Advertisement

ಭೂಮಿಯಿಂದ ಅಂತರಿಕ್ಷಕ್ಕೆ ಸಿರಿವಂತರ ಪಯಣ

03:22 AM Jul 11, 2021 | Team Udayavani |

ಜಗತ್ತಿನ ಇಬ್ಬರು ದೈತ್ಯ ಉದ್ಯಮಿಗಳಾದ ರಿಚರ್ಡ್‌ ಬ್ರಾನ್ಸನ್‌ ಮತ್ತು ಜೆಫ್ ಬೆಜೋಸ್‌, 9 ದಿನಗಳ ಅಂತರದಲ್ಲಿ ಹೊಸ ಸಾಹಸಕ್ಕಿಳಿಯಲಿದ್ದಾರೆ. ಅದು ಅಂತಿಂಥ ಸಾಹಸವಲ್ಲ, ಭೂಮಿಯಿಂದ ಅಂತರಿಕ್ಷಕ್ಕೆ ಪ್ರವಾಸ ಹೋಗಿಬರಲಿದ್ದಾರೆ. ರವಿವಾರ ಸಂಜೆ ವರ್ಜಿನ್‌ ಕಂಪೆನಿಯ ರಿಚರ್ಡ್‌ ಬ್ರಾನ್ಸನ್‌ ಜತೆಗೆ ಭಾರತೀಯ ಮೂಲದ ಶಿರಿಷಾ ಬಾಂದ್ಲಾ ಸೇರಿ ಆರು ಮಂದಿ ಪ್ರಯಾಣಿಸಲಿದ್ದಾರೆ. ಜು.20ರಂದು ಜಗತ್ತಿನ ಅತ್ಯಂತ ಸಿರಿವಂತ ಜೆಫ್ ಬೆಜೋಸ್‌ ಅಂತರಿಕ್ಷಕ್ಕೆ ಪ್ರಯಾಣ ಕೈಗೊಳ್ಳಲಿದ್ದಾರೆ.

Advertisement

ನೇರಪ್ರಸಾರ!
ವರ್ಜಿನ್‌ ಗ್ಯಾಲಾಕ್ಟಿಕ್‌ನ ಗಗನಯಾನ ವೆಬ್‌ಕ್ಯಾಸ್ಟಿಂಗ್‌ನಲ್ಲಿ ನೇರಪ್ರಸಾರಗೊ ಳ್ಳಲಿದೆ. ಸಿ-ನೆಟ್‌ (CNET) ಯು ಟ್ಯೂಬ್‌ ಚಾನೆಲ್‌ನಲ್ಲಿ ಉಡಾವಣೆಯ ನೇರಪ್ರಸಾರ ಬಿತ್ತರಿಸಲಾಗುತ್ತದೆ. ಭಾರತದಲ್ಲಿ ರವಿವಾರ ಸಂಜೆ 5:30ರಿಂದ ನೇರಪ್ರಸಾರ ವೀಕ್ಷಿಸಬಹುದು.

