Advertisement
ಫೆಬ್ರವರಿ 2016ರಲ್ಲಿ ತೆಗೆದುಕೊಂಡ ನಿರ್ಣಯದಂತೆ ಸಣ್ಣ ಉಳಿತಾಯದ ಬಡ್ಡಿ ದರಗಳು ಪ್ರತಿ ತ್ತೈಮಾಸಿಕಕ್ಕೊಮ್ಮೆ ಬದಲಾಗುತ್ತವೆ. ಆ ಮೊದಲು ಅವು ವರ್ಷಕ್ಕೊಮ್ಮೆ ಬದಲಾಗುತ್ತಿದ್ದವು ಮತ್ತು ಅದಕ್ಕೂ ಮೊದಲು ಯಾವಾಗಾದರೊಮ್ಮೆ ಬಡ್ಡಿ ದರಗಳು ಬದಲಾಗುತ್ತಿದ್ದವು. ಸದ್ಯದ ಪದ್ಧತಿಯಲ್ಲಿ ಮಾರುಕಟ್ಟೆ ದರಕ್ಕೆ ಅನುಸಾರವಾಗಿ ಪ್ರತಿ ಜನವರಿ, ಎಪ್ರಿಲ್, ಜುಲೈ ಹಾಗೂ ಅಕ್ಟೋಬರ್ 1ನೆಯ ತಾರೀಕಿನಿಂದ ಅನ್ವಯವಾಗುವಂತೆ ಬಡ್ಡಿ ದರಗಳು ಪರಿಷ್ಕೃತಗೊಳ್ಳುತ್ತವೆ.
Related Articles
Advertisement
3. ಮಂತ್ಲಿ ಇನ್‌ಕಂ ಸ್ಕೀಂ (MIS): ಪ್ರತಿ ತಿಂಗಳೂ ಬಡ್ಡಿ ನೀಡುವ 5 ವರ್ಷಗಳ ಈ ಸ್ಕೀಂ ವಾರ್ಷಿಕ 7.6% ಬಡ್ಡಿ ನೀಡುತ್ತದೆ. ಗರಿಷ್ಠ ಮೊತ್ತ ರೂ. 4.5 ಲಕ್ಷ (ಸಿಂಗಲ್ ಎಕೌಂಟ್), ರೂ. 9 ಲಕ್ಷ (ಜಾಯಿಂಟ್ ಎಕೌಂಟ್)ಆಗಿರುತ್ತದೆ. ಇಲ್ಲಿ ಪ್ರತಿ ತಿಂಗಳು ಬರುವ ಮಾಸಿಕ ಬಡ್ಡಿಯನ್ನು ಅದೇ ಅಂಚೆ ಕಚೇರಿಯಲ್ಲಿ ಆರ್‌ಡಿ ಮಾಡಿದರೆ ಒಟ್ಟಾರೆ ಪ್ರತಿಫಲ 8% ಅಂದಾಜು ದೊರಕುತ್ತದೆ. ಹಲವಾರು ಏಜೆಂಟರು ಈ ರೀತಿ ಖಾತೆ ಮಾಡಿಸಿಕೊಡುತ್ತಾರೆ. ಉತ್ತಮ ಭದ್ರತೆ, ಬಡ್ಡಿದರ, ಮಾಸಿಕ ಬಡ್ಡಿಹರಿವು ಇರುವ ಈ ಯೋಜನೆ ತೆರಿಗೆಯಾರ್ಹ ಆದಾಯ. ಹೂಡಿಕೆ ಮೇಲೂ ಪ್ರತಿಫಲದ ಮೇಲೂ ಯಾವುದೇ ರೀತಿ ಕರವಿನಾಯತಿ ಇರುವುದಿಲ್ಲ.
4. ಕಿಸಾನ್ ವಿಕಾಸ ಪತ್ರ (KVP): ಅಂಚೆ ಕಚೇರಿಯ ಇನ್ನೊಂದು ಯೋಜನೆ. 112 ತಿಂಗಳುಗಳಲ್ಲಿ ಡಬಲ್ ಆಗುವ ಈ ಸ್ಕೀಂ ವಾರ್ಷಿಕ 7.6% ಪ್ರತಿಫಲ ನೀಡುತ್ತದೆ. ಕನಿಷ್ಠ ಮೊತ್ತ ರೂ. 100, ಗರಿಷ್ಠ ಮಿತಿಯಿಲ್ಲ. ಬಡ್ಡಿಯ ಮೇಲೆ ತೆರಿಗೆ ಇದೆ. ಇದರಲ್ಲಿ ಭದ್ರತೆ, ಪ್ರತಿಫಲವೂ ಇದೆ. ಆದರೆ ದಿಢೀರ್ ದುಡ್ಡು ಬೇಕೆಂದಾಗ (ಲಿಕ್ವಿಡಿಟಿ), ತೆರಿಗೆಯ ಮಟ್ಟಿಗೆ ಆಕರ್ಷಕವಲ್ಲ.
5. ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF): 15 ವರ್ಷಗಳ ತೆರಿಗೆ ವಿನಾಯಿತಿ ಇರುವ, 7.9% ಬಡ್ಡಿದರದ ಈ ಸಿಹಿ ಅಂಬಟೆಕಾಯಿಯ ಬಗ್ಗೆ ಸವಿವರವಾಗಿ ಕಾಕುವಿನಲ್ಲಿ ಈ ಹಿಂದೆ ಬರೆದಿದ್ದೇನೆ. ಇದರಲ್ಲಿ ರೂ. 1,50,000ವರೆಗೆ ಸೆಕ್ಷನ್ 80 ಸಿ ಹಾಗೂ ಪ್ರತಿಫಲ ಸಂಪೂರ್ಣವಾಗಿ ಸೆಕ್ಷನ್ 10ರ ಅನ್ವಯ ಕರರಹಿತ. ಇದು ಭದ್ರತೆ, ರಿಟರ್ನ್, ತೆರಿಗೆ ವಿನಾಯಿತಿ ಮಟ್ಟಿಗೆ ಉತ್ತಮವಾದರೂ ಲಿಕ್ವಿಡಿಟಿಯ ಮಟ್ಟಿಗೆ ಅಷ್ಟು ಉತ್ತಮವಲ್ಲ. ಆದರೂ ಈ ಯೋಜನೆಯಲ್ಲಿ ಖಾತೆ ತೆರೆದ 3ನೆಯ ವರ್ಷದಿಂದ ಸಾಲ ಸೌಲಭ್ಯವೂ 7ನೆಯ ವರ್ಷದಿಂದ ಆಂಶಿಕ ಹಿಂಪಡೆತವೂ ಇವೆ.
6. ಪೋಸ್ಟಲ್ ಟೈಮ್ ಡೆಪಾಸಿಟ್ (TD): ಚಾರಿತ್ರಿಕವಾಗಿ ಒಂದು ಉತ್ತಮ ಹೂಡಿಕಾ ಪದ್ಧತಿಯಾಗಿ ಬೆಳೆದು ಬಂದ ಟೈಮ್ ಡೆಪಾಸಿಟ್ ಎಂಬ ಈ ಎಫ್ಡಿ ಸ್ಕೀಂ ಇನ್ನು ಮುಂದೆ 5 ವರ್ಷಕ್ಕೆ 7.7% ನೀಡುತ್ತದೆ ಹಾಗೂ 1, 2 ಹಾಗೂ 3 ವರ್ಷಗಳಿಗೆ 6.7%, 7.0%, 7.2% ನೀಡುತ್ತದೆ. 5 ವರ್ಷಗಳ ಟಿಡಿಗಳು ಮಾತ್ರ ಸೆಕ್ಷನ್ 80 ಸಿ ಆದಾಯ ವಿನಾಯಿತಿಗೆ ಅರ್ಹ; ಅದರಿಂದ ಅಲ್ಪಕಾಲಿಕ ಡೆಪಾಸಿಟ್‌ಗಳು ಅಲ್ಲ. ಬ್ಯಾಂಕು ಎಫ್ಡಿಗಳ ಮೇಲಿನ ಬಡ್ಡಿ 7.0% ಆಸುಪಾಸು ಇಳಿದ ಸಂದರ್ಭದಲ್ಲಿ ಅಂಚೆಯಣ್ಣನೇ ಉತ್ತಮ ಅನ್ನಿಸುತ್ತದೆ.
7. ಸುಕನ್ಯಾ ಸಮೃದ್ಧಿ ಯೋಜನೆ (SSS): 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗಾಗಿ ಮಾತ್ರ ಇರುವ ಈ ಯೋಜನೆ ಈಗ 8.4% ಕರಮುಕ್ತ ಪ್ರತಿಫಲ ನೀಡುತ್ತದೆ. ಹೂಡಿಕೆಯ ಮೇಲೆಯೂ ಬಡ್ಡಿಯ ಮೇಲೂ ಹಿಂಪಡೆತದ ಮೇಲೂ ಕರವಿನಾಯಿತಿ ಉಳ್ಳ ಈ ಯೋಜನೆ ನಿಗದಿತ ಆದಾಯದ ಯೋಜನೆಗಳ ಪೈಕಿ ಅತ್ಯುತ್ತಮವಾದದ್ದೆಂದು ಹೇಳಬಹುದು.
