ಬೆಂಗಳೂರು: ದೈನಂದಿನ ಜೀವನದಲ್ಲಿ, ವ್ಯವಹಾರಗಳಲ್ಲಿ ಹೆಚ್ಚು ಕನ್ನಡ ಬಳಸಿ, ಮಕ್ಕಳ ಜೊತೆಯೂ ಕನ್ನಡದಲ್ಲಿಯೇ ಮಾತನಾಡಿ. ಇದು ನಮ್ಮ ಭಾಷೆ ಉಳಿವಿಗೆ ಸಹಕಾರಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಕರೆ ನೀಡಿದರು.
65ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಈ ಬಾರಿ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು. ದೈನಂದಿನ ಜೀವನದಲ್ಲಿ, ವ್ಯವಹಾರಗಳಲ್ಲಿ ಹೆಚ್ಚು ಕನ್ನಡ ಬಳಸಿ, ಮಕ್ಕಳ ಜೊತೆಯೂ ಕನ್ನಡದಲ್ಲಿಯೇ ಮಾತನಾಡಿ. ಮಕ್ಕಳು ಕನ್ನಡ ಭಾಷೆ ಮಾತನಾಡುವುದರಿಂದ ನಮ್ಮ ಭಾಷೆ ಉಳಿವಿಗೆ ಸಹಕಾರಿಯಾಗುತ್ತದೆ ಎಂದರು.
ಮುಂದಿನ ವರ್ಷ ಕನ್ನಡ ಕಾಯಕ ವರ್ಷ ಕಾರ್ಯಕ್ರಮ ಜಾರಿಗೊಳಿಸಲಾಗುವುದು. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಕರ್ನಾಟಕ ಏಕಿಕರಣಕ್ಕಾಗಿ ಹಲವರು ಹೋರಾಡಿದ್ದಾರೆ. ಅಖಂಡ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:‘ದೇಸಿ ಸ್ವರ’: ಅನಿವಾಸಿ ಕನ್ನಡಿಗರಿಗಾಗಿ ಉದಯವಾಣಿಯ ವಿಶ್ವ ವಿದ್ಯುನ್ಮಾನ ಆವೃತ್ತಿ
ಕೊವೀಡ್ ನಮ್ಮ ರಾಜ್ಯದ ಮೇಲೆ ಪರಿಣಾಮ ಬೀರಿದೆ. ಆದರೆ, ನಮ್ಮ ಸರ್ಕಾರ ಅದನ್ನು ದಿಟ್ಟವಾಗಿ ಎದುರಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ಕೋವಿಡ್ ಮಹಾಮಾರಿಯನ್ನು ಓಡಿಸಬೇಕು. ರಾಜ್ಯದಲ್ಲಿ ನೆರೆ ಉಂಟಾಗಿ ರೈತಾಪಿ ವರ್ಗ, ಕೃಷಿ ವಲಯ, ಆರ್ಥಿಕ ವಲಯಕ್ಕೆ ತೊಂದರೆಯಾಗಿದ್ದರೂ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.