Advertisement

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಾರ್ವಜನಿಕರಿಂದ ದೂರು: ಗೇಟು ತೆರವು

11:25 PM Jun 13, 2023 | Team Udayavani |

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಕ್ಷೇತ್ರದ ರಕ್ಷಣೆಗಾಗಿ ವ್ಯವಸ್ಥಾಪನ ಸಮಿತಿ ವರ್ಷದ ಹಿಂದೆ ಹಾಕಿದ್ದ ಗೇಟನ್ನು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರ ಉಪಸ್ಥಿತಿಯಲ್ಲಿ ಜೂ.13ರಂದು ತೆರವುಗೊಳಿಸಲಾಯಿತು.

Advertisement

ಸೌತಡ್ಕ ದೇಗುಲ ಬಯಲು ಆಲಯವಾಗಿರುವುದರಿಂದ ಹೊರಗೆ ಇರುವ ಗಂಟೆ ಸೇರಿದಂತೆ ಲಕ್ಷಾಂತರ ರೂ. ಬೆಲೆಬಾಳುವ ಸೊತ್ತುಗಳ, ಹುಂಡಿಯ ರಕ್ಷಣೆ ಸೇರಿದಂತೆ ದೇವಸ್ಥಾನದ ಸಮಗ್ರ ಹಿತದೃಷ್ಟಿಯಿಂದ ವ್ಯವಸ್ಥಾಪನ ಸಮಿತಿ ಚಿಂತಿಸಿ ದೇವಸ್ಥಾನದ ಹಿಂಭಾಗದ ಅನ್ನಛತ್ರದ ಬಳಿ ರಸ್ತೆಗೆ ಕಳೆದ ವರ್ಷ ಗೇಟು ಹಾಕಿ ಭದ್ರತೆ ಕಲ್ಪಿಸಿದ್ದರು.
ಆದರೆ ರಸ್ತೆಗೆ ದೇವಸ್ಥಾನದ ವತಿಯಿಂದ ಗೇಟು ಅಳವಡಿಸಿರುವುದನ್ನು ಶ್ರೀಕೃಷ್ಣ ಭಟ್‌ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿ, ದ.ಕ ಜಿಲ್ಲಾಧಿಕಾರಿಗಳು ಮತ್ತು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದರು. ದ.ಕ. ಜಿಲ್ಲಾಧಿಕಾರಿಗಳು ಸರಕಾರಿ ಸ್ಥಳದ ಮೂಲಕ ಸುಮಾರು 50 ವರ್ಷಗಳಿಂದ ಇದ್ದ ರಸ್ತೆಗೆ ಹಾಕಿದ ಗೇಟನ್ನು ಪರಿಶೀಲಿಸಿ, ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದ್ದರು.

ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್‌ ಸುರೇಶ್‌ ಕುಮಾರ್‌, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಹಾಗೂ ಗ್ರಾಮ ಕರಣಿಕರ ಉಪಸ್ಥಿತಿಯಲ್ಲಿ ರಸ್ತೆಗೆ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next