Advertisement

ಪ್ರಮಾಣ ವಚನ ವೀಕ್ಷಣೆಗೆ ಸ್ಪೀಕರ್‌ಗೇ ಅಡ್ಡಿ

06:35 AM Jun 07, 2018 | |

ಬೆಂಗಳೂರು: ನೂತನ ಸಚಿವರ ಪ್ರಮಾಣವಚನ ಸಮಾರಂಭದ ವೇಳೆ ಶಿಷ್ಠಾಚಾರದ ಅಚಾತುರ್ಯ ನಡೆದಿದೆ. ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೇನೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ.

Advertisement

ರಾಜಭವನದ ಮುಂದೆ ಭಾರಿ ಸಂಖ್ಯೆಯಲ್ಲಿ ವಾಹನಗಳ ಜಮಾವಣೆ, ಜನಸಂದಣಿ ಹಾಗೂ ಭದ್ರತಾ ಸಿಬ್ಬಂದಿಯ ಕರ್ತವ್ಯ ಲೋಪದಿಂದಾಗಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡ ಸ್ಪೀಕರ್‌ ರಮೇಶ್‌ ಕುಮಾರ್‌ ರಾಜಭವನ ಪ್ರವೇಶಿಸಲು ಸಾಧ್ಯವಾಗಿಲ್ಲ. ಅರ್ಧ ಗಂಟೆ ಕಾದ ಅವರು ವಿಧಿಯಿಲ್ಲದೆ ಅಲ್ಲಿಂದ ವಾಪಸ್‌ ಆದರು.


ಇದಕ್ಕೆ ತೀವ್ರ ಸಿಟ್ಟು ಹೊರ ಹಾಕಿರುವ ರಮೇಶ್‌ ಕುಮಾರ್‌ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ತೀಕ್ಷ್ಣ ಧಾಟಿಯಲ್ಲಿ ಪತ್ರ ಬರೆದು ತಮ್ಮ ಅಕ್ರೋಶವನ್ನು ಹೊರ ಹಾಕಿದ್ದಾರೆ. ಪತ್ರದ ಪ್ರತಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.

ಸ್ಪೀಕರ್‌ ಪತ್ರದ ಪೂರ್ಣ ಪಾಠ
“ತಮ್ಮ ಆಹ್ವಾನದ ಮೇರೆಗೆ ಸಚಿವರ ಪ್ರಮಾಣ ವಚನ ಹಾಗೂ ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಹೊರಟು ಬಂದು ರಾಜಭವನದ ಮುಂದೆ ಅರ್ಧ ಗಂಟೆ ಕಾದಿದ್ದು, ಅಸಹಾಯಕನಾಗಿ ಹಿಂದಿರುಗಿರುತ್ತೇನೆ. ಈ ಪರಿಸ್ಥಿತಿಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿಧಾನಪರಿಷತ್‌ ಸಭಾಪತಿಗಳ ಹೊರತಾಗಿ ಮತ್ತೂಂದು ಸಾಂವಿಧಾನಿಕ ಸ್ಥಾನ ವಿಧಾನಸಭಾಧ್ಯಕ್ಷರದ್ದು ಮಾತ್ರ.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅನಿವಾರ್ಯವಾಗಿ ಹಾಜರಿರಲೇ ಬೇಕು. ಇಡೀ ಸರ್ಕಾರಿ ವ್ಯವಸ್ಥೆ ಮಾನ್ಯ ಸಭಾಧ್ಯಕ್ಷರಿಗೆ ಹಾಗೂ ಸಭಾಪತಿಗಳಿಗೆ ಇಂದು ಗೌರವಯುತ ವ್ಯವಸ್ಥೆ ಮಾಡುವುದು ಜವಾಬ್ದಾರಿಯಾಗಿರುತ್ತದೆ. ನಿಮ್ಮ ಅಧಿಕಾರಿಗಳ ದುರಂಹಕಾರ, ಅಜ್ಞಾನ ಹಾಗೂ ರಾಜಭವನದ ಒಳಗಿರುವ ಅಧಿಕಾರಿಗಳ ದುರಂಹಕಾರ ಇದಕ್ಕೆ ಕಾರಣವಾಗಿದೆ. ಇವೆಲ್ಲವನ್ನೂ ಮೀರಿ ರಾಜಭವನದ ಒಳಗೂ ಹಾಗೂ ಹೊರಗೂ ತುಂಬಿದ್ದಂತಹ ವಾಹನಗಳು ಯಾವವು? ಯಾರು ಇವರಿಗೆ ಅನುಮತಿ ನೀಡಿದರು ಹಾಗೂ ಸಾರ್ವಜನಿಕ ಜೀವನದಲ್ಲಿ ಇವರ ಸ್ಥಾನಮಾನ ಏನೆಂದು ತಿಳಿದುಕೊಳ್ಳಲು ಕುತೂಹಲನಾಗಿದ್ದೇನೆ.ಕಡೆಯದಾಗಿ ನಿಮ್ಮ ಈ ಅಕ್ಷಮ್ಯ ಅಪರಾಧಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತಾ ಪತ್ರವನ್ನು ಮುಕ್ತಾಯಗೊಳಿಸುತ್ತೇನೆ’.

Advertisement

Udayavani is now on Telegram. Click here to join our channel and stay updated with the latest news.

Next