ಶಾರ್ಜಾ: ಪ್ರಚಂಡ ಬ್ಯಾಟಿಂಗ್ ಹಾಗೂ ಕಾಗಿಸೊ ರಬಾಡ ಅವರ ಅಮೋಘ ಹ್ಯಾಟ್ರಿಕ್ ಪರಾಕ್ರಮದಿಂದ ಇಂಗ್ಲೆಂಡ್ ಎದುರಿನ ಅಂತಿಮ ಸೂಪರ್-12 ಪಂದ್ಯವನ್ನು 10 ರನ್ನುಗಳಿಂದ ಗೆದ್ದರೂ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ನಾಕೌಟ್ ರೇಸ್‌ನಿಂದ ಹೊರಗುಳಿದಿದೆ.
ಗ್ರೂಪ್ ಒಂದರಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿವೆ. ಮೂರೂ ತಂಡಗಳು ತಲಾ 8 ಅಂಕ ಹೊಂದಿದ್ದರೂ ದಕ್ಷಿಣ ಆಫ್ರಿಕಾ ರನ್‌ರೇಟ್‌ನಲ್ಲಿ ಹಿಂದುಳಿಯಿತು.
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಎರಡೇ ವಿಕೆಟಿಗೆ 189 ರನ್ ಬಾರಿಸಿದರೆ, ಇಂಗ್ಲೆಂಡ್ 8 ವಿಕೆಟಿಗೆ 179 ರನ್ ಗಳಿಸಿ ಮೊದಲ ಸೋಲುಂಡಿತು. ಕಾಗಿಸೊ ರಬಾಡ ಅಂತಿಮ ಓವರ್‌ನ ಮೊದಲ 3 ಎಸೆತಗಳಲ್ಲಿ ಕ್ರಮವಾಗಿ ವೋಕ್ಸ್, ಮಾರ್ಗನ್ ಮತ್ತು ಜೋರ್ಡನ್ ವಿಕೆಟ್ ಉಡಾಯಿಸಿದರು.
ದ. ಆಫ್ರಿಕಾ 131 ರನ್ನಿಗೆ ಇಂಗ್ಲೆಂಡನ್ನು ನಿಯಂತ್ರಿಸಿ ಗೆದ್ದರಷ್ಟೇ ನಾಕೌಟ್ ಪ್ರವೇಶಿಸುತ್ತಿತ್ತು. ದಿನದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಗೆದ್ದು ತನ್ನ ಅಂಕವನ್ನು 8ಕ್ಕೆ ಏರಿಸಿಕೊಂಡಿದ್ದರಿಂದ ಈ ಲೆಕ್ಕಾಚಾರ ಮಹತ್ವ ಪಡೆದಿತ್ತು. ರಸ್ಸಿ ವಾನ್ ಡರ್ ಡುಸೆನ್ ಅವರ ಪ್ರಚಂಡ ಬ್ಯಾಟಿಂಗ್ ದಕ್ಷಿಣ ಆಫ್ರಿಕಾ ಸರದಿಯ ವಿಶೇಷವಾಗಿತ್ತು. ಅವರು 94 ರನ್ ಬಾರಿಸಿ ಅಜೇಯರಾಗಿ ಉಳಿದರು.
ಇದು ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗನ ಸರ್ವಾಧಿಕ ವೈಯಕ್ತಿಕ ಗಳಿಕೆ. ವೆಸ್ಟ್ ಇಂಡೀಸ್ ಎದುರಿನ 2007ರ ಪಂದ್ಯದಲ್ಲಿ ಹರ್ಶಲ್ ಗಿಬ್ಸ್ 90 ರನ್ ಮಾಡಿದ ದಾಖಲೆ ಪತನಗೊಂಡಿತು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-2 ವಿಕೆಟಿಗೆ 189 (ಡುಸೆನ್ ಔಟಾಗದೆ 94, ಮಾರ್ಕ್‌ರಮ್ ಔಟಾಗದೆ 52, ಡಿ ಕಾಕ್ 34, ಅಲಿ 27ಕ್ಕೆ 1, ರಶೀದ್ 32ಕ್ಕೆ 1). ಇಂಗ್ಲೆಂಡ್-8 ವಿಕೆಟಿಗೆ 179 (ಅಲಿ 37, ಮಲಾನ್ 33, ಲಿವಿಂಗ್‌ಸ್ಟೋನ್ 28, ಬಟ್ಲರ್ 26, ರಬಾಡ 48ಕ್ಕೆ 3, ಶಮ್ಸಿ24ಕ್ಕೆ 2, ಪ್ರಿಟೋರಿಯಸ್ 30ಕ್ಕೆ 2).
ಪಂದ್ಯಶ್ರೇಷ್ಠ: ಡುಸೆನ್.