ಕೇಪ್ ಟೌನ್: ಆರಂಭಿಕ ಆಟಗಾರ ರೀಝ ಹೆಂಡ್ರಿಕ್ಸ್ ಮತ್ತು ಫಾ ಡು ಪ್ಲೆಸಿಸ್ ಅವರ ದಾಖಲೆ ಜತೆಯಾಟದಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಕೇಪ್‌ಟೌನ್‌ನಲ್ಲಿ ಸಾಗಿದ ಮೊದಲ ಟ್ವೆಂಟಿ20 ಪಂದ್ಯದಲ್ಲಿ ಪಾಕಿಸ್ಥಾನವನ್ನು 6 ರನ್ನುಗಳಿಂದ ರೋಚಕವಾಗಿ ಕೆಡಹಿದೆ.
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 192 ರನ್ನುಗಳ ಉತ್ತಮ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ತೀವ್ರ ಹೋರಾಟ ನೀಡಿದ ಪಾಕಿಸ್ಥಾನ ಕೊನೆ ಕ್ಷಣದಲ್ಲಿ ಎಡವಿ 9 ವಿಕೆಟಿಗೆ 186 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಡೇವಿಡ್ ಮಿಲ್ಲರ್ ಅವರ ಮಿಂಚಿನ ಫೀಲ್ಡಿಂಗ್‌ನಿಂದ ಪಾಕಿಸ್ಥಾನ ಕುಸಿಯುವಂತಾಯಿತು. ಅವರ ಎರಡು ನೇರ ಎಸೆತದ ರನೌಟ್‌ನಿಂದ ಪಾಕಿಸ್ಥಾನಕ್ಕೆ ಪ್ರಬಲ ಹೊಡೆತ ಬಿತ್ತು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಮಿಲ್ಲರ್ ಪಡೆದರು.
ಪ್ಲೆಸಿಸ್ ಮತ್ತು ಹೆಂಡ್ರಿಕ್ಸ್ ದ್ವಿತೀಯ ವಿಕೆಟಿಗೆ 74 ಎಸೆತಗಳಿಂದ 131 ರನ್ ಪೇರಿಸಿದ್ದು ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನ ಹೈಲೈಟ್ ಆಗಿತ್ತು. ದ್ವಿತೀಯ ವಿಕೆಟಿಗೆ ಇದು ತಂಡದ ದಾಖಲೆ ಜತೆಯಾಟ ಆಗಿದೆ. ಪ್ಲೆಸಿಸ್ 45 ಎಸೆತಗಳಿಂದ 78 ಮತ್ತು ಹೆಂಡ್ರಿಕ್ಸ್ 41 ಎಸೆತಗಳಿಂದ 74 ರನ್ ಹೊಡೆದರು. ಕೊನೆ ಹಂತದಲ್ಲಿ ದಕ್ಷಿಣ ಆಫ್ರಿಕಾ 28 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡ ಕಾರಣ 35 ರನ್ ಗಳಿಸಲಷ್ಟೇ ಶಕ್ತವಾಯಿತು. ಇಲ್ಲದಿದ್ದರೆ ತಂಡದ ಮೊತ್ತ 220ರ ಗಡಿ ದಾಟಬಹುದಿತ್ತು.
ದಕ್ಷಿಣ ಆಫ್ರಿಕಾದಂತೆ ಪಾಕಿಸ್ಥಾನವೂ ಸಮರ್ಥ ರೀತಿಯಲ್ಲಿ ಹೋರಾಟ ಸಂಘಟಿಸಿತ್ತು. ಆದರೆ ಆಗಾಗ್ಗೆ ವಿಕೆಟ್ ಕಳೆದುಕೊಂಡ ಕಾರಣ ತಂಡ ಒತ್ತಡಕ್ಕೆ ಬಿತ್ತು. ಅಂತಿಮವಾಗಿ 9 ವಿಕೆಟಿಗೆ 186 ರನ್ ಪೇರಿಸಿ ಶರಣಾಯಿತು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 6 ವಿಕೆಟಿಗೆ 192 (ಹೆಂಡ್ರಿಕ್ಸ್ 74, ಪ್ಲೆಸಿಸ್ 78, ಉಸ್ಮಾನ್ ಶಿನ್ವಾರಿ 32ಕ್ಕೆ 3); ಪಾಕಿಸ್ಥಾನ 9 ವಿಕೆಟಿಗೆ 186 (ಬಾಬರ್ ಅಜಂ 38, ಹುಸೇನ್ ತಲತ್ 40, ಶೋಯಿಬ್ ಮಲಿಕ್ 49, ಹೆಂಡ್ರಿಕ್ಸ್ 40ಕ್ಕೆ 2, ಕ್ರಿಸ್ ಮೊರಿಸ್ 39ಕ್ಕೆ 2, ಶಂಸಿ 33ಕ್ಕೆ 2).