Advertisement
ಕ್ರಿಕೆಟ್ ವಿಶ್ವಕಪ್‌ನಲ್ಲಿ ಒಂದಿಷ್ಟು ಅಲಿಖಿತ ನಿಯಮಗಳಿವೆ. ಅದರಲ್ಲಿ ಕೆಲವು “ನಿಯಮ’ಗಳು ಹಂತ ಹಂತವಾಗಿ ಮುರಿಯಲ್ಪಡುತ್ತ ಬಂದಿವೆ. ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್‌ಗೆ ಚಾಂಪಿಯನ್ ಪಟ್ಟ ಒಲಿಯದು ಎಂಬ ನಂಬಿಕೆ ದಟ್ಟವಾಗಿತ್ತು. ಇದು ಕಳೆದ ಸಲ ಸುಳ್ಳಾಯಿತು. ಹಾಗೆಯೇ ತವರಿನ ತಂಡ ಚಾಂಪಿಯನ್ ಆಗದು ಎಂಬ ನಂಬಿಕೆಯೂ ಜೋರಿತ್ತು. ಇದನ್ನು ಭಾರತ (2011), ಆಸ್ಟ್ರೇಲಿಯ (2015), ಇಂಗ್ಲೆಂಡ್ (2019) ಸುಳ್ಳಾಗಿಸಿವೆ. ನ್ಯೂಜಿಲ್ಯಾಂಡ್‌ಗೆ ಫೈನಲ್ ಪ್ರವೇಶ ಸಾಧ್ಯವಾಗದು ಎಂದು ವಿಶ್ವಕಪ್ ಸಾಬೀತುಪಡಿಸುತ್ತಲೇ ಬಂದಿತ್ತು. ಕಳೆದೆರಡು ಕೂಟಗಳಲ್ಲಿ ಸತತವಾಗಿ ಫೈನಲ್ ತಲುಪುವ ಮೂಲಕ ಕಿವೀಸ್ ಇದನ್ನು ಸುಳ್ಳಾಗಿಸಿತು. ಹಾಗಾದರೆ ದಕ್ಷಿಣ ಆಫ್ರಿಕಾಕ್ಕೆ ಸೆಮಿಫೈನಲ್ ಗಡಿ ದಾಟಲು ಸಾಧ್ಯವಾಗದೇಕೆ? ಇದು ಪ್ರಶ್ನೆ.
ಇನ್ನು ಆಸ್ಟ್ರೇಲಿಯ. 1983ರ ತನಕ ತಣ್ಣಗೆ ಉಳಿದು, 1987ರಿಂದ ಮೊದಲ್ಗೊಂಡು ಅತ್ಯಧಿಕ 5 ಸಲ ಚಾಂಪಿಯನ್ ಆದ ತಂಡ. ಒಮ್ಮೆ ನಾಕೌಟ್ ತಲುಪಿದ ಮೇಲೆ ಯಾರನ್ನೂ ಬಿಡುವುದಿಲ್ಲ ಎಂಬುದು ಕಾಂಗರೂಗಳ ಗರಿಮೆ. ಈವರೆಗಿನ 8 ಸೆಮಿಫೈನಲ್‌ಗಳಲ್ಲಿ ಅದು ಸೋತದ್ದು ಒಮ್ಮೆ ಮಾತ್ರ. ಅದು ಕಳೆದ ಕೂಟದ ಇಂಗ್ಲೆಂಡ್ ಎದುರಿನ ಉಪಾಂತ್ಯವಾಗಿತ್ತು. ಕಾಂಗರೂಗಳದ್ದು ನಿಜವಾದ ಚಾಂಪಿಯನ್ನರ ಆಟ. ಈ ಸಲದ ಪಂದ್ಯಾವಳಿಯನ್ನೇ ಗಮನಿಸಿ. ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ಅದು ತಿರುಗಿ ಬಿದ್ದ ರೀತಿ ಅಮೋಘ. ದಕ್ಷಿಣ ಆಫ್ರಿಕಾದಂತೆ ಆಸ್ಟ್ರೇಲಿಯ ಕೂಡ 7 ಲೀಗ್ ಪಂದ್ಯಗಳನ್ನು ಗೆದ್ದಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್ನುಗಳ ದೊಡ್ಡ ಸೋಲನುಭವಿಸಿದೆ. ಇದಕ್ಕೆ ಸೇಡು ತೀರಿಸಿಕೊಳ್ಳುವ ಕೆಲಸವೂ ಕಮಿನ್ಸ್ ಪಡೆಯಿಂದ ಆಗಬೇಕಿದೆ.
