ಹಾನಗಲ್ಲ: ಭತ್ತದ ಕಣಜವೆಂದೆ ಹೆಸರಾಗಿದ್ದ ಹಾನಗಲ್ಲ ತಾಲೂಕು ಮಳೆಯ ಅನಿಶ್ಚಿತತೆಯಿಂದ ರೈತರು ಗೋವಿನಜೋಳ, ಸೋಯಾ ಬೆಳೆಯಲು ಮುಂದಾಗಿದ್ದು, ತಾಲೂಕಿನ 1620 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸೋಯಾ ಬಿತ್ತನೆ ಮಾಡಿದ್ದಾರೆ. ಆದರೆ ಕೆಲವು ರೈತರು ಬಿತ್ತಿದ ಬೀಜಗಳು ಮೊಳಕೆಯೊಡಯದೆ ಆತಂಕಕ್ಕೊಳಗಾಗಿದ್ದಾರೆ.
ತಾಲೂಕಿನ ಹಲವು ರೈತರು ಬಿತ್ತಿದ ನೀಜ ಮೊಳಕೆಯೊಡಯದೆ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಕೃಷಿ ಇಲಾಖೆ ಬಿತ್ತನೆ ಮಾಡಿದ ಪ್ರಮಾಣದ ಬೀಜಗಳನ್ನು ಮತ್ತೆ ರೈತರಿಗೆ ನೀಡಿದೆ. ಆದರೆ ಈಗ ಮತ್ತೆ ಸೋಯಾ ಅವರೆ ಬಿತ್ತಬೇಕೋ ಅಥವಾ ಪರ್ಯಾಯ ಬೆಳೆಯಬೇಕೊ ಎಂದು ರೈತರು ಗೊಂದಲಕ್ಕೊಳಗಾಗಿದ್ದಾರೆ. ದೂರು ಬಂದ ಕೃಷಿ ಭೂಮಿಗೆ ಅಧಿಕಾರಿಗಳು ಮತ್ತು ಹನುಮನಮಟ್ಟಿ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಅತಿವೃಷ್ಠಿಯಿಂದ ಭೂಮಿ ಗಟ್ಟಿಯಾಗಿರುವುದರಿಂದ ಮೊಳಕೆ ಒಡೆಯಲು ತಡವಾಗಿದೆ. ಅಲ್ಲದೆ ಆಳವಾಗಿ ಬಿತ್ತನೆ ಮಾಡಿರುವುದು ಒಂದು ಕಾರಣವಾಗಿದೆ. ಹೀಗಾಗಿ ಪರ್ಯಾಯ ಬೆಳೆಗೆ ಮುಂದಾಗುವಂತೆ ಸಲಹೆ ನೀಡಿದ್ದಾರೆ.
ತಾಲೂಕಿನ ರೈತ ಸಂಘಟನೆ, ತಹಶೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ನಾಲ್ಕು ದಿನದ ವರೆಗೆ ಕಾದು ನೋಡಿ, ಬೀಜ ಮೊಳಕೆಯೊಡೆಯದಿದ್ದರೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಪರಿಹಾರಕ್ಕೆ ಒತ್ತಾಯ: ಬಿತ್ತಿದ ಬೀಜ ಮೊಳಕೆ ಒಡೆಯದಿದ್ದರೆ ಮರು ಬಿತ್ತನೆಗೆ ಬೀಜ ನೀಡಿ ಇಲಾಖೆ ಕೈತೊಳೆದುಕೊಳ್ಳದೆ, ಬೀಜ ಪೂರೈಸಿದ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಹಾಗೂ ಬಿತ್ತನೆ ಮಾಡಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಒತ್ತಾಯಿಸಿದ್ದಾರೆ.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ತಹಶೀಲ್ದಾರ್ ಪಿ.ಎರ್ರಿಸ್ವಾಮಿ, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ರೈತರಾದ ಅಶೋಕ ಸಂಶಿ, ರವಿ ನೆರ್ಕಿಮನಿ ಮೊದಲಾದವರು ಇದ್ದರು.