8. ಆರ್‌ಡಿಗಳು (RD): ಅಂಚೆ ಕಚೇರಿಯ ರಿಕರಿಂಗ್ ಡೆಪಾಸಿಟ್ ಅಥವಾ ನಿರಂತರ ಠೇವಣಿಯಲ್ಲಿ ಪ್ರತಿ ತಿಂಗಳೂ ಒಂದು ನಿಗದಿತ ಮೊತ್ತ ಕಟ್ಟುವ ಕರಾರು. ಇದು 5 ವರ್ಷಗಳ ಸ್ಕೀಂ ಹಾಗೂ ಇದರಲ್ಲಿ 7.2% ಬಡ್ಡಿದರ ಯಾವುದೇ ಕರವಿನಾಯಿತಿಗಳು ಇಲ್ಲದೆ ನೀಡಲಾಗುತ್ತದೆ. ಪ್ರತಿ ತ್ತೈಮಾಸಿಕದಲ್ಲಿ ಚಕ್ರೀಕೃತಗೊಳ್ಳುವ ಕಾರಣ ಈ ಬಡ್ಡಿ ವಾರ್ಷಿಕವಾಗಿ ಸುಮಾರು 7.4% ಪ್ರತಿಫಲ ನೀಡಿದಂತಾಯಿತು. ಇದು ಭದ್ರ. ಆದರೆ, ಬಡ್ಡಿದರ ಸಾಧಾರಣ ಮತ್ತು ಲಿಕ್ವಿಡಿಟಿ ಚೆನ್ನಾಗಿಲ್ಲ.
ಗಮನಿಸಿ: ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಈ ಹೊಸ ದರಗಳು ಹಳೆ ಹಾಗೂ ಹೊಸ ಖಾತೆಗಳಿಗೂ ಅನ್ವಯಿಸುತ್ತವೆ. ಉಳಿದೆಲ್ಲ ಖಾತೆಗಳಲ್ಲಿ ಬಡ್ಡಿ ದರಗಳು ಎಪ್ರಿಲ್ 1ರ ಬಳಿಕ ತೆರೆಯಲ್ಪಡುವ ಹೊಸ ಖಾತೆಗಳಿಗೆ ಮಾತ್ರ ಅನ್ವಯವಾಗಲಿವೆ. ಅಂದರೆ, ಪಿಪಿಎಫ್ ಗೂ ಸುಕನ್ಯಾ ಸಮೃದ್ಧಿ ಯೋಜನೆಗಳು ಪ್ರತಿ ವರ್ಷವೂ ಹೂಡಿಕೆ ಮಾಡುತ್ತಾ ಹೋಗುವ ಖಾತೆಗಳು. ಅಂತಹ ಖಾತೆಗಳ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಆವಾಗ ಪ್ರಚಲಿತವಾಗಿರುವ ಬಡ್ಡಿ ದರಗಳನ್ನು ಅನ್ವಯಿಸಲಾಗುತ್ತವೆ. ಉಳಿದೆಲ್ಲ ಖಾತೆಗಳು ಸಿಂಗಲ್ ಡೆಪಾಸಿಟ್ ಅಥವಾ ಏಕಗಂಟಿನಲ್ಲಿ ಹೂಡಿಕೆ ಮಾಡುವಂಥವುಗಳು. ಅವುಗಳ ಮೇಲೆ ಸಿಗುವ ಅಂತ್ಯದವರೆಗಿನ ಬಡ್ಡಿ ದರವು ಹೂಡಿಕೆಯ ಸಮಯದ ದರವನ್ನು ಅನುಸರಿಸುತ್ತದೆ. ಅವು ಪ್ರತಿ ತ್ತೈಮಾಸಿಕದಲ್ಲಿ ಬದಲಾಗುವ ಬಡ್ಡಿ ದರಗಳನ್ನು ಅನುಸರಿಸುವುದಿಲ್ಲ. ಇದಕ್ಕೆ ಅಪವಾದವೆಂಬಂತೆ ಆರ್‌ಡಿ ಖಾತೆಗಳಲ್ಲಿ ಆರಂಭದ ಬಡ್ಡಿದರ ಕೊನೆಯವರೆಗೆ ಸಿಗುತ್ತದೆ. ಎಲ್ಲ ಹೂಡಿಕೆದಾರರೂ ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
– ಜಯದೇವ ಪ್ರಸಾದ ಮೊಳೆಯಾರ ; jayadev.prasad@gmail.com