Advertisement
ಹಿರಿಯರಿಂದ ಬಂದ ಕೃಷಿ ಭೂಮಿಯಲ್ಲಿ ಬಾಲ್ಯದಿಂದಲೇ ಕೃಷಿ ಮಾಡಿಕೊಂಡು ಬರುತ್ತಿರುವ ಯುವಕ ವಿಜಯ್, ಸಾವಯವ ತರಕಾರಿ ಕೃಷಿ, ಹೈನುಗಾರಿಕೆ, ಭತ್ತದ ಕೃಷಿ ನಡೆಸಿ ಯಶಸ್ವಿಯಾದವರು. ಇಸ್ರೇಲ್‌ನಲ್ಲಿ ಐದು ವರ್ಷ ಉದ್ಯೋಗದಲ್ಲಿದ್ದಾಗ ಅವರು ಅಲ್ಲಿನ ಕೃಷಿ ಪದ್ಧತಿಯ ಕುರಿತು ಬಿಡುವಿನ ವೇಳೆ ಅಧ್ಯಯನ ನಡೆಸಿದವರು. ಊರಿಗೆ ಮರಳಿದ ಬಳಿಕ ಕೃಷಿಯಲ್ಲಿ ಅದನ್ನು ಅನುಷ್ಠಾನಿಸಿದರು. ಕಳೆದ ಹಲವು ವರ್ಷಗಳಿಂದ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ನಡೆಸಿರುವ ಅವರು ಈಗ ಭತ್ತದ ಕೃಷಿಯಲ್ಲಿ ಥರ್ಮೋಕೋಲ್ ಬಳಸಿ ಕಡಿಮೆ ಅವಧಿಯಲ್ಲಿ ಕಡಿಮೆ ಕಾರ್ಮಿಕರನ್ನು ಬಳಸಿ ಕೃಷಿ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ.
ಗದ್ದೆ ಉಳುಮೆಯ ಬಳಿಕ ಬೀಜ ಬಿತ್ತಿ, ನೇಜಿ ತೆಗೆದು ನಾಟಿ ಮಾಡಲು ಸುಮಾರು 30 ದಿನ ಬೇಕಾಗುತ್ತದೆ. ಇದಕ್ಕಾಗಿ ಎರಡು ಬಾರಿ ಕೃಷಿ ಕೂಲಿ ಕಾರ್ಮಿಕರ ಅಗತ್ಯವಿರುತ್ತದೆ. ವಿಜಯ್ ಅವರು ಮೀನಿನ ಬೋಟ್‌ಗಳಲ್ಲಿ ಫ್ರೀಝರ್‌ಗೆ ಬಳಸಿ ಗುಜರಿಗೆ ಹಾಕಿರುವ ಥರ್ಮೋಕೋಲ್ ಶೀಟ್ ಗಳನ್ನು ಒಟ್ಟು ಸೇರಿಸಿ ಚಾಪೆ ನೇಜಿ ಮಾದರಿಯಲ್ಲಿ ಥರ್ಮೋಕೋಲ್ ಶೀಟ್ ಗಳನ್ನು ಗದ್ದೆಯಲ್ಲಿಟ್ಟು ಅದರ ಮೇಲೆ ಮಣ್ಣು ಹಾಕಿ ಬೀಜ ಬಿತ್ತನೆ ನಡೆಸುತ್ತಾರೆ. 10 ದಿನಗಳಲ್ಲಿ ಬಿತ್ತಿದ ಬೀಜ ನೇಜಿಯಾಗಿ ನಾಟಿ ನಡೆಸಲು ಯೋಗ್ಯವಾಗಿರುತ್ತದೆ ಎನ್ನುತ್ತಾರೆ ವಿಜಯ್. ಥರ್ಮೋಕೋಲ್ ನಲ್ಲಿ ನೇಜಿ ಹಾಕುವುದರಿಂದ ಗದ್ದೆಯ ನೀರಿನಲ್ಲಿ ಥರ್ಮೋಕೋಲ್ ತೇಲುತ್ತಾ ಇರುತ್ತದೆ. ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ದೂಡಿಕೊಂಡೇ ಸರಿಸಲು ಅವಕಾಶವಿರುತ್ತದೆ. ಥರ್ಮೋಕೋಲ್ ನೀರಿನಲ್ಲಿ ತೇಲುವುದರಿಂದ ಹಕ್ಕಿಗಳು ನೇಜಿಯನ್ನು ಹಾಳು ಮಾಡಲು ಬರುವುದಿಲ್ಲ. ಇನ್ನೊಂದೆಡೆ ನೇಜಿಯೂ ಹಾಳಾಗುವುದಿಲ್ಲ. ನೇಜಿ ನಾಟಿ ಮಾಡುವ ಕೂಲಿ ಕಾರ್ಮಿಕರ ಬಳಿ ಬೇಕಾದಷ್ಟು ಥರ್ಮೋಕೋಲ್ ನೇಜಿ ಸಾಗಿಸಿ ಅಲ್ಲಿಂದಲೇ ನೇರವಾಗಿ ನಾಟಿ ಮಾಡಲು ಅನುಕೂಲವಾಗು ತ್ತದೆ ಎನ್ನುತ್ತಾರೆ ಅವರು.