ಹೊಸ ವಾಣಿಜ್ಯ ಅವಕಾಶಕ್ಕೆ ಮುನ್ನುಡಿ
“ವರ್ಜಿನ್‌ ಗ್ಯಾಲಾಕ್ಟಿಕ್‌’ ಹಾಗೂ “ಬ್ಲೂ ಒರಿಜಿನ್‌’ ಸಂಸ್ಥೆಗಳ ಗಗನಯಾನ ಭವಿಷ್ಯದಲ್ಲಿ ಸಿರಿವಂತರ ಹೊಸ ಕ್ರೇಜ್‌ ಆಗಿ ರೂಪುಗೊಳ್ಳಲಿರುವ “ಹವ್ಯಾಸಿ ಅಂತರಿಕ್ಷ ಪ್ರವಾಸ’ವೆಂಬ ಪರಿಕಲ್ಪನೆಗೆ ನಾಂದಿ ಹಾಡಲಿವೆ. ಜತೆಗೆ ಮರುಬಳಕೆಯಾಗುವ ರಾಕೆಟ್‌ಗಳು ಹಾಗೂ ಆಕಾಶಯಾನಕ್ಕಾಗಿಯೇ ರೂಪಿಸಲಾಗಿರುವ ಕ್ಯಾಪ್ಸೂಲ್‌ನ ಪುಟ್ಟ ವಿಮಾನಗಳ ತಾಂತ್ರಿಕ ನೈಪುಣ್ಯದ ಅಗ್ನಿಪರೀಕ್ಷೆಯಿದು. 2014ರಲ್ಲಿ ಇಂಥದ್ದೇ ಗಗನಯಾನದ ಪರೀಕ್ಷೆ ವೇಳೆ ವರ್ಜಿನ್‌ ಕಂಪೆನಿಯ ಕ್ಯಾಪ್ಸೂಲ್‌
ಒಂದು ಉಡಾವಣ ಹಂತದಲ್ಲೇ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿ ಅಪಘಾತಕ್ಕೀಡಾಗಿ, ಅದರಲ್ಲಿದ್ದ ಒಬ್ಬ ಪೈಲಟ್‌ ಅಸುನೀಗಿ, ಮತ್ತೂಬ್ಬ ಪೈಲಟ್‌ ಗಂಭೀರವಾಗಿ ಗಾಯಗೊಂಡಿದ್ದ.
ಹಾಗಾಗಿ ಹವ್ಯಾಸಿ ಗಗನಯಾನಕ್ಕೆ ತೀವ್ರ ಹಿನ್ನೆಡೆಯಾಗಿತ್ತು. ಈಗ ಕೈಗೊಳ್ಳಲಾಗುತ್ತಿರುವ ಎರಡೂ ಗಗನಯಾನಗಳು ಯಶಸ್ವಿಯಾದರೆ ಭವಿಷ್ಯದಲ್ಲಿ ಇದು ಈ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.

ಹೂಡಿಕೆ ಎಷ್ಟು?
ರಿಚರ್ಡ್‌ ಬ್ರಾನ್ಸನ್‌ ಅವರ ವರ್ಜಿನ್‌ ಸಂಸ್ಥೆಯು ತನ್ನ ಗಗನಯಾನಕ್ಕೆ ಅಮೆರಿಕದ ಫೆಡರಲ್‌ ಏವಿಯೇಶನ್‌ ಅಡ್ಮಿನಿಸ್ಟ್ರೇಶನ್‌ನಿಂದ (ಎಫ್ಎಎ) ಜೂನ್‌ನಲ್ಲೇ ಅನುಮತಿ ಪಡೆದಿದೆ. ಈ ಅನುಮತಿ ಸಿಕ್ಕಿದಾಗಿನಿಂದ ವರ್ಜಿನ್‌ ಗ್ಯಾಲಾಕ್ಟಿಕ್‌ ಸಂಸ್ಥೆಯ ಷೇರುಗಳ ಮೌಲ್ಯ ಮುಗಿಲೆತ್ತರಕ್ಕೆ ಹಾರಿದ್ದು, ಗಗನಯಾನಕ್ಕೆ ಸುಮಾರು 4,480 ಕೋಟಿ ರೂ.ಹರಿದುಬಂದಿದೆ ಎಂದು ಕಂಪೆನಿ ತಿಳಿಸಿದೆ.

ಜೆಫ್ ಬಿಜೋಸ್‌ ಬ್ಲೂ ಒರಿಜಿನ್‌ ಕೂಡ ತನ್ನ ಗಗನಯಾನಕ್ಕೆ ಎಫ್ಎಎನಿಂದ ಅನುಮತಿ ಪಡೆದಿದ್ದು ಅದಾದ ಅನಂತರ ಆ ಕಂಪೆನಿಯ ಷೇರುಗಳ ಮೌಲ್ಯವೂ ಹೆಚ್ಚಾಗಿದೆ. ಒಟ್ಟಾರೆ ಷೇರು ಮಾರಾಟದಿಂದ 7,470 ಕೋಟಿ ರೂ. ಹಣ ಹರಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ. ಇವುಗಳಿಂದ ಬಂದ ಹಣವನ್ನೇ ಈ ಕಂಪೆನಿಗಳು ತಮ್ಮ ಚೊಚ್ಚಲ ಗಗನಯಾತ್ರೆಗೆ ಬಳಸಿಕೊಳ್ಳಲಿವೆ.

