ಬೆಂಗಳೂರು : ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಉಪ ಸಭಾಪತಿ ಸ್ಥಾನ ಪಡೆದುಕೊಂಡಿರುವ ಬಿಜೆಪಿ ಈಗ ಸಭಾಪತಿ ಸ್ಥಾನದಿಂದ ಪ್ರತಾಪಚಂದ್ರ ಶೆಟ್ಟಿ ಅವರನ್ನು ಕೆಳಗೆ ಇಳಿಸಲು ತಂತ್ರ ಹೂಡಿದೆ.
ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ಕುರಿತು ಇನ್ನೂ ಅಧಿಕೃತ ತೀರ್ಮಾನ ಕೈಗೊಳ್ಳದಿರುವ ಕಾರಣ ಫೆ. 2ರಂದು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಒತ್ತಡ ಹೇರಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಜ. 18ರಂದು ಅವಿಶ್ವಾಸದ ನೋಟಿಸ್ ನೀಡಿದ್ದು, ಫೆ. 2ಕ್ಕೆ 14 ದಿನ ಮುಕ್ತಾಯ ವಾಗಲಿದೆ. ಬಳಿಕ ಸಭಾಪತಿ ಕಾರ್ಯ ಕಲಾಪದ ಪಟ್ಟಿ ಯಲ್ಲಿ ಸೇರಿಸಿ, 5 ದಿನಗಳ ಒಳಗಾಗಿ ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ನೀಡಬಹುದು.
ಅವಿಶ್ವಾಸ ನಿರ್ಣಯ ಚರ್ಚೆಗೆ ಬರುವ ಮೊದಲೇ ಸಭಾಪತಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಫೆ. 3ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅವಿಶ್ವಾಸ ನಿರ್ಣಯಕ್ಕೆ ಯಾವ ರೀತಿಯ ಕಾರ್ಯತಂತ್ರ ರೂಪಿಸಬೇಕು ಎನ್ನುವ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಹೀಗಾಗಿ ಆವರೆಗೂ ಸಭಾಪತಿಯವರು ರಾಜೀನಾಮೆ ನೀಡುವುದು ಅನುಮಾನ ಎನ್ನಲಾಗಿದೆ.
ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಫೆ. 2ರ ಒಳಗಾಗಿ ರಾಜೀನಾಮೆ ನೀಡ ದಿದ್ದರೆ, ಅವರ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಫೆ. 2ರಂದೇ ಚರ್ಚೆಗೆ ಅವಕಾಶ ನೀಡ ಬೇಕೆಂದು ಸದನದಲ್ಲಿ ಒತ್ತಡ ಹೇರಲು ಬಿಜೆಪಿ ಸದಸ್ಯರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.