯಗಳು. ಮಾನವೀಯ ಮೌಲ್ಯಗಳ ಶ್ರೀಮಂತಿಕೆಯನ್ನು ಎತ್ತಿ ತೋರಿಸುವ ವ್ಯಕ್ತಿತ್ವವನ್ನು ಈ ಸಾಹಿತ್ಯದಲ್ಲಿ ನಾವು ಕಾಣುತ್ತೇವೆ – ಮರ್ಯಾದಾ ಪುರುಷೋತ್ತಮನ ರಾಮಾಯಣ (ಅರ್ಥಾತ್ ‘ರಾಮ ನಡೆದ ದಾರಿ’). ಗೀತೆಯಲ್ಲಿ ರಾಮನೊಬ್ಬ ಶ್ರೇಷ್ಠ ‘ಶಸ್ತ್ರಧಾರಿ’ ಅಷ್ಟೆ. ‘ರಾಮಂ ಶಸ್ತ್ರಭೃತಾಮ್ಯಹಂ’ (ಶಸ್ತ್ರಧಾರಿಗಳಲ್ಲಿ ನಾನು ರಾಮನಾಗಿದ್ದೇನೆ – ಕೃಷ್ಣನ ಮಾತುಗಳು). ಎಲ್ಲ ಸಂಸ್ಕೃತಿಗಳಲ್ಲೂ, ಎಲ್ಲ ದೇಶಗಳಲ್ಲೂ ಆದರ್ಶ, ಜನಪ್ರಿಯ ಪುರುಷ ರಾಮ. ಆತನ ವಂಶ ಸೂರ್ಯನದ್ದು. ಸೂರ್ಯನಂತೆ ಎಲ್ಲ ರಾಷ್ಟ್ರಗಳಲ್ಲೂ, ಧರ್ಮಗಳಲ್ಲೂ ಆದರ್ಶಪುರುಷ – ಪುರುಷೋತ್ತಮ. ಎಲ್ಲರ ಹೃದಯ ದಲ್ಲಿ ನೆಲೆನಿಂತಿರುವ; ಸಭ್ಯತೆ, ಮಾನವೀ ಯತೆ, ಶುದ್ಧಚಾರಿತ್ರ್ಯ, ಆದರ್ಶ ಜೀವನದ ಬದ್ಧತೆ-ಇವೆಲ್ಲಕ್ಕೂ ಒಂದು ಮೌಲ್ಯಪ್ರಜ್ಞೆ ರಾಮ. ಈ ಗುಣಗಳಲ್ಲಿ ಅವನನ್ನು ಮೀರಿ ಯಾವ ದೇವತೆಯೂ ಇಲ್ಲ. ಅವನನ್ನು ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿಯೇ ಅವನು ಹುಟ್ಟಿದ ನೆಲ ‘ಅಯೋಧ್ಯೆ’ – ಯಾರಿಗೂ ಗೆಲ್ಲಲು ಅಸಾಧ್ಯವಾದದ್ದು.
– ಪ್ರೊ| ಪಿ. ಶ್ರೀಪತಿ ತಂತ್ರಿ