Advertisement

ಗಗನಯಾನಗಳ ವ್ಯತ್ಯಾಸ
ವರ್ಜಿನ್‌ ಗ್ಯಾಲಾಕ್ಟಿಕ್‌: ಜುಲೈ 11
ಈ ಆಕಾಶಕಾಯ ಅವಳಿ ವಿಮಾನಗಳ (ಟ್ವಿನ್‌ ಫ್ಯೂಸಲೇಜ್‌) ಸಂಯುಕ್ತ ರೂಪ. ಇದಕ್ಕೆ ರಿಚರ್ಡ್‌ ತಾಯಿಯ ಗೌರವಾರ್ಥವಾಗಿ ವಿಎಂಎಸ್‌ ಈವ್‌ ಎಂದು ಹೆಸರಿಡಲಾಗಿದೆ. ಯೂನಿಟಿ 22 ಎಂದೂ ಕರೆಯಲ್ಪಡುವ ಈ ಕ್ಯಾಪ್ಸೂಲ್‌ನಲ್ಲಿ ಭಾರತದ ಶಿರಿಷಾ ಕೂಡ ಪ್ರಯಾಣಿಸಲಿದ್ದಾರೆ.

ನೆಲದಿಂದ 45,000 ಅಡಿಗಳಷ್ಟು ಎತ್ತರದಲ್ಲಿ ಸಬ್‌ ಆರ್ಬಿಟಲ್‌ ಹಂತದಲ್ಲಿ ಗಂಟೆಗೆ 60 ಕಿ.ಮೀ. ವೇಗವಾಗಿ ಹಾರಾಡುವಂಥ ಆಕಾಶಕಾಯವಾದ ಇದರಲ್ಲಿ ಆರು ಜನರು ಪ್ರಯಾಣಿಸಬಹುದು.

ನ್ಯೂ ಮೆಕ್ಸಿಕೋದ ಸ್ಪೇಸ್‌ ಪೋರ್ಟ್‌ನಿಂದ ವಿಎಸ್‌ಎಸ್‌ ಯೂನಿಟಿ ಎಂಬ ರಾಕೆಟ್‌ನ ಮೂಲಕ ಇದು ಜು. 11ರಂದು ಉಡಾವಣೆಗೊಳ್ಳಲಿದೆ.

ಈ ಕ್ಯಾಪ್ಸೂಲ್‌ನೊಳಗೆ ಪ್ರಯಾಣಿಸುವವರಿಗೆ ಬಾಹ್ಯಾಕಾಶಕ್ಕೆ ಕಾಲಿಟ್ಟ ಕೂಡಲೇ ತಮ್ಮ ಭಾರ ಇಳಿದುಹೋದ ಅನುಭವವಾಗುತ್ತದೆ.

ಬಾಹ್ಯಾಕಾಶದಲ್ಲಿ ಸುಮಾರು 90 ನಿಮಿಷಗಳ ಕಾಲ ಪ್ರಯಾಣಿಸಲಿರುವ ಇದು ತನ್ನಲ್ಲಿರುವ ಫೆದರಿಂಗ್‌ ಸಿಸ್ಟಂ ಮೂಲಕ ಪುನಃ ಭೂಮಿಯತ್ತ ಹಿಂದಿರುಗಲಿದೆ.

ನ್ಯೂ ಮೆಕ್ಸಿಕೋದ ಸ್ಪೇಸ್‌ ಪೋರ್ಟ್‌ ಉಡಾವಣ ಕೇಂದ್ರದ ರನ್‌ವೇನಲ್ಲಿ ಬಂದಿಳಿಯಲಿದೆ.

ಬ್ಲೂ ಒರಿಜಿನ್‌: ಜುಲೈ 20
ಜೆಫ್ ಬೆಜೋಸ್‌ ಪ್ರಯಾಣಿಸಲಿರುವ ಕ್ಯಾಪ್ಸೂಲ್‌ನ ಹೆಸರು ನ್ಯೂ ಶೆಪರ್ಡ್‌ ವೆಸೆಲ್‌.

