Advertisement

ಅಪ್ಪ- ಮಗನ ಕಿತ್ತಾಟದಲ್ಲಿ ಬಡವಾದ ಎಸ್ಪಿ

04:54 PM Jan 02, 2017 | |

ಅಪ್ಪ- ಚಿಕ್ಕಪ್ಪ- ಮಲತಾಯಿ- ಅಮರ್‌ ಸಿಂಗ್‌ ಎಂಬ ಕೂಟದ ಜತೆ ಬಡಿದಾಡಿಕೊಂಡಿರುವುದನ್ನು ಬಿಟ್ಟು, ಪರ್ಯಾಯ ರಾಜಕೀಯ ವೇದಿಕೆಯನ್ನು ಅಖೀಲೇಶ್‌ ಸೃಷ್ಟಿಸಿಕೊಂಡರೆ, ಈಗಲ್ಲದಿದ್ದರೂ ಭವಿಷ್ಯದಲ್ಲಿ ಅನುಕೂಲವಿದೆ ಎನ್ನುವುದು ರಾಜಕೀಯ ಪಂಡಿತರ ಸಹಜ ಎಣಿಕೆ. ಅಪ್ಪ- ಮಗನ ಜಗಳದಲ್ಲಿ ಅಖೀಲೇಶ್‌ ಗೆದ್ದಿರಬಹುದು. ಮುಲಾಯಂ- ಶಿವಪಾಲ್‌ ಸೋತಿರಲೂಬಹುದು. ಆದರೆ ನೆಲಕಚ್ಚಿರುವುದು ಮಾತ್ರ ಸಮಾಜವಾದಿ ಪಕ್ಷ. 

Advertisement

ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್‌ ಯಾದವ್‌ ಯೌವನದ ದಿನಗಳಲ್ಲಿ ಕುಸ್ತಿಪಟುವಾಗಿದ್ದವರು. ರಾಜಕಾರಣಕ್ಕೆ ಬಂದ ಮೇಲೆ ಹೆಚ್ಚು ಕುಸ್ತಿ ಅಭ್ಯಾಸ ಮಾಡದಿದ್ದರೂ, ಕುಸ್ತಿಯ ರೀತಿ ಬಗೆಬಗೆಯ ಪಟ್ಟುಗಳನ್ನು ಹಾಕಿ ಎದುರಾಳಿಗಳನ್ನು, ರಾಜಕೀಯದಲ್ಲಿ ಪಳಗಿದವರನ್ನು ನೆಲಕ್ಕೆ ಕೆಡವಿದವರು. ರಾತ್ರಿ ಬೆಳಗಾಗುವುದರೊಳಗೆ ನಿರ್ಧಾರಗಳನ್ನು ಬದಲಿಸಿಕೊಂಡು ಆತ್ಮೀಯರ ವಿರೋಧ ಕಟ್ಟಿಕೊಂಡವರು.