Related Articles
ದಕ್ಷಿಣ ಆಫ್ರಿಕಾ ಬಲಿಷ್ಠ ಬ್ಯಾಟಿಂಗ್ ಸರದಿ ಯನ್ನು ಹೊಂದಿರುವ ತಂಡ. ಅಗ್ರ ಆರರಲ್ಲಿ ನಾಲ್ವರು ಈಗಾಗಲೇ ಸೆಂಚುರಿ ಬಾರಿಸಿದ್ದಾರೆ. ಕ್ವಿಂಟನ್ ಡಿ ಕಾಕ್ ಅವರದಂತೂ ಜೀವಮಾನದ ಫಾರ್ಮ್. 4 ಶತಕ ಬಾರಿಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಈ ಕೂಟದಲ್ಲಿ ಬಾರಿಸಿದ ಒಟ್ಟು ರನ್ 591. ರಸ್ಸಿ ವಾನ್ ಡರ್ ಡುಸೆನ್ ನಂ.3ಕ್ಕೆ ಪಫೆìಕ್ಟ್ ಬ್ಯಾಟರ್. ಮಾರ್ಕ್‌ರಮ್, ಕ್ಲಾಸೆನ್, ಮಿಲ್ಲರ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ನಾಯಕ ಟೆಂಬ ಬವುಮ ಮಾತ್ರ ಲೆಕ್ಕದ ಭರ್ತಿಗೆಂಬಂತೆ ಇದ್ದಾರೆ. 7 ಪಂದ್ಯಗಳಿಂದ ಗಳಿಸಿದ್ದು 145 ರನ್ ಮಾತ್ರ. 2 ಪಂದ್ಯಗಳಲ್ಲಿ ಬವುಮ ಸ್ಥಾನ ಕೂಡ ಕಳೆದುಕೊಳ್ಳಬೇಕಾಯಿತು.
ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ನಡೆಸಿದ್ದೇ ಆದರೆ 350 ರನ್ ಗ್ಯಾರಂಟಿ. ಈ ಕೂಟದಲ್ಲಿ 6 ಸಲ ಮುನ್ನೂರರ ಗಡಿ ದಾಟಿದ ಹೆಗ್ಗಳಿಕೆ ಹರಿಣಗಳದ್ದು. ವಿಶ್ವಕಪ್ ಇತಿಹಾಸದ ಗರಿಷ್ಠ ರನ್ (5ಕ್ಕೆ 428) ಬಾರಿಸಿದ ದಾಖಲೆಗೂ ಭಾಜನವಾಗಿದೆ. ಹಾಗೆಯೇ ಭಾರತದ ವಿರುದ್ಧ ಜುಜುಬಿ 83 ರನ್ನಿಗೆ ಉದುರಿದ ಕಂಟಕವನ್ನೂ ಹೊಂದಿದೆ. ಇದು ದಾಖಲಾದದ್ದು “ಈಡನ್ ಗಾರ್ಡನ್ಸ್’ನಲ್ಲೇ ಎಂಬುದನ್ನು ಮರೆಯುವಂತಿಲ್ಲ!
ಜಾನ್ಸೆನ್, ಎನ್‌ಗಿಡಿ, ರಬಾಡ, ಮಹಾರಾಜ್, ಶಮಿÕ, ಲಿಝಾಡ್, ಫೆಲುಕ್ವಾಯೊ ಅವರೆಲ್ಲ ದಕ್ಷಿಣ ಆಫ್ರಿಕಾ ಬೌಲಿಂಗ್ ಸರದಿಯ ಕಟ್ಟಾಳುಗಳು.
