ನಿರ್ದೇಶಕ ಕೆ.ಶಿವರುದ್ರಯ್ಯ ಅವರು “ಮಾರಿಕೊಂಡವರು’ ಎಂಬ ಸಿನಿಮಾ ಮಾಡಿರೋದು ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ವಾರ ತೆರೆ ಕಾಣುತ್ತಿದೆ. “ಮಾರಿಕೊಂಡವರು’ ಚಿತ್ರ ಲೇಖಕ ದೇವನೂರು ಮಹಾದೇವ ಅವರ ಮೂರು ಕಥೆಗಳನ್ನು ಆಧರಿಸಿದ್ದು. “ಮಾರಿಕೊಂಡವರು’, “ಡಾಂಬರು ಬಂದದು’ ಹಾಗೂ “ಗ್ರಸ್ತರು’ ಎಂಬ ಮೂರು ಕಥೆಗಳನ್ನು ಸಂಯೋಜಿಸಿ ಈ ಚಿತ್ರ ಮಾಡಲಾಗಿದೆ. ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ದೇವನೂರು ಎಂಬ ಕುಗ್ರಾಮದಲ್ಲಿ ನಡೆವ ಪ್ರಸಂಗಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಸುನೀಲ್ ಕುಮಾರ್, ಸಂಚಾರಿ ವಿಜಯ್, ಸೋನು ಗೌಡ, ಸಂಯುಕ್ತಾ ಹೊರನಾಡು, ಸರ್ದಾರ್ ಸತ್ಯ ಪ್ರಮುಖ ಪಾತ್ರ ಮಾಡಿದ್ದಾರೆ.
ಚಿತ್ರ 70ರ ದಶಕದಲ್ಲಿ ನಡೆಯುವುದರಿಂದ ಅದಕ್ಕೆ ಪೂರಕವಾದ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದ್ದು, ಸುಮಾರು 30ಕ್ಕೂ ಹೆಚ್ಚು ಲೊಕೇಶನ್‌ಗಳನ್ನು ಈ ಚಿತ್ರದಲ್ಲಿ ಬಳಸಲಾಗಿದೆಯಂತೆ. ಪಾತ್ರಗಳಿಗೆ ಪೂರಕವಾದ ಕಲಾವಿದರು ಸಿಕ್ಕ ಹಾಗೂ ಕಂಟಿನ್ಯೂಟಿ ಕಾಯ್ದುಕೊಂಡ ಖುಷಿ ನಿರ್ದೇಶಕ ಶಿವರುದ್ರಯ್ಯ ಅವರದು. “ಕಲಾವಿದರ ನಟನೆ ಅವರ ಕಣ್ಣು, ಮುಖದಲ್ಲಿ ವ್ಯಕ್ತವಾಗಬೇಕು. ಆಗ ಪಾತ್ರಕ್ಕೆ ಜೀವ ತುಂಬಲು ಸಾಧ್ಯ. ಈ ಚಿತ್ರದ ಪ್ರತಿ ಕಲಾವಿದರು ಪಾತ್ರವನ್ನು ಜೀವಿಸಿದ್ದಾರೆ’ ಎನ್ನುವುದು ಶಿವರುದ್ರಯ್ಯ ಮಾತು. ಚಿತ್ರವನ್ನು ಕೆಲವೇ ಕೆಲವು ಚಿತ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಹಿರಿಯ ನಿರ್ಮಾಪಕ ಬಿ.ಎನ್.ಗಂಗಾಧರ್ ಅವರು ರಿಲೀಸ್‌ಗೆ ಸಾಥ್ ನೀಡುತ್ತಿದ್ದಾರಂತೆ. ಚಿತ್ರದ ನಿರ್ಮಾಪಕರಾದ ಗುರುರಾಜ್ ಹಾಗೂ ವೆಂಕಟೇಶ್ ಕೂಡಾ ಸಿನಿಮಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಚಿತ್ರದಲ್ಲಿ ಸರ್ದಾರ್ ಸತ್ಯ ಕೂಡಾ ನಟಿಸಿದ್ದಾರೆ. ಅವರಿಗೆ ಶಿವರುದ್ರಯ್ಯ ಜೊತೆ ಕೆಲಸ ಮಾಡಿ ಖುಷಿಯಾಗಿದೆಯಂತೆ. ಅದಕ್ಕೆ ಕಾರಣ ಅವರ ಅಚ್ಚುಕಟ್ಟಾದ ಕೆಲಸ. ಯಾವ ದೃಶ್ಯ ಹೇಗೆ ಮೂಡಿಬರಬೇಕೆಂಬ ಸ್ಪಷ್ಟ ಕಲ್ಪನೆ ಅವರಿಗಿದೆ ಎಂಬುದು ಸತ್ಯ ಮಾತು. ಚಿತ್ರದಲ್ಲಿ ಸೋನು ಗೌಡ, ಶಿಶಿರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ನಿರ್ದೇಶಕ ಶಿವರುದ್ರಯ್ಯ ಅವರು ನಮ್ಮ ತಂದೆಯ ಆಪ್ತರು. ಯಾವ ಪಾತ್ರ ಕೊಟ್ಟರೂ ಒಪ್ಪಿಕೋ ಎಂದರು. ತುಂಬಾ ಒಳ್ಳೆಯ ಪಾತ್ರವೇ ಸಿಕ್ಕಿದೆ. ಪಾತ್ರ ಕೂಡಾ ತುಂಬಾ ಇಷ್ಟವಾಯಿತು’ ಎನ್ನುವುದು ಸೋನು ಮಾತು. ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಕೂಡಾ ನಟಿಸಿದ್ದು, ಅವರಿಲ್ಲಿ ಲಕ್ಷ್ಮೀ ಎಂಬ ಪಾತ್ರ ಮಾಡಿದ್ದಾರೆ. “ನಿರ್ದೇಶಕರು ಫ್ರೆàಮ್ ಟು ಫ್ರೆàಮ್ ವಿವರಿಸುತ್ತಿದ್ದರು. ನನ್ನದು ತುಂಬಾ ದ್ವಂದ್ವ ಇರುವ ಪಾತ್ರ. ಬಾಡಿ ಲಾಂಗ್ವೇಜ್‌ನಲ್ಲೇ ಎಲ್ಲವನ್ನು ಹೇಳಬೇಕಿತ್ತು. ಈ ಚಿತ್ರ ಒಂದು ಒಳ್ಳೆಯ ಅನುಭವ ಕೊಟ್ಟಿದ್ದು ಸುಳ್ಳಲ್ಲ’ ಎಂಬುದು ಸಂಯುಕ್ತಾ ಮಾತು. ಚಿತ್ರದಲ್ಲಿ ನಟಿಸಿದ ಮಧುಸೂಧನ್ ಕೂಡಾ ತಮ್ಮ ಅನುಭವ ಹಂಚಿಕೊಳ್ಳುವ ಜೊತೆಗೆ ನಿರ್ದೇಶಕರಿಂದ ಮೆಚ್ಚುಗೆ ಕೂಡಾ ಪಡೆದರು.