Advertisement
ಐದನೇ ರೈಲು ಯಾಕೆ ?ಪ್ರಸ್ತುತ ಮಂಗಳೂರಿನಿಂದ ತಿರುವನಂತಪುರಕ್ಕೆ ಪರಶುರಾಮ ಎಕ್ಸ್‌ಪ್ರೆಸ್, ಮಲಬಾರ್ ಎಕ್ಸ್‌ಪ್ರೆಸ್, ಮಾವೇಲಿ ಎಕ್ಸ್‌ಪ್ರೆಸ್, ಮಂಗಳೂರು- ತಿರುವನಂತಪುರ ಎಕ್ಸ್‌ಪ್ರೆಸ್ ನಿತ್ಯವೂ ಸಂಚರಿಸುತ್ತಿದ್ದು, ಮತ್ತೂಂದು ರೈಲನ್ನು ಅದೇ ಭಾಗಕ್ಕೆ ಆರಂಭಿಸುವ ಆವಶ್ಯಕತೆ ಇಲ್ಲ ಎಂಬುದು ಕರಾವಳಿಗರ ಅಭಿಪ್ರಾಯ. ಆ ಭಾಗಕ್ಕೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಹೊಸ ರೈಲು ಆರಂಭಿಸಲಾಗಿದೆ ಎಂಬುದು ಅಧಿಕಾರಿಯೊಬ್ಬರು ನೀಡುವ ವಿವರಣೆ.
ಹಳಿ ಕಾಮಗಾರಿ ನೆಪದಲ್ಲಿ 1994ರಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು – ಹುಬ್ಬಳ್ಳಿ – ಮೀರಜ್ ಮಾರ್ಗದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ಸನ್ನು ಮತ್ತೆ ಆರಂಭಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಇದರೊಂದಿಗೆ ಕಣ್ಣೂರು – ಮಂಗಳೂರು – ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿರುವ ರೈಲು ಹಾಗೂ ಕಾರವಾರ-ಮಂಗಳೂರು – ಬೆಂಗಳೂರು ರೈಲಿನಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಆ ಭಾಗಕ್ಕೆ ನೂತನ ರೈಲಿನ ಬೇಡಿಕೆ ಇದೆ. ಮಂಗಳೂರು – ಅಹಮದಾಬಾದ್, ಮಂಗಳೂರು – ರಾಮೇಶ್ವರ, ಮಂಗಳೂರು – ವಿಜಯಪುರ, ಮಂಗಳೂರಿನಿಂದ ಕನ್ಯಾಕುಮಾರಿ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ರೈಲು ಆರಂಭಿಸುವಂತೆ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ರೈಲ್ವೇ ಇಲಾಖೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಕೇವಲ ಕೇರಳದವರನ್ನು ತೃಪ್ತಿಪಡಿಸಲೇ ಇಲಾಖೆ ಯೋಚಿಸುತ್ತಿದೆ ಎನ್ನುತ್ತಾರೆ ಕರಾವಳಿಗರೊಬ್ಬರು. ಮಂಗಳೂರು ಅವಗಣನೆ?
ಮಂಗಳೂರು ರೈಲು ನಿಲ್ದಾಣ ಪಾಲ್ಗಾಟ್ ವಿಭಾಗಕ್ಕೊಳಪಟ್ಟಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕೇರಳ ಭಾಗಕ್ಕೆ ತೆರಳುವ ರೈಲುಗಳಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತಿದೆ. ಈ ಕೂಡಲೇ ಮಂಗಳೂರು ಪ್ರತ್ಯೇಕ ವಿಭಾಗ ರಚನೆ ಸಂಬಂಧ ಹೋರಾಟ ತೀವ್ರಗೊಳ್ಳದಿದ್ದರೆ ಮತ್ತಷ್ಟು ಕಳೆದುಕೊಳ್ಳಬೇಕಾದೀತು ಎನ್ನುತ್ತಾರೆ ಪ್ರಯಾಣಿಕರೊಬ್ಬರು.