Advertisement
ದಕ್ಷಿಣ ಆಫ್ರಿಕಾದ ದೊಡ್ಡ ದೌರ್ಬಲ್ಯ ವೆಂದರೆ ಚೇಸಿಂಗ್. 250ರಷ್ಟು ಗುರಿ ಮುಂದಿದ್ದರೂ ಅದು ಚಡಪಡಿಸುತ್ತದೆ. ಒಂದು ವೇಳೆ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ನಡೆಸಿ ಸಾಮಾನ್ಯ ಸವಾಲು ನೀಡಿದರೂ ಬವುಮ ಪಡೆ ನಿಭಾಯಿಸು ವುದು ಕಷ್ಟ!
ಪರಿಪೂರ್ಣ ತಂಡಆಸ್ಟ್ರೇಲಿಯ ಯಾವ ಸ್ಥಿತಿಯಲ್ಲೂ ಮೇಲೆದ್ದು ಬರಬಲ್ಲ ತಂಡ. ಫಸ್ಟ್ ಬ್ಯಾಟಿಂಗ್, ಚೇಸಿಂಗ್… ಯಾವುದೂ ಸಮಸ್ಯೆ ಅಲ್ಲ. ಅಫ್ಘಾನಿಸ್ಥಾನ ವಿರುದ್ಧದ ಸ್ಟೋರಿ ಇದಕ್ಕೊಂದು ತಾಜಾ ಉದಾಹರಣೆ. ವಾರ್ನರ್, ಹೆಡ್, ಮಾರ್ಷ್, ಲಬುಶೇನ್, ಸ್ಮಿತ್, ಮ್ಯಾಕ್ಸ್‌ವೆಲ್, ಸ್ಟೋಯಿನಿಸ್ ಅವರನ್ನೊಳಗೊಂಡ ಕಾಂಗರೂ ಬ್ಯಾಟಿಂಗ್ ಲೈನ್‌ಅಪ್ ಬಲಿಷ್ಠ ಹಾಗೂ ಆಕರ್ಷಕ. ವಾರ್ನರ್ ಬ್ಯಾಕ್ ಟು ಬ್ಯಾಕ್ ಸೆಂಚುರಿ, ಮ್ಯಾಕ್ಸ್‌ವೆಲ್ ಅವರ ಪ್ರಚಂಡ ದ್ವಿಶತಕ, ಹಿಂದಿನ ಪಂದ್ಯದಲ್ಲಿ ಮಾರ್ಷ್ ಬಾರಿಸಿದ ಅಜೇಯ 177, ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಹೆಡ್ ಸಿಡಿಸಿದ ಸೆಂಚುರಿಯೆಲ್ಲ ಆಸೀಸ್ ಬ್ಯಾಟಿಂಗ್ ಸರದಿಯ ಹೈಲೈಟ್ಸ್. ಬೌಲಿಂಗ್‌ನಲ್ಲಿ ಸ್ಪಿನ್ ಸ್ಪೆಷಲಿಸ್ಟ್ ಆ್ಯಡಂ ಝಂಪ ಟ್ರಂಪ್‌ಕಾರ್ಡ್ ಆಗಿದ್ದಾರೆ. ಆಸ್ಟ್ರೇಲಿಯ ಸಾಗಿ ಬಂದ ಹಾದಿ
ಎದುರಾಳಿ ಫಲಿತಾಂಶ
1. ಭಾರತ 7 ವಿಕೆಟ್ ಸೋಲು
2. ದಕ್ಷಿಣ ಆಫ್ರಿಕಾ 134 ರನ್ ಸೋಲು
3. ಶ್ರೀಲಂಕಾ 5 ವಿಕೆಟ್ ಜಯ
4. ಪಾಕಿಸ್ಥಾನ 62 ರನ್ ಜಯ
5. ನೆದರ್ಲೆಂಡ್ಸ್ 309 ರನ್ ಜಯ
6. ನ್ಯೂಜಿಲ್ಯಾಂಡ್ 5 ವಿಕೆಟ್ ಜಯ
7. ಇಂಗ್ಲೆಂಡ್ 33 ರನ್ ಜಯ
8. ಅಫ್ಘಾನಿಸ್ಥಾನ 3 ವಿಕೆಟ್ ಜಯ
