Advertisement

ಎಸ್‌ಪಿ ರಸ್ತೆ ಮಳಿಗೆಗಳ ತೆರವು!

12:10 PM Dec 16, 2018 | Team Udayavani |

ಬೆಂಗಳೂರು: ಕಾರ್ಪೊರೇಷನ್‌ ಕಚೇರಿ ಸಮೀಪದ ಜನಪ್ರಿಯ ಎಸ್‌.ಪಿ ರಸ್ತೆಯಲ್ಲಿ ಶನಿವಾರ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಬಿಬಿಎಂಪಿ ಅಧಿಕಾರಿಗಳು, 20ಕ್ಕೂ ಹೆಚ್ಚು ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸುವ ಮೂಲಕ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿದರು.

Advertisement

ಕೆ.ಆರ್‌.ಮಾರುಕಟ್ಟೆ ವಾರ್ಡ್‌ ವ್ಯಾಪ್ತಿಯ ಎಸ್‌.ಪಿ ರಸ್ತೆ ಸುತ್ತಮುತ್ತಲಿನ ಭಾಗಗಳಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ, ವಹಿವಾಟು ನಡೆಸುತ್ತಿದ್ದರು. ಈ ಹಿಂದೆ ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಸೂಚಿಸಿದ್ದರೂ, ವ್ಯಾಪಾರಿಗಳು ತೆರವು ಮಾಡದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಜೆಸಿಬಿ ಬಳಸಿ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿದರು. 

ಎಸ್‌.ಪಿ ರಸ್ತೆಯಲ್ಲಿ ನೂರಾರು ಮೊಬೈಲ್‌ ಹಾಗೂ ಎಲೆಕ್ಟ್ರಿಕಲ್‌ ಸಾಧನಗಳ ಬಿಡಿಭಾಗಗಳ ಸಗಟು ಮಳಿಗೆಗಳಿವೆ. ಬಿಡಿ ಭಾಗಗಳ ಖರೀದಿಗಾಗಿ ನಿತ್ಯ ಹತ್ತಾರು ಸಾವಿರ ಜನ ಎಸ್‌.ಪಿ ರಸ್ತೆಗೆ ಭೇಟಿ ನೀಡುತ್ತಾರೆ. ಆದರೆ, ಕೆಲವರು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಕಬ್ಬಿಣದ ಬಾಕ್ಸ್‌ ಮಾದರಿಯ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. 

ಜನರು ರಸ್ತೆಯಲ್ಲಿ ಓಡಾಡುತ್ತಿರುವ ಕಾರಣ ಅಪಘಾತಗಳು ಸಂಭವಿಸಿ ಜನ ತೊಂದರೆ ಅನುಭವಿಸಿದ್ದಾರೆ. ಜತೆಗೆ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಇದರಿಂದ ತೀವ್ರ ಸಂಚಾರ ದಟ್ಟಣೆ ಕೂಡ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು.

ಸಾರ್ವಜನಿಕರ ದೂರುಗಳನ್ನು ಆಧರಿಸಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು, ಶನಿವಾರ 20ಕ್ಕೂ ಹೆಚ್ಚು ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ. ಈ ವೇಳೆ ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಭದ್ರತೆ ಒದಗಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಜತೆಗೆ ತಮ್ಮ ಮಳಿಗೆ ಅನಧಿಕೃತ ಎಂಬುದು ವ್ಯಾಪಾರಿಗಳಿಗೂ ತಿಳಿದಿದ್ದರಿಂದ ಯಾರೂ ವಿರೋಧಿಸುವ ಪ್ರಯತ್ನ ಮಾಡಲಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅನಧಿಕೃತ ಮಳಿಗೆಗಳಿಂದ ಸಾವಿರಾರು ರೂ. ಬಾಡಿಗೆ: ಕೆಲ ಕಂಪ್ಯೂಟರ್‌ ಹಾಗೂ ಎಲೆಕ್ಟ್ರಿಕಲ್‌ ವಸ್ತುಗಳ ಮಾರಾಟ ಮಳಿಗೆಗಳು ತಮ್ಮ ಕಟ್ಟಡಕ್ಕೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗದಲ್ಲೇ ಕಟ್ಟಡ ನಿರ್ಮಿಸಿಕೊಂಡಿದ್ದರು. ಇನ್ನು ಕೆಲವರು ಪಾದಚಾರಿ ಮಾರ್ಗದಲ್ಲಿಯೇ ಪೆಟ್ಟಿಗೆ ಅಂಗಡಿ ನಿರ್ಮಿಸಿಕೊಂಡಿದ್ದರು. ಹಲವರು ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಿ ಸಾವಿರಾರು ರೂ. ಬಾಡಿಗೆ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಾರ್ಡ್‌ನ ಇತರೆಡೆಯೂ ಕಾರ್ಯಾಚರಣೆ: ಸಾರ್ವಜನಿಕರು ಸಂಚರಿಸಲಿ ಎಂಬ ಉದ್ದೇಶದಿಂದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಒತ್ತುವರಿ ಮಾಡಿಕೊಂಡು ಮಳಿಗೆಗಳನ್ನು ನಿರ್ಮಿಸಿದರೆ ಜನ ಎಲ್ಲಿ ಓಡಾಡಬೇಕು? ಈ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಆಧರಿಸಿ ತೆರವು ಕಾರ್ಯಾಚರಣೆ ನಡೆಸಿದ್ದು, ವಾರ್ಡ್‌ನ ಉಳಿದ ಭಾಗಗಳಲ್ಲಿ ಆಗಿರುವ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ನಾಗರಾಜು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next