Advertisement

ಎಸ್‌ಪಿ + ಬಿಎಸ್‌ಪಿ –ಕಾಂಗ್ರೆಸ್‌

12:30 AM Jan 13, 2019 | |

ಲಕ್ನೋ/ಹೊಸದಿಲ್ಲಿ: ಒಂದು ಕಾಲದಲ್ಲಿ ಹಾವು- ಮುಂಗುಸಿಯಂತಿದ್ದ ಉತ್ತರಪ್ರದೇಶದ ಸಮಾಜ ವಾದಿ ಪಕ್ಷ(ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 2019ರ ಲೋಕಸಭೆ ಚುನಾವಣೆಗೆ ಪರಸ್ಪರ ಮೈತ್ರಿ ಘೋಷಿಸಿವೆ. ತಲಾ 38 ಸೀಟುಗಳನ್ನು ಹಂಚಿಕೊಂಡಿರುವುದಾಗಿ ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಶನಿವಾರ ಲಕ್ನೋದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

Advertisement

ಆದರೆ, ಲೋಕಸಭೆ ಚುನಾವಣೆಯಲ್ಲಿ ಮಹಾ ಮೈತ್ರಿಯ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಈ ಎರಡೂ ಪಕ್ಷಗಳು ಭಾರೀ ಆಘಾತ ನೀಡಿವೆ. ಕಾಂಗ್ರೆಸ್‌ ಅನ್ನು ಬದಿಗಿಟ್ಟು ಎಸ್‌ಪಿ-ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಹುಲ್‌ ಗಾಂಧಿ ನಾಯಕತ್ವವನ್ನು ಒಪ್ಪುವುದಿಲ್ಲ ಎಂಬು ದನ್ನು ಪರೋಕ್ಷವಾಗಿ ಹೇಳಿಕೊಂಡಿವೆ. ಆದರೆ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕ್ಷೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಠಿ ಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಅಖೀಲೇಶ್‌-ಮಾಯಾ ಹೇಳಿಕೊಂಡಿದ್ದಾರೆ. ಒಟ್ಟು 80 ಕ್ಷೇತ್ರಗಳ ಪೈಕಿ 2 ಸೀಟುಗಳನ್ನು ಇತರೆ ಮಿತ್ರಪಕ್ಷಗಳಿಗಾಗಿ ಮೀಸಲಿಟ್ಟಿದ್ದಾರೆ. ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಧಾನಿ ಮೋದಿಯವರನ್ನು ಎದುರಿಸಲಾಗದೇ ಈ ರೀತಿ ಮೈತ್ರಿಯ ಮೊರೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದೆ. ಕಾಂಗ್ರೆಸ್‌ ಮೌನಕ್ಕೆ ಶರಣಾಗಿದೆ.

ಗುರು-ಚೇಲಾಗಿನ್ನು ನಿದ್ದೆ ಬರಲ್ಲ: ಸುದ್ದಿಗೋಷ್ಠಿ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಬಿಎಸ್‌ಪಿ ನಾಯಕಿ ಮಾಯಾವತಿ ಅವರು, “ಗುರು ಮತ್ತು ಚೇಲಾ’ ಎಂದು ಕರೆದಿದ್ದಾರೆ. ನಮ್ಮ ಮೈತ್ರಿಯು ಗುರು ಮತ್ತು ಚೇಲಾನ ನಿದ್ದೆಯನ್ನು ಕಸಿಯಲಿದೆ ಎಂದಿದ್ದಾರೆ ಮಾಯಾ. 