Related Articles
ಒಂದು ಎಕ್ರೆ ಇರುವ ಗದ್ದೆಗೆ ನೇಜಿ ತೆಗೆಯಲು ಮತ್ತು ನಾಟಿ ಮಾಡಲು ಮೂರು ದಿನಗಳ ಕಾಲ 45 ಶ್ರಮ ವಿನಿಯೋಗವಾಗುತ್ತಿತ್ತು. ಹೊಸ ವಿಧಾನದಿಂದ ಒಂದೇ ದಿನಕ್ಕೆ 8 ರಿಂದ 10 ಮಂದಿ ಕೃಷಿ ಕಾರ್ಯ ಮಾಡಿ ಮುಗಿಸಿದ್ದಾರೆ. ಮೂರನೇ ಬಾರಿ ಈ ಮಾದರಿಯಲ್ಲಿ ಕೃಷಿ ಮಾಡಲಾಗುತ್ತಿದೆ. ನೇಜಿ ನಾಟಿಗೆ ಮಾತ್ರ ಕಾರ್ಮಿಕರ ಬಳಕೆ ಮಾಡುತ್ತಿದ್ದೇನೆ. ಏಕಕಾಲದಲ್ಲಿ ಥರ್ಮೋಕೋಲ್‌ನಲ್ಲಿ ನೇಜಿ ಬಿತ್ತಿದ್ದ ಗದ್ದೆಯಲ್ಲೇ ನಾಟಿ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ವಿಜಯ್.
Advertisement
ನೇಜಿ ಕೊಳೆಯುವ ಭೀತಿಯಿಲ್ಲ ಸಾಧಾರಣವಾಗಿ ಮಳೆಗಾಲದಲ್ಲಿ ಬೀಜ ಬಿತ್ತಿದ್ದ ಬಳಿಕ ನೀರು ಹೆಚ್ಚಾದರೆ ನೇಜಿ ಕೊಳೆಯುವ ಭೀತಿ ಇರುತ್ತದೆ. ಆದರೆ ಥರ್ಮೋಕೋಲ್ ನಲ್ಲಿ ನೇಜಿ ಹಾಕುವ ಕಾರಣ ನೇಜಿ ಮುಳುಗುವ ಭೀತಿ, ಕೊಳೆಯುವ ಭೀತಿ ಇರುವುದಿಲ್ಲ. ಮಳೆ ಬಾರದಿದ್ದರೆ ನೇಜಿಗೆ ನೀರು ಹಾಯಿಸುವ ಕೆಲಸ ಮಾತ್ರ ಮಾಡಿದರೆ ಹಾಳಾಗುವ ಭೀತಿಯಿಲ್ಲ ಎನ್ನುತ್ತಾರೆ ವಿಜಯ್ ಅವರು. ಕಾರ್ಮಿಕರ ಕೊರತೆ ನೀಗಿಸಬಹುದು
ಕಾರ್ಮಿಕರ ಕೊರತೆ ಮತ್ತು ಭತ್ತದ ಕೃಷಿ ಲಾಭದಾಯಕ ಅಲ್ಲ ಎನ್ನುವ ನಿಟ್ಟಿನಲ್ಲಿ ಅನೇಕರು ಕೃಷಿಯಿಂದ ದೂರವಾಗುತ್ತಿದ್ದಾರೆ. ಥರ್ಮೋಕೋಲ್ ಬಳಸಿ ಕೃಷಿ ನಡೆಸಿದರೆ ಕಾರ್ಮಿಕರ ಕೊರತೆಯನ್ನು ನೀಗಿಸಲು ಸಾಧ್ಯವಿದೆ. ಈ ಬಗ್ಗೆ ಆಸಕ್ತರಿಗೆ ಮಾಹಿತಿ ನೀಡಲು ಸಿದ್ಧನಿದ್ದೇನೆ.
– ವಿಜಯ್ ಕುಂದರ್ ಉಳಿಯ, ಸಾವಯವ ಕೃಷಿಕರು ಸಣ್ಣ ರೈತರಿಗೆ ಅನುಕೂಲ
ವಿಜಯ್ ಅವರ ಸಾಧನೆ ವಿಶಿಷ್ಟವಾದುದು. ಥರ್ಮೋ ಕೋಲ್ ವಿಧಾನ ಸಣ್ಣ ರೈತರಿಗೆ ಅತ್ಯಂತ ಉಪಯೋಗವಾಗಿದ್ದು, ಇದರಿಂದ ಶ್ರಮ, ಸಮಯದ ಉಳಿತಾಯದೊಂದಿಗೆ ಮಳೆಗಾಲದಲ್ಲಿ ನೇಜಿ ನಷ್ಟವಾಗುವ ಭೀತಿಯನ್ನು ತಪ್ಪಿಸಬಹುದು. ಅತ್ಯಂತ ಸರಳ ಮತ್ತು ವಿನೂತನವಾದ ಮಾದರಿಯಾಗಿದೆ. ಈಗಾಗಲೇ ಇದರ ಅಧ್ಯಯನ ನಡೆಸಿ ಜಿಲ್ಲೆಯ ಮತ್ತು ಹೊರಜಿಲ್ಲೆಯ ಕೃಷಿ ಅಧಿಕಾರಿಗಳಿಗೆ ಮತ್ತು ರೈತರಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
– ಮುರಳೀಧರ ಹಮ್ಮನ್ನವರ್, ಸಹಾಯಕ ಕೃಷಿ ಅಧಿಕಾರಿ,ಮಂಗಳೂರು — ವಸಂತ್ ಎನ್. ಕೊಣಾಜೆ