Advertisement

ಮೌಲ್ಯಯುತ ಚರ್ಚೆಗೆ ಮೊದಲ ಆದ್ಯತೆ: ಬಸವರಾಜ ಹೊರಟ್ಟಿ

01:29 PM Feb 10, 2021 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ವಲಯ, ಕ್ಷೇತ್ರವನ್ನೂ ಪ್ರತಿನಿಧಿಸುವ ಮೇಲ್ಮನೆಯಲ್ಲಿ ಜನಪರ ವಿಚಾರಗಳ ಬಗ್ಗೆ ಮೌಲ್ಯಯುತ ಚರ್ಚೆಗೆ ಆದ್ಯತೆ ನೀಡುತ್ತೇನೆ. ಸಚಿವರು, ಅಧಿಕಾರಿಗಳು ಸದನದಲ್ಲಿರುವಂತೆ ನೋಡಿಕೊಳ್ಳುವ ಜತೆಗೆ ಒಂದು ದಿನ ಮೊದಲೇ ಸದಸ್ಯರಿಗೆ ವಿಧೇಯಕ ನೀಡಿ ವ್ಯಾಪಕ ಚರ್ಚೆಗೆ ಅವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

Advertisement

-ಇದು ನೂತನ ಸಭಾಪತಿ ಬಸವರಾಜ ಹೊರಟ್ಟಿ ಅವರ ಭರವಸೆಯ ನುಡಿ. ಪರಿಷತ್‌ನ 49ನೇ ಸಭಾಪತಿಯಾಗಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿರುವ ಅವರು ಪರಿಷತ್‌ನಲ್ಲಿ ಹೊಸ ಮೇಲ್ಪಂಕ್ತಿ ಆರಂಭಿಸುವ ಬಗ್ಗೆ “ಉದಯವಾಣಿ’ಗೆ ಹಂಚಿಕೊಂಡಿದ್ದಾರೆ:

ಪರಿಷತ್‌ನಲ್ಲಿ ಚರ್ಚೆಗಿಂತ ವಾಗ್ವಾದ, ಆರೋಪ- ಪ್ರತ್ಯಾರೋಪಗಳೇ ಹೆಚ್ಚಾಗುತ್ತಿದೆ ಎಂಬ ಆರೋಪಗಳಿದೆಯೆಲ್ಲಾ?

– ಆಡಳಿತ ಪಕ್ಷ ಎಂದರೆ ಸಮರ್ಥಿಸಿಕೊಳ್ಳುವುದು, ಪ್ರತಿಪಕ್ಷಗಳು ಎಂದರೆ ವಿರೋಧ ಮಾಡುವುದು ಎಂಬಂತೆ ನಮ್ಮ ವ್ಯವಸ್ಥೆಯಿದೆ. ಎರಡೂ ಕಡೆಯವರು ತಮ್ಮದೇ ಸರಿ ಎಂದು ಪಟ್ಟು ಹಿಡಿದಾಗ ಸಂವಾದಕ್ಕಿಂತ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಹಾಗಾಗಿ ಆಡಳಿತ- ಪ್ರತಿಪಕ್ಷದವರನ್ನು ಕರೆದು ಎರಡೂ ಕಡೆಯವರ ಅಭಿಪ್ರಾಯ ಪಡೆದು ಅದರಂತೆ ಸೂಕ್ತ ರೀತಿಯಲ್ಲಿ ಸದನ ನಡೆಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ.

ಪರಿಷತ್‌ನಲ್ಲಿ ಮೌಲ್ಯಯುತ ಚರ್ಚೆ ಪ್ರಮಾಣ ತಗ್ಗುತ್ತಿದ್ದು, ಅಹಿತಕರ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ ಎಂಬ ಮಾತುಗಳ ಬಗ್ಗೆ ಏನು ಹೇಳುವಿರಿ?

Advertisement

– ಜನಪರ ವಿಚಾರಗಳ ಕುರಿತು ಹೆಚ್ಚಿನ ಚರ್ಚೆಗೆ ಅವಕಾಶ ನೀಡಲಾಗುವುದು. ಮಧ್ಯಾಹ್ನ, ಸಂಜೆ ಮಂಡನೆಯಾಗುವ ವಿಧೇಯಕವನ್ನು ಬೆಳಗ್ಗೆ ನೀಡುವ ಪರಿಪಾಠ ಬೆಳೆದಿದೆ. ಅದಕ್ಕೆ ಕಡಿವಾಣ ಹಾಕಲಾಗುವುದು. ಒಂದು ದಿನ ಮೊದಲೇ ವಿಧೇಯಕ ನೀಡಿ ಸದಸ್ಯರು ತಯಾರಾಗಿ ಚರ್ಚೆಯಲ್ಲಿ ತೊಡಗುವ ವ್ಯವಸ್ಥೆ ತರಲಾಗುವುದು. ಸದನದಲ್ಲಿ ಧಿಕ್ಕಾರ ಕೂಗುವುದನ್ನು ಕ್ರಮೇಣ ಬಂದ್‌ ಮಾಡಲು ಚಿಂತಿಸಲಾಗಿದೆ. ಸದನದ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಿಯಮಾನುಸಾರ ಅಗತ್ಯವಿರುವ ಎಲ್ಲ ಕ್ರಮ ವಹಿಸಲಾಗುವುದು.

