Advertisement

ಸೌಜನ್ಯ ಕೇಸ್; ಕೊನೆಗೂ ಮೌನ ಮುರಿದ ಡಾ.ವೀರೇಂದ್ರ ಹೆಗ್ಗಡೆ

07:22 PM Jul 19, 2023 | Team Udayavani |

ಬೆಳ್ತಂಗಡಿ :ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತಾಗಿ ನಿರಂತರ ಆರೋಪಗಳ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆ ಅವರು ಕೊನೆಗೂ ಮೌನ ಮುರಿದಿದ್ದು,”ಅಮಾಯಕ ಹೆಣ್ಣುಮಗಳ ಹತ್ಯೆಯ ತನಿಖೆಗೆ ಮೊದಲು ಆಗ್ರಹಿಸಿದ್ದೇ ನಾನು, ಸಿಬಿಐಗೆ ಒಪ್ಪಿಸಲು ಮುಖ್ಯಮಂತ್ರಿಗಳಿಗೆ ಹೇಳಿದ್ದೇ ನಾನು” ಎಂದು ಹೇಳಿದ್ದಾರೆ.

Advertisement

ಶ್ರೀ ಕ್ಷೇತ್ರದ ನೌಕರರ ವಿಭಾಗದ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಸೌಜನ್ಯ ಪ್ರಕರಣವನ್ನು ಪ್ರಸ್ತಾಪ ಮಾಡಿ ,”ಆರೋಪಗಳಿಂದ ನಾವು ಧೈರ್ಯಗುಂದಿಲ್ಲ. ಕ್ಷೇತ್ರದ ಬೆಳವಣಿಗೆ ಸಹಿಸದಿರುವವರಿಂದ ದ್ವೇಷ ಸಾಧನೆಗಾಗಿ ಧರ್ಮಸ್ಥಳದ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದು ಬೇಸರ ಹೊರ ಹಾಕಿದ್ದಾರೆ.

”ಒಳ್ಳೆಯ ಕೆಲಸ ಮಾಡಿದರೆ ಎರಡು ರೀತಿಯ ಕತ್ತಿ ಇದ್ದ ಹಾಗೆ ಎಂದು ನಾನು ಯಾವಾಗಲೂ ಹೇಳುತ್ತೇನೆ, ಅದು ಎರಡೂ ಬದಿಯಿಂದ ಕೊಯ್ಯುತ್ತದೆ. ದ್ವೇಷ ಮತ್ತು ಪ್ರೀತಿ ಎರಡೂ ಇದೆ. ನಮಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ನಮ್ಮ ಮೇಲೆ ದ್ವೇಷ,ಅಸೂಹೆ ಉಂಟಾಗಿದೆ. ಕ್ಷೇತ್ರದ ಸಾನಿಧ್ಯ, ಸಂಪತ್ತು ಹೇಗೆ ಬಳಸುತ್ತೇವೆ ಅನ್ನುವ ವಿಚಾರ ಮುಖ್ಯವಾದದ್ದು, ನೀವೆಲ್ಲ ಧೈರ್ಯದಿಂದ ನಿಮ್ಮ ಕೆಲಸ ಮಾಡಿ” ಎಂದು ಸಲಹೆ ನೀಡಿದರು.

”ಕ್ಷೇತ್ರದ ಹೆಸರು ಯಾಕೆ ಎಳೆಯುತ್ತಾರೆ ಎನ್ನುವುದು ಗೊತ್ತಿಲ್ಲ. ಹೇಗಾದರೂ ಕ್ಷೇತ್ರವನ್ನು ಮಲೀನ ಮಾಡಬೇಕು ಎನ್ನುವುದೇ ಅವರ ಉದ್ದೇಶ. ಅನಾವಶ್ಯಕವಾಗಿ ಶತ್ರುತ್ವ ಬೆಳೆಸುತ್ತಿದ್ದಾರೆ.ಯಾಕೆ ಸುಮ್ಮನಿದ್ದೇನೆ ಎಂದರೆ ಸಂಭಾಷಣೆ ಆರಂಭವಾಗಬಾರದು. ದೊಡ್ಡವರ ಮುಂದೆ ಯಾಕೆ ನಿಲ್ಲುತ್ತಾರೆ. ಅವರಿಗೆ ಪ್ರಚಾರ ಬೇಕು. ನಮ್ಮ ಮೇಲೆ ಅಪಪ್ರಚಾರ ಆಗುತ್ತದೆ . ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯವಿಲ್ಲ” ಎಂದರು.

”ಕೆಲವರು ಬಂದು ನಿಮ್ಮ ಮೇಲೆ ಈ ರೀತಿ ಆರೋಪ ಬಂದಿದೆ ಅಲ್ಲ ಎಂದು ಕಣ್ಣೀರು ಹಾಕಿದರು.ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಸಂಕೋಚ ಇಲ್ಲ,ನನಗೆ ಭಯ ಇಲ್ಲ. ಧೈರ್ಯದಿಂದ ಇದ್ದೇನೆ. ಹೇಗೆ ಇದ್ದೆ ಹಾಗೆಯೇ ಇರುತ್ತೇನೆ. ವೈಯಕ್ತಿಕ ಸಂಭಾಷಣೆ ಸರಿಯಲ್ಲ. ನಮ್ಮ ಅಭಿಮಾನಿಗಳು ಏನೂ ಮಾಡಲು ಸಿದ್ಧರಿದ್ದಾರೆ. ನಾನು ಏನು ಮಾಡುವುದು ಬೇಡ ಎಂದು ಹೇಳಿದ್ದೇನೆ. ನಮಗೆ ಮೋಡದ ಹಾಗೆ ಅಡ್ಡ ಬಂದಿದೆ. ಪರದೆಯನ್ನು ಸರಿಸಿ ಮುಂದೆ ಹೋಗಬೇಕಾಗಿದೆ. ಕ್ಷೇತ್ರದ ಸಿಬಂದಿಗಳೆಲ್ಲ ಗಟ್ಟಿಯಾಗಿರಿ. ಯಾವ ವಿಭಾಗ ತೆಗೆದರೂ ಧರ್ಮಸ್ಥಳ ಗಟ್ಟಿಯಾಗಿದೆ. ಯಾವುದೇ ರೀತಿಯ ಅನ್ಯಾಯಕ್ಕೆ ಸಹಕಾರ ನೀಡುವುದಿಲ್ಲ. ಒಳ್ಳೆ ಕೆಲಸ ಮಾಡಿದರೆ ನನ್ನನ್ನು ಯಾಕೆ ದ್ವೇಷಿಸುತ್ತೀರಿ. ಇದನ್ನೆಲ್ಲ ನಿಲ್ಲಿಸಲೇ ಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next