ಅಲ್ ಖೋರ್: ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಜರ್ಮನಿ ಸತತ ಎರಡನೇ ವಿಶ್ವಕಪ್ ಕೂಟದಿಂದಲೂ ಬೇಗನೇ ನಿರ್ಗಮಿಸಲಿದೆಯೇ? ಸ್ಪೇನ್ ವಿರುದ್ಧದ ನಿರ್ಣಾಯಕ ಪಂದ್ಯವನ್ನು 1-1 ಸಮಬಲದಲ್ಲಿ ಮುಗಿಸಿದ ಬಳಿಕ ಜರ್ಮನ್ ಅಭಿಮಾನಿಗಳಲ್ಲಷ್ಟೇ ಅಲ್ಲ, ಎಲ್ಲರಲ್ಲೂ ಇಂಥದೊಂದು ಪ್ರಶ್ನೆ ಕಾಡಲಾರಂಭಿಸಿದೆ.
“ಇ’ ವಿಭಾಗದಲ್ಲಿರುವ ಜರ್ಮನಿ ಈವರೆಗೆ ಗೆಲುವಿನ ಮುಖವನ್ನೇ ಕಂಡಿಲ್ಲ. ಜಪಾನ್ ವಿರುದ್ಧ ಆರಂಭಿಕ ಪಂದ್ಯದಲ್ಲಿ ಅನುಭವಿಸಿದ 1-2 ಅಂತರದ ಆಘಾತಕಾರಿ ಸೋಲು ಜರ್ಮನ್ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ. ಇದೀಗ ಸ್ಪೇನ್ ವಿರುದ್ಧ ಡ್ರಾ ಫಲಿತಾಂಶ. ಕೇವಲ ಒಂದಂಕವನ್ನು ಕೈಲಿರಿಸಿಕೊಂಡು ಅದೃಷ್ಟದ ಹುಡುಕಾಟದಲ್ಲಿದೆ ಜರ್ಮನ್ ಪಡೆ.
ಗುರುವಾರ ಕೋಸ್ಟಾರಿಕ ವಿರುದ್ಧದ ಪಂದ್ಯದಲ್ಲಿ ಜರ್ಮನಿಯ ಹಣೆಬರಹ ನಿರ್ಧಾರವಾಗಲಿದೆ. ಇಲ್ಲಿ ಕೇವಲ ಗೆದ್ದರಷ್ಟೇ ಸಾಲದು, ಉಳಿದ ಪಂದ್ಯಗಳ ಫಲಿತಾಂಶವೂ ನಿರ್ಣಾಯಕವಾಗಲಿದೆ. ಮುಖ್ಯವಾಗಿ ಜಪಾನ್ ವಿರುದ್ಧ ಗೋಲು ಅಂತರದಲ್ಲಿ ಮೇಲುಗೈ ಸಾಧಿಸಬೇಕಿದೆ. ಅದೇ ದಿನ ಇನ್ನೊಂದು ಪಂದ್ಯದಲ್ಲಿ ಸ್ಪೇನ್-ಜಪಾನ್ ಮುಖಾಮುಖೀ ಆಗಲಿವೆ. ಇಲ್ಲಿ ಯಾರೇ ಗೆದ್ದರೂ ಅಗ್ರಸ್ಥಾನದೊಂದಿಗೆ ನಾಕೌಟ್ ಪ್ರವೇಶಿಸಲಿದ್ದಾರೆ. ಸ್ಪೇನ್ ಹೆಚ್ಚುಗಾರಿಕೆಯೆಂದರೆ, ಗೋಲು ಹೊಡೆತಗಳಲ್ಲಿ ಮುಂಚೂಣಿಯಲ್ಲಿರುವುದು. ಅದು ಕೋಸ್ಟಾರಿಕವನ್ನು 7-0 ಭರ್ಜರಿ ಅಂತರದಿಂದ ಕೆಡವಿತ್ತು.