ಅಮೆರಿಕದ ಗಗನಯಾತ್ರಿ ಅಲಾನ್‌ ಶೆಪರ್ಡ್‌ನ ಗೌರವಾರ್ಥವಾಗಿ ಜೆಫ್ ಪ್ರಯಾಣಿಸುವ ಕ್ಯಾಪ್ಸೂಲ್‌ಗೆ ನ್ಯೂ ಶೆಪರ್ಡ್‌ ಎಂದು ಹೆಸರಿಡಲಾಗಿದೆ.

ಭೂಮಿಯಿಂದ ಸುಮಾರು 50,000 ಅಡಿ ಎತ್ತರದಲ್ಲಿ ಗಂಟೆಗೆ ಸುಮಾರು 100 ಕಿ.ಮೀ. ವೇಗದಲ್ಲಿ ಇದು ಸಂಚರಿಸಬಲ್ಲದು.

1969ರ ಜು. 20ರಂದು ಚಂದ್ರನ ಮೇಲೆ ಮನುಷ್ಯ ಕಾಲಿಟ್ಟಿದ್ದ. ಇದರ ಸ್ಮರಣಾರ್ಥ ಅದೇ ದಿನ ಜೆಫ್, ಗಗನಯಾತ್ರೆ ಕೈಗೊಳ್ಳಲಿದ್ದಾರೆ.

ಟೆಕ್ಸಾಸ್‌ನ ಪಶ್ಚಿಮದಲ್ಲಿರುವ ಬ್ಲೂ ಒರಿಜಿನ್‌ ಉಡ್ಡಯನ ಕೇಂದ್ರದಿಂದ ಮರುಬಳಕೆಯಾಗಬಲ್ಲ ರಾಕೆಟ್‌ನ ಮೂಲಕ ನ್ಯೂ ಶೆಪರ್ಡ್‌ ಗಗನದತ್ತ ಹೊರಡಲಿದೆ.

ವರ್ಜಿನ್‌ ಗ್ಯಾಲಾಕ್ಟಿಕ್‌ನಲ್ಲಿರುವಂತೆ ಈ ಆಕಾಶಕಾಯದಲ್ಲೂ ಆರು ಮಂದಿ ಪ್ರಯಾಣಿಸಬಹುದು.

ಸಬ್‌ ಆರ್ಬಿಟಲ್‌ ಹಂತದಲ್ಲಿ ಭೂಮಿಯನ್ನು 10 ನಿಮಿಷಗಳ ಕಾಲ ಪ್ರದಕ್ಷಿಣೆ ಹಾಕಿದ ಅನಂತರ ಇದರಲ್ಲಿ ಅಳವಡಿಸಲಾಗಿರುವ ವಿಶೇಷ ಪ್ಯಾರಾಚೂಟ್‌ಗಳ ಸಹಾಯದಿಂದ ಭೂಮಿಗೆ ಬಂದಿಳಿಯಲಿದೆ.

ತುದಿಗಾಲಲ್ಲಿ ಸಿರಿವಂತರು!
ವರ್ಜಿನ್‌ ಕಂಪೆನಿಯ ಮೂಲಕ ಗಗನಯಾತ್ರೆ ಕೈಗೊಳ್ಳಲು ಈಗಾಗಲೇ 700 ಶ್ರೀಮಂತರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ! ಸದ್ಯಕ್ಕೆ ಒಬ್ಬರಿಗೆ ಗಗನಯಾತ್ರೆ ಕೈಗೊಳ್ಳಲು 1.9 ಕೋಟಿ ರೂ. ಖರ್ಚು ತಗಲುತ್ತದೆ. ಆ ಹಣವನ್ನು ನೀಡಲು, ಅಗತ್ಯಬಿದ್ದರೆ ಮುಂಗಡ ಪಾವತಿಸಲು ಸಿದ್ಧರಿದ್ದಾರೆ! ಹಾಗಾಗಿ, ಹವ್ಯಾಸಿ ಗಗನಯಾತ್ರೆಗೆ ಮುಂದೆ ಭಾರೀ ಡಿಮ್ಯಾಂಡ್‌ ಬರುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ, ಹೆಚ್ಚು ಗ್ರಾಹಕರನ್ನು ಸೆಳೆಯುವ ಸಲುವಾಗಿ, ಪ್ರತೀ ಟಿಕೆಟ್‌ ದರವನ್ನು ಅಂದಾಜು 29 ಲಕ್ಷ ರೂ.ಗಳಿಗೆ ಇಳಿಸುವ ಆಲೋಚನೆ ಎರಡೂ ಕಂಪೆನಿಗಳಿಗೆ ಇದೆ ಎಂದು ಮೂಲಗಳು ತಿಳಿಸಿವೆ.

