ಬೆಂಗಳೂರು : ‘ಬಜೆಟ್ ಕಲಾಪಕ್ಕೆ ಗೈರಾಗಿರುವ ಯಾವುದೇ ಶಾಸಕರು ನನ್ನ ಸಂಪರ್ಕಿಸಿಲ್ಲ. ಯಾವುದೇ ಶಾಸಕರು ರಾಜೀನಾಮೆ ನೀಡುವ ವಿಚಾರವೂ ನನಗೆ ಗೊತ್ತಿಲ್ಲ; ಗೈರಾಗಿರುವ ಶಾಸಕರ ವಿರುದ್ದ ಕ್ರಮ ತೆಗೆದುಕೊಳ್ಳಲು ನಾನ್ಯಾರು’ ಎಂದು ರಾಜ್ಯ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
‘ಸದನ ಕಲಾಪಕ್ಕೆ ಯಾವುದೇ ಶಾಸಕರು ಬಾರದಿದ್ದರೆ ನಾನೇನೂ ಮಾಡುವಂತಿಲ್ಲ; ನಲ್ವತ್ತು ಶಾಸಕರು ರಾಜೀನಾಮೆ ಕೊಟ್ಟರೂ ನಾನು ತೆಗೆದುಕೊಳ್ಳುತ್ತೇನೆ’ ಎಂದು ರಮೇಶ್ ಕುಮಾರ್ ನಿರ್ವಿಕಾರ ಚಿತ್ತರಾಗಿ ಹೇಳಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜನ್ನಪ್ಪನಹಳ್ಳಿ ಗ್ರಾಮದಲ್ಲಿ ಗಣೇಶಮೂರ್ತಿ ಮತ್ತು ಪುಷ್ಕರಿಣಿಯನ್ನು ಅನಾವರಣಗೊಳಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಪ್ರಕೃತ ನಾಪತ್ತೆಯಾಗಿರುವ ವಿವಾದಿತ ಶಾಸಕ ಕಂಪ್ಲಿ ಗಣೇಶ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್, “ಶಾಸಕ ಕಂಪ್ಲಿ ಗಣೇಶ್ ಅವರನ್ನು ಬಂಧಿಸುವಂತೆ ಸೂಚನೆ ನೀಡಲು ನಾನೇನು ಪೊಲೀಸ್ ಅಧಿಕಾರಿಯಾ? ಎಂದು ಪ್ರಶ್ನಿಸಿದರು.
‘ನಾನು ಇಲ್ಲಿಗೆ ಬಂದು ದೇವರಲ್ಲಿ ನಾಡಿಗೆ ಮಳೆ ಬೆಳೆ ಸಮೃದ್ದಿ ಉಂಟಾಗಲಿ ಎಂದು ಪ್ರಾರ್ಥಿಸಿದ್ದೇನೆಯೇ ವಿನಾ ರಾಜಕೀಯ ಬೆಳವಣಿಗೆ ಬಗ್ಗೆ ದೇವರಲ್ಲಿ ಅಹವಾಲು ಹೇಳಲು ಬಂದಿಲ್ಲ’ ಎಂದು ವ್ಯಂಗ್ಯವಾಡಿದರು.