ಸಮಬಲದ ಸಮಾಧಾನ: ಜರ್ಮನಿ-ಸ್ಪೇನ್ ನಡುವಿನ ಪಂದ್ಯ ಒಂದು ಗಂಟೆ ಕಾಲ ಗೋಲಿಲ್ಲದೆ ಸಾಗಿತು. 62ನೇ ನಿಮಿಷದಲ್ಲಿ ಸ್ಪೇನ್‌ನ ಅಲ್ವಾರೊ ಮೊರಾಟ ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಜೋರ್ಡಿ ಅಲ್ಬ ಅವರಿಂದ ತೀರಾ ಕೆಳಮಟ್ಟದಲ್ಲಿ ಪಡೆದ ಚೆಂಡನ್ನು ಮೊರಾಟ ಜರ್ಮನ್ ಗೋಲುಪೆಟ್ಟಿಗೆಗೆ ಯಶಸ್ವಿಯಾಗಿ ತಳ್ಳಿದರು. ಸ್ಪೇನ್ 20 ನಿಮಿಷಗಳ ಕಾಲ ಈ ಮುನ್ನಡೆಯನ್ನು ಕಾಯ್ದುಕೊಂಡಿತು. 83ನೇ ನಿಮಿಷದಲ್ಲಿ ನಿಕ್ಲಾಸ್ ಫುಲ್‌ಕ್ರುಗ್ ಪಂದ್ಯವನ್ನು ಸಮಬಲಕ್ಕೆ ತಂದು ಜರ್ಮನಿಯನ್ನು ಸತತ ಎರಡನೇ ಸೋಲಿನಿಂದ ಬಚಾಯಿಸಿದರು.
2014ರಲ್ಲಿ ಚಾಂಪಿಯನ್ ಎನಿಸಿಕೊಂಡ ಬಳಿಕ ಜರ್ಮನಿ, ಅನಂತರದ ವಿಶ್ವಕಪ್‌ಗ್ಳ 5 ಪಂದ್ಯಗಳಲ್ಲಿ ಜಯಿಸಿದ್ದು ಒಂದು ಪಂದ್ಯವನ್ನು ಮಾತ್ರ. 2018ರ ರಷ್ಯಾ ಪಂದ್ಯಾವಳಿಯಲ್ಲಿ ಲೀಗ್ ಹಂತದ 2 ಪಂದ್ಯಗಳಲ್ಲಿ ಸೋತು ಬೇಗನೇ ಮನೆಗೆ ಮರಳಿತ್ತು.
ಇನ್ನೊಂದೆಡೆ ಜರ್ಮನಿ ವಿರುದ್ಧ ಸ್ಪೇನ್ ಉತ್ತಮ ದಾಖಲೆ ಉತ್ತಮ ದಾಖಲೆಯನ್ನು ಕಾಯ್ದುಕೊಂಡು ಬಂದಿದೆ. ಅದು 1988ರ ಯುರೋಪಿಯನ್ ಚಾಂಪಿಯನ್‌ಶಿಪ್ ಬಳಿಕ ಜರ್ಮನಿಗೆ ಸೋತದ್ದಿಲ್ಲ. ಇವೆರಡು ಕೊನೆಯ ಸಲ ಎದುರಾದದ್ದು 2 ವರ್ಷಗಳ ಹಿಂದಿನ ನ್ಯಾಶನಲ್ ಲೀಗ್’ ಟೂರ್ನಿಯಲ್ಲಿ. ಅಂದು ಸ್ಪೇನ್ 6-0 ಜಯಭೇರಿ ಮೊಳಗಿಸಿತ್ತು. ಅಂದಹಾಗೆ, ಸ್ಪೇನ್ ವಿರುದ್ಧ ಜರ್ಮನಿ ಕೊನೆಯ ಸಲ ಜಯಿಸಿದ್ದು 8 ವರ್ಷಗಳ ಹಿಂದೆ. ಅದೊಂದು ಫ್ರೆಂಡ್ಲಿ ಮ್ಯಾಚ್ ಆಗಿತ್ತು.
ಫಲಿತಾಂಶ
ಸ್ಪೇನ್: 01
ಜರ್ಮನಿ: 01