Related Articles
ಮಂಗಳೂರು – ಬೆಂಗಳೂರು ಮಧ್ಯೆ ಹೆಚ್ಚು ಜನಪ್ರಿಯವಾಗಿರುವ ‘ಗೋಮಟೇಶ್ವರ ಎಕ್ಸ್‌ಪ್ರಸ್’ ರೈಲನ್ನು ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೆ ವಿಸ್ತರಿಸುವಂತೆ ಪ್ರಯಾಣಿಕರು ಸುಮಾರು ಒಂದು ವರ್ಷದಿಂದ ಮನವಿ ಮಾಡುತ್ತಿದ್ದಾರೆ. ಇಂಥದೊಂದು ಸಣ್ಣ ಬೇಡಿಕೆಗೂ ದಕ್ಷಿಣ ರೈಲ್ವೇ ಇಲಾಖೆಯು ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಕೊರತೆ ನೆಪಹೇಳಿ ಬೇಡಿಕೆಗೆ ಎಳ್ಳು – ನೀರು ಬಿಟ್ಟಿದೆ. ಯಾವ ಬೇಡಿಕೆಯನ್ನೂ ಈಡೇರಿಸುವ ಮನಸ್ಸೇ ಮಾಡುತ್ತಿಲ್ಲ ಎಂಬುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಟೀಕೆ.
Advertisement
ಟ್ವೀಟ್ ಚಳವಳಿ ಮಾಡಿಮಂಗಳೂರು ಪ್ರತ್ಯೇಕ ವಿಭಾಗ ರಚನೆಯಾಗದಿರುವುದು, ಕರಾವಳಿಗರ ಸಣ್ಣ ಸಣ್ಣ ಬೇಡಿಕೆಗಳನ್ನೂ ಈಡೇರಿಸದಿರುವುದು ಹಾಗೂ ಹೊಸ ರೈಲು ಸೇವೆ ಒದಗಿಸದೇ ಹಲವು ವರ್ಷಗಳಿಂದ ಸತಾಯಿಸುತ್ತಿರುವ ದಕ್ಷಿಣ ರೈಲ್ವೇ ಇಲಾಖೆಯ ತಾರತಮ್ಯ ಧೋರಣೆ ಖಂಡಿಸಿ ಕರಾವಳಿಗರು ಮಂಗಳೂರು ರೈಲ್ವೇ ಝೋನ್ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಪ್ರಧಾನಿ, ರೈಲ್ವೇ ಇಲಾಖೆಗೆ ಟ್ವೀಟ್ ಮಾಡಿ ಆಗ್ರಹಿಸಬೇಕಿದೆ. ಬನ್ನಿ ಇಂದೇ ಟ್ವೀಟ್ ಚಳವಳಿ ಆರಂಭಿಸೋಣ. ಪ್ರತ್ಯೇಕ ವಿಭಾಗ ರಚನೆ ಕೂಗು ಕೇಳಿಸುತ್ತಿಲ್ಲ
ಜೂ. 9ರಂದು ಆರಂಭವಾಗಲಿರುವ ಅಂತ್ಯೋದಯ ಎಕ್ಸ್‌ಪ್ರೆಸ್ ತಿರುವನಂತಪುರಕ್ಕೆ ಚಲಿಸಲಿರುವ ಐದನೇ ರೈಲು. ನಮ್ಮ ಯಾವುದೇ ಬೇಡಿಕೆಗಳಿಗೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಆದರೆ ಕೇರಳ ಭಾಗಕ್ಕೆ ಬೇಕಾದಷ್ಟು ರೈಲು ನೀಡಲಾಗುತ್ತದೆ. ಮಂಗಳೂರು ವಿಭಾಗವನ್ನು ಪ್ರತ್ಯೇಕ ವಿಭಾಗವನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ಮೈಸೂರು ವಿಭಾಗದೊಂದಿಗೆ ಸೇರಿಸಬೇಕು.
– ಅನಿಲ್ ಹೆಗ್ಡೆ, ತಾಂತ್ರಿಕ ಸಲಹೆಗಾರರು, ಪಶ್ಚಿಮ ಕರಾವಳಿ, ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಮಂಗಳೂರು — ಪ್ರಜ್ಞಾ ಶೆಟ್ಟಿ