Advertisement

ರೇಪ್‌ ಹೋಲಿಕೆಗೆ ಕ್ಷಮೆ ಯಾಚಿಸಿದ ಸ್ಪೀಕರ್‌

12:50 AM Feb 14, 2019 | Team Udayavani |

ವಿಧಾನಸಭೆ: ಆಡಿಯೋ ಪ್ರಕರಣ ಕುರಿತ ಚರ್ಚೆ ವೇಳೆ, ತಮ್ಮ ಸ್ಥಿತಿ “ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಸ್ಥಿತಿಯಂತಾಗಿದೆ’ ಎಂಬ ಹೋಲಿಕೆಗೆ ಮಹಿಳಾ ಶಾಸಕಿಯರು ಸೇರಿ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಕ್ಷಮೆಯಾಚಿಸಿದ್ದಾರೆ.

Advertisement

ಬುಧವಾರ ಮಧ್ಯಾಹ್ನ ಭೋಜನಾ ನಂತರದ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ರಮೇಶ್‌ ಕುಮಾರ್‌, ಸದನದ ಸದಸ್ಯರಾದ ಅನಿತಾ ಕುಮಾರಸ್ವಾಮಿ, ಅಂಜಲಿ ನಿಂಬಾಳ್ಕರ್‌, ರೂಪಕಲಾ ಶಶಿಧರ್‌, ಲಕ್ಷ್ಮೀ ಹೆಬ್ಟಾಳ್ಕರ್‌, ಕತೀಜ್‌ ಫಾತಿಮಾ, ಸೌಮ್ಯಾರೆಡ್ಡಿ, ವಿನೀಶಾ ನಿರೋ ಅವರು ನನ್ನನ್ನು ಭೇಟಿಯಾಗಿ ಮಂಗಳವಾರ ಸದನದಲ್ಲಿ ನಡೆದ ಚರ್ಚೆ ಬಗ್ಗೆ ಪ್ರಸ್ತಾಪಿಸಿದರು. ನಾನು ಸಾಂದರ್ಭಿಕವಾಗಿ ಅದನ್ನು ಹೇಳಿದ್ದೆ. ಆದರೆ ಆ ಸಂದರ್ಭದಲ್ಲಿ ಕೆಲವರು ನಕ್ಕಿದ್ದಾರೆ. ಇದು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ತಮ್ಮನ್ನು ಚುಚ್ಚುನುಡಿಗಳಿಂದ ಕೇಳುತ್ತಿದ್ದಾರೆಂದು ಮಹಿಳಾ ಶಾಸಕಿಯರು ಹೇಳಿದ್ದಾರೆ ಎಂದು ಸದನದ ಗಮನಕ್ಕೆ ತಂದರು.

ಹೆಣ್ಣು ಮಕ್ಕಳ ಮನಸ್ಸು ನೋಯಿಸುವುದು ಉದ್ದೇಶವಾಗಿರದೆ ನನ್ನ ಪರಿಸ್ಥಿತಿಯನ್ನು ಹೇಳಬೇಕಿತ್ತು. ಆದರೆ ಇಂದು ತಣ್ಣೀರನ್ನೂ ಆರಿಸಿ ಕುಡಿಯಬೇಕಾದ ಪರಿಸ್ಥಿತಿ ಇದೆ. ಫಾಸಿಗೆ ಗುರಿಯಾದರೂ ಬಚಾವಾಗಬಹುದು, ಮಾಧ್ಯಮಗಳಿಗೆ ಸಿಕ್ಕರೆ ಪಾರಾಗಲು ಸಾಧ್ಯವಿಲ್ಲ. ಅವರ ಬಳಿಯಿರುವ ಮಸಾಲೆ ಖಾಲಿ ಮಾಡಬೇಕು. ಅವರ ಹೊಟ್ಟೆಪಾಡು ನಡೆಯಬೇಕಲ್ಲ ಎಂದು ಮಾರ್ಮಿಕವಾಗಿ ನುಡಿದರು. ಹಾಗಾಗಿ ಆ ಸಾಲುಗಳನ್ನು ಕಡತದಿಂದ ತೆಗೆದುಹಾಕಬೇಕು. ರಾಜ್ಯದ ಯಾವ ಹೆಣ್ಣು ಮಗುವನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ಒಂದೊಮ್ಮೆ ಆ ರೀತಿ ಏನಾದರೂ ನೋವಾಗಿದ್ದರೆ ಕ್ಷಮೆ ಇರಲಿ. ನಾನು ಸದನದಲ್ಲಿರುವ ಹೆಣ್ಣು ಮಕ್ಕಳನ್ನು ಅಕ್ಕ, ತಂಗಿಯರಂತೆ ಕಾಣುತ್ತಿದ್ದೇನೆ ಎಂದು ಹೇಳಿ ಸ್ಪೀಕರ್‌ ವಿವಾದಕ್ಕೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next