ಕಲಾಪ ವೇಳೆ ಸಚಿವರು, ಅಧಿಕಾರಿಗಳಗೈರುಹಾಜರಿನಿಯಂತ್ರಣಕ್ಕೆ ಕ್ರಮವಹಿಸುವಿರಾ?

– ಖಂಡಿತ ಈ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ. ಈ ಹಿಂದೆ ಹಂಗಾಮಿ ಸಭಾಪತಿಯಾಗಿದ್ದಾಗ ಕಲಾಪ ಆರಂಭವಾದಾಗಲೇ ಸದನದಲ್ಲಿರ ಬೇಕಾದ ಸಚಿವರು, ಅಧಿಕಾರಿಗಳ ಹೆಸರು ವಾಚಿಸುತ್ತಿದ್ದೆ. ಹಾಗೆಯೇ ಸಭಾನಾಯಕರ ಮೂಲಕ ಸಂಬಂಧಪಟ್ಟವರನ್ನು ಕರೆಸಲು ಕ್ರಮ ವಹಿಸಲಾಗುತ್ತಿತ್ತು. ನಂತರ ಆ ವ್ಯವಸ್ಥೆ ಮರೆಯಾಗಿದೆ.

ಕಲಾಪದ ಕಾರ್ಯಸೂಚಿ ಪಾಲನೆ, ಚರ್ಚೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರುವಿರಾ?

– ಸದ್ಯ ಪ್ರಶ್ನೋತ್ತರ ಕಲಾಪ ಎಂದರೆ ಮೂರು ಗಂಟೆ ನಡೆಯುತ್ತಿದೆ. ಮುಂದೆ ಇದಕ್ಕೆಲ್ಲಾ ಅವಕಾಶವಿಲ್ಲ. ಕಲಾಪ ಆರಂಭವಾದ ಒಂದು ಗಂಟೆಯೊಳಗೆ ಪ್ರಶ್ನೋತ್ತರ ಕಲಾಪ ಮುಗಿಸಲಾಗುವುದು. ಇಲ್ಲದಿದ್ದರೆ ಸರ್ಕಾರಕ್ಕೆ ಹೊರೆಯಾಗಲಿದೆ. ಚರ್ಚೆಯಾಗದೆ ವಿಧೇಯಕಕ್ಕೆ ಅನುಮೋದನೆ ನೀಡುವುದರಲ್ಲಿ ಅರ್ಥವಿಲ್ಲ. ಆಯಾದಿನದ ಕಾರ್ಯಾಸೂಚಿ ಆ ದಿನ ಸಂಜೆಯೇ ಪೂರ್ಣಗೊಳಿಸಲಾಗುವುದು.ಇಲ್ಲಿಯವರೆಗೆ ಕೆಲ ವಿಚಾರದಲ್ಲಿ ಪಕ್ಷಪಾತ ನಡೆಯುತ್ತಿತ್ತು. ನಾನು ಎಲ್ಲರನ್ನೂ ಸಮಾನವಾಗಿ ಕಂಡು ವ್ಯವಸ್ಥಿತವಾಗಿ ಕಲಾಪ ನಡೆಸಲು ಆದ್ಯತೆ ನೀಡಲಾಗುವುದು.

ನಿಮ್ಮ  ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುವ ವಿಶ್ವಾಸವಿದೆಯೇ?

– ಹೆಚ್ಚು ಸದಸ್ಯಬಲವಿದ್ದರೂ ನನ್ನ ಮೇಲೆ ವಿಶ್ವಾಸವಿಟ್ಟು ಸ್ಥಾನ ನೀಡಿದ ಸಿಎಂ ಯಡಿಯೂರಪ್ಪ, ಪ್ರಧಾನಿಯವರೊಂದಿಗೆ ಮಾತನಾಡಿ ಅವಕಾಶ ಕಲ್ಪಿಸಿದ ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸರ್ಕಾರಕ್ಕೆ ಒಳ್ಳೆಯಹೆಸರು ಬರಬೇಕು. ಆ ನಿಟ್ಟಿನಲ್ಲಿ ಗಟ್ಟಿನಿರ್ಧಾರ ತೆಗೆದುಕೊಳ್ಳುತ್ತೇನೆ. ಪ್ರಮುಖ ವಿಚಾರ ಸಂಬಂಧ ಸರ್ಕಾರಕ್ಕೆ ಪತ್ರಬರೆಯುತ್ತೇನೆ. ವ್ಯಾಪಕ ಚರ್ಚೆ, ಸಂವಾದಕ್ಕೆಅವಕಾಶ ನೀಡಿ ಜನಪರ ವಿಚಾರಗಳಿಗೆ ನ್ಯಾಯ ಒದಗಿಸುವುದು ನನ್ನ ಆದ್ಯತೆ.

 

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next