ಕಲಬುರಗಿ: ಮಂಗಳವಾರ ಪ್ರಕಟಗೊಂಡ ಪ್ರಸಕ್ತ ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷಾ ಫಲಿತಾಂಶದಲ್ಲಿ ಇಲ್ಲಿನ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ಓದಿದ್ದ ಸ್ಪರ್ಶಾ ನೀಲಂ 443ನೇ ರ‍್ಯಾಂಕ್ ಪಡೆದಿದ್ದಾರೆ.
ಸದ್ಯ ಐಆರ್‌ಟಿಎಸ್ ನಲ್ಲಿ ಕೆಲಸ ಮಾಡುತ್ತಿರುವ ಸ್ಪರ್ಶಾ ನೀಲಂ ಅವರು ಈ ಸಾಧನೆಯನ್ನು ಮಾಡುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 805ನೇ ರ‍್ಯಾಂಕ್ ಪಡೆದಿದ್ದ ಸ್ಪರ್ಶಾ ಈಗ 443ನೇ ರ‍್ಯಾಂಕ್ ಪಡೆಯುವ ಮೂಲಕ ತಮ್ಮ ಐಎಎಸ್ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಇವರ ತಂದೆ ಪಶು ಸಂಗೋಪನಾ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದರು. ಸ್ಪರ್ಷಾ ಶರಣ ಬಸವೇಶ್ವರ ವಸತಿ ಶಾಲೆಯಲ್ಲಿ ಮಾಂಟೆಸ್ಸರಿಯಿಂದ ಪಿಯುಸಿವರೆಗೂ ಅಧ್ಯಯನ ಮಾಡಿದ್ದಾರೆ.
ಸ್ಪರ್ಶಾ ನೀಲಂ ಅವರ ಈ ಸಾಧನೆಗೆ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಹಾಗೂ ಎಸ್‌ಬಿಆರ್ ಪ್ರಾಚಾರ್ಯ ಎನ್.ಎಸ್. ದೇವರಕಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.