ಸೋಲ್ : ಕೋವಿಡ್ ವಿರುದ್ಧ ಗೆದ್ದೇಬಿಟ್ಟೆ ಎಂದು ಬೀಗುತ್ತಿದ್ದ ದಕ್ಷಿಣ ಕೊರಿಯ ಈಗ ಎರಡನೇ ಸುತ್ತಿನ ವೈರಸ್ ಹಾವಳಿಗೆ ತುತ್ತಾಗಿ ಪರಿತಪಿಸುತ್ತಿದೆ. ಒಂದೇ ದಿನ ಹೊಸತಾಗಿ 34 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ ಒಂದು ತಿಂಗಳ ಅವಧಿಯಲ್ಲಿ ಒಂದೇ ದಿನದಲ್ಲಿ ವರದಿಯಾದ ಅತಿ ಹೆಚ್ಚಿನ ಪ್ರಕರಣ.
ಕೋವಿಡ್ ಸೋಂಕಿತನೊಬ್ಬ ನೈಟ್‌ಕ್ಲಬ್‌ಗ ಭೇಟಿಕೊಟ್ಟ ಕಾರಣ ಹೊಸದಾಗಿ ಸೋಂಕು ಹರಡಿದೆ. ಇದು ಲಾಕ್‌ಡೌನ್ ಸಡಿಲಿಕೆಯ ಮುಂದೆ ಒಂದು ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ.
34 ಮಂದಿಯ ಪೈಕಿ 26 ಮಂದಿಗೆ ಸ್ಥಳೀಯವಾಗಿ ಸೋಂಕು ತಗಲಿಕೊಂಡಿದೆ. ಉಳಿದವರು ಹೊರಗಿನಿಂದ ಅಂಟಿಸಿಕೊಂಡು ಬಂದಿದ್ದಾರೆ. ಎ.9ರ ಬಳಿಕ ಒಂದೇ ದಿನ ಇಷ್ಟು ಸೋಂಕು ವರದಿಯಾಗಿರುವುದು ಇದೇ ಮೊದಲು. ಹೀಗಾಗಿ ದಕ್ಷಿಣ ಕೊರಿಯ ಆಡಳಿತ ಚಿಂತಾಕ್ರಾಂತವಾಗಿದೆ.
ಒಂದು ಸುತ್ತಿನ ಕೋವಿಡ್ ಹಾವಳಿಯನ್ನು ಯಶಸ್ವಿಯಾಗಿ ನಿಯಂತ್ರಿಸಿ ವಿಶ್ವವನ್ನು ಬೆರಗಾಗಿಸಿದ್ದ ದೇಶಕ್ಕೆ ಎರಡನೇ ಸುತ್ತಿನ ಹಾವಳಿ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ನೈಟ್‌ಕ್ಲಬ್‌ಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಆದರೆ ಈ ನೈಟ್‌ಕ್ಲಬ್‌ಗಳೇ ಕೋವಿಡ್ ಹಾಟ್‌ಸ್ಪಾಟ್‌ಗಳಾಗಿ ಬದಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರ ನೈಟ್‌ಕ್ಲಬ್‌ಗಳನ್ನು ಮುಚ್ಚುವ ಕುರಿತು ಚಿಂತಿಸುತ್ತಿದೆ. ಶನಿವಾರ ಒಂದು ದಿನದ ಮಟ್ಟಿಗೆ ಸೋಲ್‌ನ ನೈಟ್‌ಕ್ಲಬ್‌ಗಳನ್ನು ಮುಚ್ಚಲಾಗಿತ್ತು. 1500 ಮಂದಿ ನೈಟ್‌ಕ್ಲಬ್‌ಗಳಿಗೆ ಭೇಟಿ ನೀಡಿದ್ದು, ಹೀಗಾಗಿ ಕೋವಿಡ್ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿಯಿದೆ.
ವ್ಯಾಪಕವಾದ ಪರೀಕ್ಷೆ, ಸೋಂಕಿತರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ತೀವ್ರ ಶೋಧ, ಕೋವಿಡ್ ಪತ್ತೆ ಹಚ್ಚುವ ಆ್ಯಪ್ ಈ ಮುಂತಾದ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ಚೀನದ ಪಕ್ಕದಲ್ಲಿದ್ದರೂ ಮೊದಲ ಹಂತದಲ್ಲಿ ದಕ್ಷಿಣ ಕೊರಿಯ ಕೋವಿಡನ್ನು ನಿಯಂತ್ರಿಸುವಲ್ಲಿ ಸಫಲವಾಗಿತ್ತು ಹಾಗೂ ಇದಕ್ಕಾಗಿ ಭಾರೀ ಪ್ರಶಂಸೆಯನ್ನೂ ಗಿಟ್ಟಿಸಿತ್ತು. ವಿವಿಧ ದೇಶಗಳು ಕೊರಿಯ ಮಾದರಿಯನ್ನು ಅನುಸರಿಸುವ ಕುರಿತು ಮಾತನಾಡುತ್ತಿದ್ದವು. ಆದರೆ ಇದೀಗ ಎಲ್ಲ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗುವ ಲಕ್ಷಣಗಳು ಕಾಣಿಸುತ್ತಿವೆ.