ಅದೇ ವರ್ತನೆಯಿಂದ ವಿರೋಧಿಗಳನ್ನು ಆತ್ಮೀಯರನ್ನಾಗಿ ಮಾಡಿಕೊಂಡವರು. ಇಷ್ಟೆಲ್ಲಾ ಹಿನ್ನೆಲೆ ಹೊಂದಿರುವ, ಸರಿಸುಮಾರು ಐವತ್ತು ವರ್ಷಗಳ ಕಾಲ ರಾಜಕಾರಣದ ಆಳ-ಅಗಲ ಅರಿತಿರುವ ಮುಲಾಯಂ ಸಿಂಗ್‌ ಯಾದವ್‌ಗೆ ಅವರ ಪುತ್ರನೇ ಈಗ ರಾಜಕೀಯದಂಗಳದಲ್ಲಿ ಮಣ್ಣುಮುಕ್ಕಿಸಿದ್ದಾನೆ. ತಂದೆಗಿಂತ ಮಗ ಎತ್ತರವಾಗಿ ಬೆಳೆದಾಗ, ಗುರುವನ್ನು ಶಿಷ್ಯ ಮೀರಿಸಿದಾಗ ತಂದೆಯಾಗಲಿ, ಗುರುವಾಗಲಿ ಖುಷಿ ಪಡಬೇಕು. ಆದರೆ ಇಲ್ಲಿ ಹಾಗಾಗುತ್ತಿಲ್ಲ. ಮಗನನ್ನು ತುಳಿಯಲು ತಂದೆ, ಅದರಿಂದ ತಪ್ಪಿಸಿಕೊಳ್ಳಲು ಮಗ ತುಂಬಾ ಪ್ರಯಾಸ ಪಡುತ್ತಿದ್ದಾರೆ. ಮಕ್ಕಳು ರಾಜಕಾರಣದಲ್ಲಿ ಏಳಿಗೆ ಹೊಂದಲಿ, ಉನ್ನತ ಹುದ್ದೆ ಅಲಂಕರಿಸಲಿ ಎಂದು ಅಡ್ಡದಾರಿಗಳನ್ನು ತುಳಿಯುವ, ಮಕ್ಕಳಿಗೆ ಅಡ್ಡಲಾಗಿ ಬರುವ ಎದುರಾಳಿಗಳನ್ನು ರಾಜಕೀಯವಾಗಿ ಮುಗಿಸುವ ಅನೇಕಾನೇಕ ರಾಜಕಾರಣಿಗಳನ್ನು ಈ ದೇಶ ಕಂಡಿದೆ. ಆದರೆ ಮಗ ಮುಖ್ಯಮಂತ್ರಿಯಾದ ಕಾರಣಕ್ಕೆ ಬೇಸರಗೊಂಡ, ಮುಖ್ಯಮಂತ್ರಿಯಾದ ಮಗನನ್ನು ಕೆಳಕ್ಕಿಳಿಸುವ ಕನಸು ಕಂಡ ರಾಜಕಾರಣಿಗಳು ದೇಶದಲ್ಲಿ ಬಹುಶಃ ಇಬ್ಬರೇ. ಒಬ್ಬರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮತ್ತೂಬ್ಬರು ಮುಲಾಯಂ ಸಿಂಗ್‌.

2006ರಲ್ಲಿ ಕಾಂಗ್ರೆಸ್‌ ಜತೆಗಿನ ದೋಸ್ತಿ ಸರಕಾರವನ್ನು ಉರುಳಿಸಿ, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಎಚ್‌.ಡಿ. ಕುಮಾರಸ್ವಾಮಿ ಅಧಿಕಾರಕ್ಕೇರಿದಾಗ ದೇವೇಗೌಡರು ಮಗನ ವಿರುದ್ಧ ಸಿಟ್ಟಾಗಿದ್ದರು. ಪಕ್ಷದಿಂದಲೇ ಅಮಾನತುಗೊಳಿಸಿದ್ದರು. ಆದರೆ ಅದಕ್ಕೆ ಸಿದ್ಧಾಂತದ ಸ್ಪರ್ಶವಿತ್ತು. “ಜಾತ್ಯತೀತ’ ಜನತಾದಳ ಎಂಬ ಹೆಸರಿಟ್ಟುಕೊಂಡು “ಕೋಮುವಾದಿ’ ಎಂಬ ಟೀಕೆ ಎದುರಿಸುತ್ತಿರುವ ಬಿಜೆಪಿ ಜತೆ ಕೈಜೋಡಿಸಿದ್ದು ದೇವೇಗೌಡರಿಗೆ ಆಗ ಕೋಪ ತರಿಸಿದ್ದಿರಬಹುದು. ಆದರೆ ಉತ್ತರಪ್ರದೇಶದಲ್ಲಿ ಅಂತಹ ಕಾರಣ ಇಲ್ಲ. ಅಲ್ಲಿ ಇರುವುದು ಸಮಾಜವಾದಿ ಪಕ್ಷದ ಸ್ಪಷ್ಟ ಬಹುಮತವುಳ್ಳ ಸರಕಾರ. 