ಕಾಂಗ್ರೆಸನ್ನು ಕೈಬಿಟ್ಟಿದ್ದೇಕೆ?: ಕಾಂಗ್ರೆಸ್‌ ಅನ್ನು ದೂರವಿಟ್ಟಿದ್ದೇಕೆ ಎಂಬ ಪ್ರಶ್ನೆಗೂ ಮಾಯಾವತಿ ಉತ್ತರಿಸಿದ್ದಾರೆ. ಕಾಂಗ್ರೆಸ್‌ನಿಂದ ನಮಗೆ ಯಾವ ಲಾಭವೂ ಆಗಿಲ್ಲ. ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವ್ಯತ್ಯಾಸವೇ ಇಲ್ಲ. ಎರಡೂ ಪಕ್ಷಗಳು ರಕ್ಷಣಾ ಒಪ್ಪಂದದಲ್ಲಿ ಹಗರಣಗಳನ್ನು ಮಾಡಿವೆ. ಕಾಂಗ್ರೆಸ್‌ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿತ್ತು, ಬಿಜೆಪಿ ಅಘೋಷಿತ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ ಎಂದಿದ್ದಾರೆ ಮಾಯಾ. 

ಮಾಯಾ ಪ್ರಧಾನಿ ಅಭ್ಯರ್ಥಿ?: “ಉತ್ತರಪ್ರದೇಶ ಈ ಹಿಂದೆ ಹಲವು ಪ್ರಧಾನಿಗಳನ್ನು ದೇಶಕ್ಕೆ ನೀಡಿದೆ. ಮುಂದಿನ ಪ್ರಧಾನಿಯೂ ಉತ್ತರಪ್ರದೇ ಶದವರೇ ಆಗುತ್ತಾರೆ’ ಎಂದು ಅಖೀಲೇಶ್‌ ಹೇಳಿದ್ದಾರೆ. ಈ ಮೂಲಕ ಮಾಯಾ ಅವರು ಪ್ರಧಾನಿ ಅಭ್ಯರ್ಥಿ ಆಗಲೂಬಹುದು ಎಂಬ ಸುಳಿವು ನೀಡಿದ್ದಾರೆ. “ಮಾಯಾವತಿ ಅವರಿಗೆ ಯಾರಾದರೂ ಏನಾದರೂ ಅವಮಾನ ಮಾಡಿದರೆ, ಅದು ನನಗೇ ಅವಮಾನ ಮಾಡಿದಂತೆ’ ಎಂದು ಹೇಳಿದ್ದಾರೆ. 

Advertisement

ಇಂದು ಕಾಂಗ್ರೆಸ್‌ ನಾಯಕರ ಸಭೆ: ಎಸ್‌ಪಿ- ಬಿಎಸ್‌ಪಿ ಮೈತ್ರಿ ಘೋಷಿಸುತ್ತಿದ್ದಂತೆ ಗೊಂದಲಕ್ಕೀಡಾಗಿರುವ ಕಾಂಗ್ರೆಸ್‌ ಲಕ್ನೋದಲ್ಲಿ ಸಭೆ ಸೇರಲು ನಿರ್ಧರಿಸಿದೆ. ರವಿವಾರ ಎಐಸಿಸಿ ಉಸ್ತುವಾರಿ  ಗುಲಾಂ ನಬಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಸಭೆ ಸೇರಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲಿದ್ದಾರೆ. ಉ.ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್‌ ನಿರ್ಧರಿಸುವ ಸಾಧ್ಯತೆ ಇದೆ.

ಒಬ್ಬರನ್ನು ಕಂಡರೆ ಮತ್ತೂಬ್ಬರಿಗೆ ಆಗದು ಎನ್ನುವವರು ಈಗ ಮಹಾಮೈತ್ರಿ ಮಾಡಿಕೊಳ್ಳಲು ಹೊರಟಿದ್ದಾರೆ. ಬಿಜೆಪಿ ವಿರುದ್ಧದ ವಿಪಕ್ಷಗಳ ಮೈತ್ರಿಯು ನಿರಂಕುಶ ಪ್ರಭುತ್ವ, ಭ್ರಷ್ಟಾಚಾರ ಮತ್ತು ರಾಜಕೀಯ ಅಸ್ಥಿರತೆಯನ್ನು ತರಲಿದೆ.
ಯೋಗಿ ಆದಿತ್ಯನಾಥ್‌  ಉತ್ತರಪ್ರದೇಶ ಸಿಎಂ

ಉತ್ತರಪ್ರದೇಶ ಲೋಕಸಭೆ
ಒಟ್ಟು ಕ್ಷೇತ್ರಗಳು     80
ಎಸ್‌ಪಿ    38
ಬಿಎಸ್‌ಪಿ    38
ಇತರ ಪಕ್ಷಗಳು    2
ಕಾಂಗ್ರೆಸ್‌ಗೆ     2

