Advertisement
ಮಾರ್ಚ್ ಪ್ರಾರಂಭದಲ್ಲೇ ಪೂರ್ವ ಮುಂಗಾರು ಮಳೆ ಅಗಮಿಸದ ಕಾರಣ ರೈತರು ಆತಂಕಕ್ಕೆ ಒಳಗಾಗಿದ್ದರು. ತಡವಾದರೂ ಕಡೆಗೆ ಏಪ್ರಿಲ್ ಎರಡನೇ ವಾರದಲ್ಲೇ ಪೂರ್ವ ಮುಂಗಾರು ಮಳೆ ಭರ್ಜರಿಯಾಗಿ ಪ್ರಾರಂಭವಾಗಿ ತಾಲೂಕಿನಾದ್ಯಂತ ಆಗಾಗ ಉತ್ತಮ ಮಳೆಯಾಗುತ್ತಿರುವುದರಿಂದ ಇಲ್ಲಿನ ರೈತರಲ್ಲಿ ಈ ಬಾರಿ ಉತ್ತಮ ಬೆಳೆಯ ಅಶಾಭಾವನೆ ಮೂಡಿಸಿದೆ.
Related Articles
Advertisement
67,717 ಸಾವಿರ ಹೆಕ್ಟೇರ್ ಗುರಿ: ಈ ವರ್ಷದ ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಕೃಷಿ ಅಧಿಕಾರಿಗಳು 67,717 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಸೇರಿದಂತೆ ವಿವಿಧ ದ್ವಿ-ದಳ ಧಾನ್ಯಗಳ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ ಬಿದ್ದಿರುವ ಮಳೆಗೆ 831 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.
ಗೊಬ್ಬರ ದಾಸ್ತಾನು: ರೈತರಿಗೆ ಬೇಕಾದ ರಸ ಗೊಬ್ಬರ ಅಗತ್ಯಕ್ಕಿಂತಲೂ ಹೆಚ್ಚಿನ ದಾಸ್ತನು ಇದ್ದು, ಹಂತ ಹಂತಕ್ಕೆ ಬೇಕಾದ ಕ್ರಿಮಿನಾಶಕ ಕೂಡ ಆಗ್ರೋ ಮಳಿಗೆಗಳಲ್ಲಿ ದಾಸ್ತನು ಇದೆ ಎಂದು ಇಲ್ಲಿನ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಮೂಲಗಳಿಂದ ತಿಳಿದು ಬಂದಿದೆ. ತಾಲೂಕಿನ ಭಾಗಶಃ ರೈತರು ಕೂಡ ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಮುಗಿಸಿದ್ದು, ಇಲ್ಲಿನ ರೈತರು ಈ ಬಾರಿ ಉತ್ತಮ ಮಳೆ ಫಲವತ್ತಾದ ಲಾಭದಾಯಕ ಬೆಳೆ ನಿರೀಕ್ಷೆಯಲ್ಲಿದ್ದಾರೆ.
ತಾಲೂಕಿನಲ್ಲಿ ಬಿತ್ತನೆ ಪ್ರಮಾಣ ಎಷ್ಟು?: ಎಚ್.ಡಿ. ಕೋಟೆ ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಹತ್ತಿ ಬೆಳೆ 500 ಹೆಕ್ಟೇರ್, ತಂಬಾಕು 5 ಸಾವಿರ ಹೆಕ್ಟೇರ್, ಮುಸುಕಿನ ಜೋಳ 3 ಸಾವಿರ ಹೆಕ್ಟೇರ್, ವಿವಿಧ ದ್ವಿ-ದಳ ಧಾನ್ಯಗಳಾದ ಅಲಸಂದೆ 27 ಹೆಕ್ಟೇರ್, ಇತರೆ ದ್ವಿ-ದಳ ಧಾನ್ಯ ಬೆಳೆಗಳಾದ ಹಸಿರು, ಉದ್ದು, ತೊಗರಿ, 12 ಹೆಕ್ಟೇರ್, ನೆಲಗಡಲೆ 50 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಮುಗಿದಿದೆ. ತಾಲೂಕಿನಲ್ಲಿ ಆಗಾಗ ಮಳೆ ಸುರಿಯುತ್ತಿದ್ದು, ರೈತರು ಈ ಬಾರಿ ಭರ್ಜರಿ ಮುಂಗಾರು ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
ಎರಡ್ಮೂರು ದಿನದಲ್ಲಿ ಉತ್ತಮ ಮಳೆ: ಈ ಬಾರಿ ಕಳೆದ ವರ್ಷಕ್ಕಿಂತ ಪೂರ್ವ ಮುಂಗಾರು ತಾಲೂಕಿನಲ್ಲಿ ಪ್ರಾರಂಭವಾಗಿಲ್ಲ. ಇದುವರೆಗೆ 96.01 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು, ಅದರೆ ಏ.29 ರ ಸೋಮವಾರದವರೆಗೆ 84 ಮಿ.ಮೀ. ಮಳೆಯಾಗಿದ್ದು, ಶೇ.13ರಷ್ಟು ಮಳೆ ಕೊರತೆ ಉಂಟಾಗಿದೆ. ತಾಲೂಕಿನ ರೈತರು ಕೂಡ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಇನ್ನು ಎರಡು ಮೂರು ದಿನದಲ್ಲಿ ಉತ್ತಮ ಮಳೆಯ ಮುನ್ಸೂಚನೆ ವರದಿಯಾಗಿದ್ದು, ಮುಂದಿನ ಒಂದು ವಾರದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಜಯರಾಮಯ್ಯ ತಿಳಿಸಿದ್ದಾರೆ.
* ಬಿ.ನಿಂಗಣ್ಣಕೋಟೆ