ರೇಸ್‌ನಲ್ಲಿದ್ದಾರೆ ಎಲಾನ್‌ ಮಸ್ಕ್!
ಹವ್ಯಾಸಿ ಗಗನಯಾನ ಪರಿಕಲ್ಪನೆಯ ಸಾಕಾರದ ಸಾಹಸದಲ್ಲಿ ಖ್ಯಾತ ಉದ್ಯಮಿ ಎಲಾನ್‌ ಮಸ್ಕ್ ಇವರೆಲ್ಲರಿಗಿಂತ ಮುಂದಿದ್ದಾರೆ. ಇವರ ಸ್ಪೇಸ್‌ ಎಕ್ಸ್‌ ಸಂಸ್ಥೆ, ಮರುಬಳಕೆಯಾಗಬಲ್ಲ ರಾಕೆಟನ್ನು ಸಂಶೋಧಿಸಿ ಇಡೀ ವಿಶ್ವದ ಗಮನ ಸೆಳೆದಿದೆ. ಇದೇ ರಾಕೆಟ್‌ನ ಸಹಾಯದಿಂದ ಈ ವರ್ಷ ಸೆಪ್ಟಂಬರ್‌ನಲ್ಲಿ ಸ್ಪೇಸ್‌ ಎಕ್ಸ್‌ ಕಂಪೆನಿ ನಾಗರಿಕರನ್ನು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ದು ಪುನಃ ಭೂಮಿಗೆ ವಾಪಸ್‌ ಕರೆ ತರಲಿದೆ. ಇದರಲ್ಲಿ ಮಸ್ಕ್ ಕೂಡ ತೆರಳಲಿದ್ದಾರೆಯೇ ಎಂಬುದು ಕೂಡಾ ಖಚಿತವಾಗಿಲ್ಲ. ಆದರೆ ಸ್ಪೇಸ್‌ ಎಕ್ಸ್‌ನ ತಂತ್ರಜ್ಞಾನ ವರ್ಜಿನ್‌ ಗ್ಯಾಲಾಕ್ಟಿಕ್‌ ಹಾಗೂ ನ್ಯೂ ಶೆಪರ್ಡ್‌ ಆಕಾಶಕಾಯಗಳ ತಂತ್ರಜ್ಞಾನಕ್ಕಿಂತ ವಿಭಿನ್ನವಾಗಿದೆ. ಮರುಬಳಕೆಯಾಗುವ “ಸ್ಪೇಸ್‌ ಎಕ್ಸ್‌’ ರಾಕೆಟ್‌ನ ಮೂಲಕ ಬಾಹ್ಯಾಕಾಶಕ್ಕೆ ತೆರಳುವ ಕ್ಯಾಪ್ಸೂಲ್‌, ರಾಕೆಟ್‌ನಿಂದ ಬೇರ್ಪಟ್ಟ ಅನಂತರ ಮೂರ್ನಾಲ್ಕು ದಿನ ಬಾಹ್ಯಾಕಾಶದಲ್ಲೇ ಸುತ್ತುವರಿದು ಅನಂತರ ತನ್ನನ್ನು ಕರೆತಂದಿದ್ದ ರಾಕೆಟ್‌ನ ಮೇಲು¤ದಿಗೆ ಬಂದು ಜೋಡಣೆಯಾಗುತ್ತದೆ. ಅನಂತರ ಆ ರಾಕೆಟ್‌ ಭೂಮಿಗೆ ಬಂದಿಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next