9. ಬಾಂಗ್ಲಾದೇಶ 8 ವಿಕೆಟ್ ಜಯ ದಕ್ಷಿಣ ಆಫ್ರಿಕಾ ಸಾಗಿ ಬಂದ ಹಾದಿ
ಎದುರಾಳಿ ಫಲಿತಾಂಶ
1. ಶ್ರೀಲಂಕಾ 102 ರನ್ ಜಯ
2. ಆಸ್ಟ್ರೇಲಿಯ 134 ರನ್ ಜಯ
3. ನೆದರ್ಲೆಂಡ್ಸ್ 38 ರನ್ ಸೋಲು
4. ಇಂಗ್ಲೆಂಡ್ 229 ರನ್ ಜಯ
5. ಬಾಂಗ್ಲಾದೇಶ 149 ರನ್ ಜಯ
6. ಪಾಕಿಸ್ಥಾನ 1 ವಿಕೆಟ್ ಜಯ
7. ನ್ಯೂಜಿಲ್ಯಾಂಡ್ 190 ರನ್ ಜಯ
8. ಭಾರತ 243 ರನ್ ಸೋಲು
9. ಅಫ್ಘಾನಿಸ್ಥಾನ 5 ವಿಕೆಟ್ ಜಯ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ
ವರ್ಷ ಎದುರಾಳಿ ಸ್ಥಳ ಫಲಿತಾಂಶ
1975 ಇಂಗ್ಲೆಂಡ್ ಲೀಡ್ಸ್ 4 ವಿಕೆಟ್ ಜಯ
1987 ಪಾಕಿಸ್ಥಾನ ಲಾಹೋರ್ 18 ರನ್ ಜಯ
1996 ವೆಸ್ಟ್ ಇಂಡೀಸ್ ಮೊಹಾಲಿ 5 ರನ್ ಜಯ
1999 ದಕ್ಷಿಣ ಆಫ್ರಿಕಾ ಬರ್ಮಿಂಗ್‌ಹ್ಯಾಮ್ ಟೈ
2003 ಶ್ರೀಲಂಕಾ ಜೆಬೆರಾ 48 ರನ್ ಜಯ
2007 ದಕ್ಷಿಣ ಆಫ್ರಿಕಾ ಗ್ರಾಸ್ ಐಲೆಟ್ 7 ವಿಕೆಟ್ ಜಯ
2015 ಭಾರತ ಸಿಡ್ನಿ 95 ರನ್ ಜಯ
2019 ಇಂಗ್ಲೆಂಡ್ ಬರ್ಮಿಂಗ್‌ಹ್ಯಾಮ್ 8 ವಿಕೆಟ್ ಸೋಲು ವಿಶ್ವಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ
ವರ್ಷ ಎದುರಾಳಿ ಸ್ಥಳ ಫಲಿತಾಂಶ
1992 ಇಂಗ್ಲೆಂಡ್ ಸಿಡ್ನಿ 19 ರನ್ ಸೋಲು
1999 ಆಸ್ಟ್ರೇಲಿಯ ಬರ್ಮಿಂಗ್‌ಹ್ಯಾಮ್ ಟೈ
2007 ಆಸ್ಟ್ರೇಲಿಯ ಗ್ರಾಸ್ ಐಲೆಟ್ 7 ವಿಕೆಟ್ ಸೋಲು
2015 ನ್ಯೂಜಿಲ್ಯಾಂಡ್ ಆಕ್ಲೆಂಡ್ 4 ವಿಕೆಟ್ ಸೋಲು ವಿಶ್ವಕಪ್ ಮುಖಾಮುಖಿ
ಪಂದ್ಯ: 07
ಆಸ್ಟ್ರೇಲಿಯ ಜಯ: 03
ದಕ್ಷಿಣ ಆಫ್ರಿಕಾ ಜಯ: 03
ಟೈ: 01
ಲೀಗ್ ಫಲಿತಾಂಶ
ದ. ಆಫ್ರಿಕಾಕ್ಕೆ 134 ರನ್ ಜಯ