ಅದನ್ನು ಮುನ್ನಡೆಸುತ್ತಿರುವುದು ಮುಲಾಯಂ ಪುತ್ರ ಅಖೀಲೇಶ್‌ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಅದೇ ಮುಲಾಯಂ. ಈಗ ಪುತ್ರನನ್ನು ಕೆಳಕ್ಕೆ ಇಳಿಸಲು ಪ್ರಯತ್ನ ಮಾಡಿ, ಮುಖಭಂಗ ಅನುಭವಿಸಿರುವುದು ಕೂಡ ಅವರೇ. ಎನ್‌ಟಿಆರ್‌ ಮುನ್ನಡೆಸುತ್ತಿದ್ದ ತೆಲುಗುದೇಶಂ ಪಕ್ಷವನ್ನು ಅವರ ಅಳಿಯ ಚಂದ್ರಬಾಬು ನಾಯ್ಡುರಂತೆ ಅಖೀಲೇಶ್‌ “ಹೈಜಾಕ್‌’ ಮಾಡಿಲ್ಲ. ಅಧಿಕಾರಕ್ಕೇರಿದ ಬಳಿಕ ಭ್ರಷ್ಟ ಎಂದೂ ಅವರು ಕರೆಸಿಕೊಂಡಿಲ್ಲ. ಎಲ್ಲ ವರ್ಗದ ಜನಪ್ರಿಯತೆ ಗಳಿಸಿದ ನಾಯಕ ಅವರು. ಅಂತಹ ನಾಯಕನನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಮಾರ್ಗದರ್ಶನ ಮಾಡುವ ಅವಕಾಶ ಮುಲಾಯಂಗೆ ಇತ್ತು. ಆದರೆ ಅವರು ಏನೇನೋ ಮಾಡಿಕೊಂಡಿದ್ದಾರೆ.

Advertisement

ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷ ಶುರುವಾಗಿದ್ದು ನಿನ್ನೆ, ಮೊನ್ನೆಯಲ್ಲ. ಅಖೀಲೇಶ್‌ ಅವರು ಯಾವಾಗ ಉತ್ತರಪ್ರದೇಶ ಮುಖ್ಯಮಂತ್ರಿಯಾದರೋ ಅವತ್ತೇ ಅದಕ್ಕೆ ಅಧಿಕೃತ ಚಾಲನೆ ಸಿಕ್ಕಿತ್ತು. ಒಳಗೊಳಗೇ ಇದ್ದ ಆ ತುಮುಲ ಈಗ ಹೊರಕ್ಕೆ ಬಂದಿದೆ ಅಷ್ಟೆ. ಕಳೆದ ಅಕ್ಟೋಬರ್‌ನಲ್ಲಿ ಒಮ್ಮೆ ಭುಗಿಲೆದ್ದು, ಶಾಂತವಾಗಿದ್ದ ಸಂಘರ್ಷ ಈಗ ಅಖೀಲೇಶ್‌ ಉಚ್ಚಾಟನೆಯೊಂದಿಗೆ ತಾರಕಕ್ಕೇರಿದೆ. ಉಚ್ಚಾಟನೆ ಆದೇಶವನ್ನು ಇಪ್ಪತ್ನಾಲ್ಕೇ ತಾಸಿನಲ್ಲಿ ಹಿಂಪಡೆಯುವುದರೊಂದಿಗೆ “ಎಲ್ಲವೂ ಸರಿ ಹೋಗಿದೆ’ ಎಂದು ಸಮಾಜವಾದಿಗಳು ತಿಪ್ಪೆ ಸಾರಿಸುತ್ತಿದ್ದಾರೆ. ಕತ್ತಿಗಳನ್ನು ಪರಸ್ಪರ ಹೊರಗೆಳೆದ ಮೇಲೆ ಯುದ್ಧ ನಡೆಯಬೇಕು ಎಂದೇನಿಲ್ಲ. ಅದನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧರು ಈ ದೇಶದ ಜನರಲ್ಲ. ತಂದೆಯ ಉಪಟಳದಿಂದ ಅಖೀಲೇಶ್‌ ಹೈರಾಣಾದಂತೆ ಹೊರಜಗತ್ತಿಗೆ ತೋರುತ್ತಿರಬಹುದು. ಆದರೆ ನಿಜಕ್ಕೂ ಆ ಸ್ಥಾನದಲ್ಲಿರುವುದು ಮುಲಾಯಂ ಸಿಂಗ್‌ ಯಾದವ್‌. ಒಂದು ಕಡೆ ಪುತ್ರ, ಮತ್ತೂಂದು ಕಡೆ ಎರಡನೇ ಹೆಂಡತಿ, ಇನ್ನೊಂದು ಕಡೆ ಜೀವನ- ರಾಜಕೀಯ ಎರಡರಲ್ಲೂ ಜತೆಯಾಗಿಯೇ ಬೆಳೆಯುತ್ತಾ, ಹೆಗಲಿಗೆ ಹೆಗಲು ಕೊಟ್ಟು ಬಂದ ಸೋದರ ಶಿವಪಾಲ್‌ ಯಾದವ್‌, ಮಗದೊಂದು ಬದಿಯಲ್ಲಿ ಸಂಕಷ್ಟದ ದಿನಗಳಲ್ಲಿ ಪಾರು ಮಾಡಿದ್ದ ಅಮರ್‌ ಸಿಂಗ್‌. ಇವರೆಲ್ಲರ ನಡುವೆ ಸಿಕ್ಕಿ ಮುಲಾಯಂಗೆ ದಿಕ್ಕೇ ತೋಚದಂತಾಗಿದೆ. 

