ಸಿಯೋಲ್: ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಜತೆಗಿನ ವೈಮನಸ್ಸಿನ ನಡುವೆಯೇ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಕೈಗೊಂಡಿದ್ದ ಬೇಹುಗಾರಿಕಾ ಉಪಗ್ರಹ ಉಡಾವಣೆ ಕಾರ್ಯಾಚರಣೆ ಬುಧವಾರ ವಿಫಲ ಗೊಂಡಿದೆ. ಭದ್ರತಾ ದೃಷ್ಟಿಕೋನದಿಂದ ರೂಪಿಸಲಾಗಿದ್ದ ರಾಷ್ಟ್ರದ ಮೊಟ್ಟ ಮೊದಲ ಬೇಹುಗಾರಿಕೆ ಉಪಗ್ರಹವು ಕಕ್ಷೆ ಸೇರುವ ಮುನ್ನವೇ, ಉಪಗ್ರಹವನ್ನು ಹೊತ್ತು ಸಾಗುತ್ತಿದ್ದ ರಾಕೆಟ್ ಪತನಗೊಂಡು ಸಮುದ್ರಕ್ಕೆ ಬಿದ್ದಿದೆ. ಈ ಮೂಲಕ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಯೋಜನೆ ವಿಫಲವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ದೋಷದಿಂದ ಯೋಜನೆ ವಿಫಲಗೊಂಡಿದೆ. ಆದರೆ ಈ ಬಾರಿಯ ಪ್ರಯತ್ನ ಯೋಜನೆ ಬಗ್ಗೆ ಮತ್ತಷ್ಟು ನಿಖರತೆ ಒದಗಿಸಿದೆ. ಈಗಾಗಿರುವ ತಪ್ಪುಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ಸರಿಪಡಿಸಿ ಶೀಘ್ರವೇ 2ನೇ ಬಾರಿಗೆ ಕಾರ್ಯಾಚರಣೆ ಕೈಗೊಳ್ಳುವುದಾಗಿ ಉ.ಕೊರಿಯಾ ವಿಜ್ಞಾನಿಗಳು ತಿಳಿಸಿದ್ದಾರೆ ಎನ್ನಲಾಗಿದೆ.