Advertisement
ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 246 ರನ್‌ಗೆ ಆಲೌಟಾಗಿತ್ತು. ಜವಾಬಿತ್ತ ಭಾರತ 8 ವಿಕೆಟಿಗೆ 584 ರನ್ ಪೇರಿಸಿ ಡಿಕ್ಲೇರ್ ಮಾಡಿತು. 2ಕ್ಕೆ 411 ರನ್ ಗಳಿಸಿದಲ್ಲಿಂದ ಭಾರತ ಬ್ಯಾಟಿಂಗ್ ಮುಂದುವರಿಸಿತ್ತು. ದ್ವಿತೀಯ ದಿನದ ಅಂತ್ಯಕ್ಕೆ 220 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕರ್ನಾಟಕದ ಮಾಯಾಂಕ್ ಅಗರ್ವಾಲ್ ಇದೇ ಮೊತ್ತಕ್ಕೆ ಔಟಾದರು. 3ನೇ ದಿನ ಬ್ಯಾಟಿಂಗಿನಲ್ಲಿ ಮಿಂಚಿದವರೆಂದರೆ ಹನುಮ ವಿಹಾರಿ (54) ಮತ್ತು ಕೀಪರ್ ಕೆ.ಎಸ್. ಭರತ್ (64). ಅಕ್ಷರ್ ಪಟೇಲ್ ಅಜೇಯ 33 ರನ್ ಮಾಡಿದರು.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ “ಎ’ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ತೀವ್ರ ಕುಸಿತಕ್ಕೊಳಗಾಯಿತು. ಮೊದಲ 3 ವಿಕೆಟ್‌ಗಳು 6 ರನ್ ಆಗುವಷ್ಟರಲ್ಲಿ ಉರುಳಿ ಹೋದವು. ದ್ವಿತೀಯ ಸರದಿಯ ಎಲ್ಲ 4 ವಿಕೆಟ್‌ಗಳು ಸಿರಾಜ್ ಪಾಲಾಗಿವೆ. ಮೊದಲ ಇನಿಂಗ್ಸ್‌ನಲ್ಲೂ ಅವರು 5 ವಿಕೆಟ್ ಹಾರಿಸಿದ್ದರು. ಜುಬೈರ್ ಹಮ್ಜಾ (ಬ್ಯಾಟಿಂಗ್ 46) ಮತ್ತು ಮುತ್ತುಸ್ವಾಮಿ (41) 86 ರನ್ ಜತೆಯಾಟ ನಿರ್ವಹಿಸಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ದಕ್ಷಿಣ ಆಫ್ರಿಕಾ “ಎ’ ಇನ್ನೂ 239 ರನ್ ಹಿನ್ನಡೆಯಲ್ಲಿದೆ. ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ “ಎ’-246 ಮತ್ತು 4 ವಿಕೆಟಿಗೆ 99 (ಹಮ್ಜಾ ಬ್ಯಾಟಿಂಗ್ 46, ಮುತ್ತುಸ್ವಾಮಿ 41, ಸಿರಾಜ್ 18ಕ್ಕೆ 4). ಭಾರತ “ಎ’-584/8 ಡಿಕ್ಲೇರ್ (ಅಗರ್ವಾಲ್ 220, ಪೃಥ್ವಿ ಶಾ 136, ಭರತ್ 64, ವಿಹಾರಿ 54, ಹೆಂಡ್ರಿಕ್ಸ್ 98ಕ್ಕೆ 3).