ಕಷ್ಟಕಾಲದಲ್ಲಿ ನೆರವಾದವರನ್ನು ಎಂತಹ ಸಂಕಷ್ಟವೇ ಬಂದರೂ ಕೈಬಿಡದ ನಾಯಕ ಮುಲಾಯಂ. ಹೀಗಾಗಿ ಅವರು ಯಾರನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಇದು ಅವರ ಇತ್ತೀಚಿನ ನಿರ್ಧಾರಗಳಲ್ಲೇ ಗೋಚರವಾಗುತ್ತಿದೆ. ಮುಲಾಯಂ ಅವರ ಮಗ ಆಗಿದ್ದ ಕಾರಣಕ್ಕೆ ಅಖೀಲೇಶ್‌ ಇನ್ನೂ ಮುಖ್ಯಮಂತ್ರಿ ಹುದ್ದೆಯಲ್ಲಿ, ಪಕ್ಷದಲ್ಲಿ ಇದ್ದಾರೆ. ಅದೇ ಬೇರೆ ಯಾರಾದರೂ ಆಗಿದ್ದರೆ, ಅವರು ಇಷ್ಟೊತ್ತಿಗೆ ಮುಲಾಯಂ ದಾಳಗಳೆದುರು ಧೂಳೀಪಟವಾಗಿಬಿಡುತ್ತಿದ್ದರು. 

ಪುತ್ರ ಪ್ರೇಮವನ್ನೂ ಮರೆತು ಅಖೀಲೇಶ್‌ ಅವರನ್ನು ಉಚ್ಚಾಟಿಸುವ ಧೈರ್ಯವನ್ನು ಮುಲಾಯಂ ತೆಗೆದುಕೊಂಡು, ಬಳಿಕ ವಾಪಸ್‌ ಪಡೆದಿದ್ದು ಏಕೆ? ಏಕೆಂದರೆ, ಉಚ್ಚಾಟನೆ ನಿರ್ಧಾರದ ಹಿಂದೆಯೇ ಅವರಿಗೆ ಅನಾಹುತದ ಎಚ್ಚರಿಕೆ ಗಂಟೆ ಬಾರಿಸತೊಡಗಿತು. ಅಭಿವೃದ್ಧಿ ಮಂತ್ರ ಜಪಿಸುತ್ತಾ, ಯುವಕರ ಮನ ಗೆದ್ದಿರುವ ಅಖೀಲೇಶ್‌ ಬೆನ್ನಿಗೆ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರು ನಿಂತರು. ವೃದ್ಧ ಮುಲಾಯಂ, ವರ್ಚಸ್ಸಿಲ್ಲದ ಶಿವಪಾಲ್‌ಗಿಂತ ರಾಜ್ಯವ್ಯಾಪಿ ಜನರ ಮನಗೆಲ್ಲುತ್ತಿರುವ ಅಖೀಲೇಶ್‌ ಅವರು ಶಾಸಕರಿಗೆ ಆಕರ್ಷಕವಾಗಿ ಕಂಡರು. ಅಖೀಲೇಶ್‌ ತಂಡಕ್ಕೆ ಬಹುಮತದ ಕೊರತೆ ಎದುರಾದರೆ ಕೈಜೋಡಿಸಲು ಕಾಂಗ್ರೆಸ್‌ ಹಾಗೂ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಸಿದ್ಧವಾದವು.  ಹೀಗಾಗಿ ಅಖೀಲೇಶ್‌ ಮುಖ್ಯಮಂತ್ರಿ ಹುದ್ದೆಗೆ ಯಾವುದೇ ತೊಂದರೆಯೂ ಕಾಣಲಿಲ್ಲ. ಮತ್ತೂಂದೆಡೆ, ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ವಲಸೆ ಹೋದರೆ, ಸಮಾಜವಾದಿ ಪಕ್ಷವೇ ಅಖೀಲೇಶ್‌ರದ್ದಾಗಿಬಿಡುತ್ತಿತ್ತು. 