ಮೈತ್ರಿಯ ಪರಿಣಾಮಗಳೇನು?
ಬಿಜೆಪಿ ಮೇಲೆ
2014ರ ಲೋಕಸಭೆ ಚುನಾವಣೆ ವೇಳೆ ಉತ್ತರಪ್ರದೇಶದಲ್ಲಿ ಬಿಜೆಪಿ 71 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಈಗ ಎಸ್‌ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಗೆ ಭಾರೀ ಹೊಡೆತ ನೀಡುವ ಸಾಧ್ಯತೆ ಹೆಚ್ಚಿದೆ. 

1993ರ ಅಸೆಂಬ್ಲಿ ಚುನಾವಣೆಯಲ್ಲೂ ಎಸ್‌ಪಿ-ಬಿಎಸ್‌ಪಿ ಮೈತ್ರಿಯಿಂದ ಬಿಜೆಪಿ ಭಾರೀ ನಷ್ಟ ಅನುಭವಿಸಿತ್ತು. ಅದೇ ಫ‌ಲಿತಾಂಶ ಮರುಕಳಿಸಿದರೆ, ಈ ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚು  ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಬಿಜೆಪಿಯ ಇಡೀ ಲೆಕ್ಕಾಚಾರವೇ ತಲೆಕೆಳಗಾಗಬಹುದು.

ಮಹಾಮೈತ್ರಿ ಮೇಲೆ
 ಬಿಜೆಪಿ ವಿರುದ್ಧ ವಿಪಕ್ಷಗಳೆಲ್ಲ ಒಂದಾಗಿ ಮಹಾಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಬೇಕು ಎಂಬ ಕಾಂಗ್ರೆಸ್‌ ಕನಸು ಭಗ್ನವಾಗಿದೆ.

ಎಸ್‌ಪಿ -ಬಿಎಸ್‌ಪಿ ಮೈತ್ರಿ ಉತ್ತರಪ್ರದೇಶಕ್ಕಷ್ಟೇ ಸೀಮಿತವೇ ಎಂಬ ಬಗ್ಗೆ ಉಭಯ ನಾಯಕರೂ ಸ್ಪಷ್ಟವಾಗಿ ತಿಳಿಸಿಲ್ಲ. ದೇಶಾದ್ಯಂತ ಮೈತ್ರಿ ಮುಂದುವರಿದರೆ, ಅದರಿಂದ ಮಹಾಮೈತ್ರಿ ಮೇಲೆ ಹೊಡೆತ ಖಚಿತ.

ತೃಣಮೂಲ ಕಾಂಗ್ರೆಸ್‌ ಹೊರತುಪ ಡಿಸಿದರೆ ಮಹಾಮೈತ್ರಿಯಲ್ಲಿ ಇರಬೇಕಾದ ಅತಿದೊಡ್ಡ ಪಕ್ಷಗಳೆಂದರೆ ಎಸ್‌ಪಿ ಮತ್ತು ಬಿಎಸ್‌ಪಿ. ಈ ಎರಡೂ ಪಕ್ಷಗಳು ದೂರವಾದರೆ, ಮಹಾಮೈತ್ರಿಯೂ ಕನಸಾಗೇ ಉಳಿಯಲಿದೆ.

ಕಾಂಗ್ರೆಸ್‌ ಮೇಲೆ
ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಅಸ್ತಿತ್ವವನ್ನೇ ಹೊಂದಿಲ್ಲ. ಎಸ್‌ಪಿ-ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡರಷ್ಟೇ ಕಾಂಗ್ರೆಸ್‌ಗೆ ಉಳಿಗಾಲವಿತ್ತು. ಆದರೆ, ಈಗ ಎರಡೂ ಪಕ್ಷಗಳು “ಕೈ’ಗೆ ಗುಡ್‌ಬೈ ಹೇಳಿರುವ ಕಾರಣ, ಅನಿವಾರ್ಯವಾಗಿ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಬೇಕಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next