ಡರ್ಬನ್: ಏಕದಿನ ವಿಶ್ವಕಪ್ ಬಳಿಕದ ಮೊದಲ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಟೀಂ ಇಂಡಿಯಾವನ್ನು ಎದುರಿಸಲಿದೆ. ಭಾರತ ತಂಡವು ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗಾಗಿ ಈಗಾಗಲೇ ದಕ್ಷಿಣ ಆಫ್ರಿಕಾಗೆ ತೆರಳಿದೆ. ಭಾನುವಾರದಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿ ಆರಂಭವಾಗಲಿದೆ.
ಮೊದಲು ಟಿ20 ಸರಣಿ ನಡೆಯಲಿದ್ದು, ಡಿಸೆಂಬರ್ 10ರಂದು ಡರ್ಬನ್ ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಇದಕ್ಕೆ ಸಿದ್ದತೆ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಕೂಟ ಆರಂಭಕ್ಕೂ ಮೊದಲೇ ಚಿಂತೆ ಕಾಡಿದೆ. ಅದು ಪ್ರಮುಖ ಬೌಲರ್ ಲುಂಗಿ ಎಂಗಿಡಿ ಗಾಯದ ಚಿಂತೆ.
ಎಂಗಿಡಿಗೆ ಎಡ ಪಾದದ ಉಳುಕು ಕಾಣಿಸಿಕೊಂಡಿದೆ. ಹೀಗಾಗಿ ಡರ್ಬನ್ ನಲ್ಲಿ ಅವರು ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಹರಿಣಗಳ ಪ್ರಮುಖ ಬೌಲರ್ ಆಗಿರುವ ಎಂಗಿಡಿ ಭಾರತ ವಿರುದ್ಧ ಮೊದಲ ಎರಡು ಟಿ20 ಪಂದ್ಯಗಳಿಗೆ ಆಯ್ಕೆಯಾಗಿದ್ದರು. ಬಳಿಕ ಭಾರತ ಎ ವಿರುದ್ಧದ ನಾಲ್ಕು ದಿನದ ಪಂದ್ಯವಾಡಲಿದ್ದಾರೆ.
ಎಂಗಿಡಿ ಬದಲು ಬ್ಯೂರಾನ್ ಹೆಂಡ್ರಿಕ್ಸ್ ತಂಡ ಸೇರಲಿದ್ದಾರೆ. ಇವರು ಕಳೆದರೆಡು ವರ್ಷಗಳಿಂದ ದಕ್ಷಿಣ ಆಫ್ರಿಕಾ ಪರ ಯಾವುದೇ ಟಿ20 ಪಂದ್ಯವಾಡಿಲ್ಲ. ಎಂಗಿಡಿ ಹೊರಬಿದ್ದ ಕಾರಣ ಹರಿಣಗಳ ವೇಗದ ದಾಳಿಯು ಅನುಭವದ ಕೊರತೆ ಎದುರಿಸಲಿದೆ. ವಿಶ್ರಾಂತಿ ಬಯಸಿರುವ ಕಗಿಸೊ ರಬಾಡ ಅವರನ್ನು ಟಿ20 ಸರಣೀಗೆ ಆಯ್ಕೆ ಮಾಡಲಾಗಿಲ್ಲ. ಆನ್ರಿಚ್ ನೋಕ್ಯಾ ಕೂಡಾ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ.
ದಕ್ಷಿಣ ಆಫ್ರಿಕಾ ಟಿ20 ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಗೆರಾಲ್ಡ್ ಕೊಯೆಟ್ಜಿ, ಡೊನೊವನ್ ಫೆರೆರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಬ್ಯೂರಾನ್ ಹೆಂಡ್ರಿಕ್ಸ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್.