ಪಕ್ಷದಿಂದ ಆಯ್ಕೆಯಾದ ಸಂಸದರಲ್ಲಿ ಮುಲಾಯಂ ಅವರನ್ನು ಬಿಟ್ಟು ಉಳಿದವರೆಲ್ಲಾ ಅಖೀಲೇಶ್‌ ಬೆನ್ನಿಗೆ ಇದ್ದದ್ದೂ ನಿದ್ರೆಗೆಡಿಸಿತು. ಇದರ ಅಪಾಯವನ್ನು ಮುಲಾಯಂ ಬೇಗನೆ ಅರಿತುಕೊಂಡರು. ಹೀಗಾಗಿ ಉಚ್ಚಾಟನೆ ಆದೇಶ ಹಿಂಪಡೆದುಕೊಂಡರು ಎಂದು ಹೇಳಲಾಗುತ್ತಿದೆ.

“ತಂದೆಯ ವಿರುದ್ಧ ಬಂಡಾಯ ಸಾರುವುದಿಲ್ಲ, ಹೊಸ ಪಕ್ಷ ಕಟ್ಟುವುದಿಲ್ಲ’ ಎಂಬ ಮಾತನ್ನು ಅಖೀಲೇಶ್‌ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಅಂತೆಯೇ, ಮೊನ್ನೆ ಪಕ್ಷದಿಂದ ಉಚ್ಚಾಟನೆ ಮಾಡಿದಾಗಲೂ ಮುಲಾಯಂ ವಿರುದ್ಧ ಒಂದೇ ಒಂದು ಮಾತನ್ನೂ ಅವರು ಆಡಿಲ್ಲ. ಆದರೆ ತಂದೆಯ ಗರಡಿಯಲ್ಲೇ ಕಲಿತ ಪಟ್ಟುಗಳನ್ನು ಬಳಸಿ, ತಂದೆಯನ್ನೇ ಮಣಿಸುವಲ್ಲಿ ಅವರು ಸಫ‌ಲರಾಗಿದ್ದಾರೆ. ಅಪ್ಪ- ಚಿಕ್ಕಪ್ಪ- ಮಲತಾಯಿ- ಅಮರ್‌ ಸಿಂಗ್‌ ಎಂಬ ಕೂಟದ ಜತೆ ಬಡಿದಾಡಿಕೊಂಡಿರುವುದನ್ನು ಬಿಟ್ಟು, ಪರ್ಯಾಯ ರಾಜಕೀಯ ವೇದಿಕೆಯನ್ನು ಅಖೀಲೇಶ್‌ ಸೃಷ್ಟಿಸಿಕೊಂಡರೆ, ಈಗಲ್ಲದಿದ್ದರೂ ಭವಿಷ್ಯದಲ್ಲಿ ಅನುಕೂಲವಿದೆ ಎನ್ನುವುದು ರಾಜಕೀಯ ಪಂಡಿತರ ಸಹಜ ಎಣಿಕೆ. ಆದರೆ ಅಖೀಲೇಶ್‌ ತಂತ್ರಗಾರಿಕೆ ಇದಕ್ಕಿಂತಲೂ ಸೊಗಸಾಗಿದೆ. ಸಮಾಜವಾದಿ ಪಕ್ಷದಲ್ಲೇ ಇದ್ದುಕೊಂಡು, ಎದುರಾಳಿಗಳನ್ನು ನಿಷ್ಕ್ರಿಯಗೊಳಿಸಿ ಸಂಪೂರ್ಣ ಅಧಿಕಾರ ಗಿಟ್ಟಿಸುವುದು. ತನ್ಮೂಲಕ ತಂದೆ ಕಟ್ಟಿದ ಪಕ್ಷವನ್ನು ಹೊಸ ಎತ್ತರಕ್ಕೆ ಒಯ್ಯುವುದು. ಆದರೆ ಅದು ಸುಲಭದ ಕೆಲಸವಲ್ಲ. ಅಪ್ಪ- ಮಗನ ಜಗಳದಲ್ಲಿ ಅಖೀಲೇಶ್‌ ಗೆದ್ದಿರಬಹುದು. ಮುಲಾಯಂ- ಶಿವಪಾಲ್‌ ಸೋತಿರಲೂಬಹುದು. ಆದರೆ ನೆಲಕಚ್ಚಿರುವುದು ಮಾತ್ರ ಸಮಾಜವಾದಿ ಪಕ್ಷ. 

ಉತ್ತರಪ್ರದೇಶದಲ್ಲಿರುವ ಮುಸಲ್ಮಾನರ ಸಂಖ್ಯೆ ಸುಮಾರು ಶೇ.20ರಷ್ಟು. ಅದು ಯಾವುದಾದರೂ ಪಕ್ಷಕ್ಕೆ ಕ್ರೋಢೀಕೃತವಾಗಿ ವರ್ಗವಾದರೆ, ಫ‌ಲಿತಾಂಶದ ದಿಕ್ಕನ್ನೇ ಬದಲಿಸಿಬಿಡಬಲ್ಲದು. ಸಮಾಜವಾದಿ ಪಕ್ಷಗಳ ಈ ಹಿಂದಿನ ಕಿತ್ತಾಟಗಳಿಂದ ಮುಸ್ಲಿಮರು ಬೇಸರಗೊಂಡು ಮಾಯಾವತಿ ಅವರ ಬಿಎಸ್ಪಿಯತ್ತ ವಾಲಿದ್ದರು ಎಂಬ ವರದಿಗಳು ಬಂದಿದ್ದವು. ಈಗ ಮತ್ತಷ್ಟು ಮುಸ್ಲಿಮರು ಸಮಾಜವಾದಿ ಪಕ್ಷ ತೊರೆಯಲು ಕಾರಣ ಸಿಕ್ಕಂತಾಗಿದೆ. ಸಮಾಜವಾದಿಗಳ ಮತ ಬ್ಯಾಂಕ್‌ ಆಗಿರುವ ಯಾದವರೂ ಅದೇ ಹಾದಿ ತುಳಿದರೆ, ಸಮಾಜವಾದಿ ಪಕ್ಷ ಈ ಬಾರಿ ನೆಲ ಕಚ್ಚುತ್ತದೆ ಎಂದು ಹೇಳಲು ಯಾವ ಭವಿಷ್ಯವಾಣಿಯೂ ಬೇಕಾಗಿಲ್ಲ. 

ಚಿವುಟು: ಸಮಾಜವಾದಿ ಪಕ್ಷದ ಸಮಸ್ಯೆಗೆ ಕಾರಣ ಏನು?
ಮುಲಾಯಂ ಸೈಕಲ್‌ ಕಾಲದಲ್ಲೇ ಇದ್ದಾರೆ. ಅಖೀಲೇಶ್‌ ಮೆಟ್ರೋ ರೈಲಿನ ಯುಗದಲ್ಲಿದ್ದಾರೆ!

– ಎಂ.ಎಲ್‌.ಲಕ್ಷ್ಮೀಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next