ಕೇರಳ: ಸ್ಟಾರ್ ಗಳು ತಮ್ಮ ಚಿತ್ರದ ಪ್ರಚಾರಕ್ಕಾಗಿ ಹತ್ತಾರು ಸಂದರ್ಶನಗಳನ್ನು ಕೊಡುತ್ತಾರೆ. ಕೆಲವೊಮ್ಮೆ ಅನಗತ್ಯ ಪ್ರಶ್ನೆಗಳಿಗೂ ಉತ್ತರಿಸುವ ಸಂದರ್ಭ ಬರುತ್ತದೆ. ಮಲಯಾಳಂ ಚಿತ್ರರಂಗದ ಖ್ಯಾತ ನಟನೊಬ್ಬ ಸಂದರ್ಶನ ನೀಡುವ ವೇಳೆ ಎಡವಟ್ಟನ್ನು ಮಾಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಘಟನೆ ನಡೆದಿದೆ.
ಮಲಯಾಳಂ ಚಿತ್ರರಂಗದ ಯುವನಟ ಶ್ರೀನಾಥ್ ಭಾಸಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯಕ್ಕೆ ಪ್ರತ್ಯೇಕ ಅಭಿಮಾನಿಗಳೂ ಇದ್ದಾರೆ. ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾಕ್ಕಾಗಿ ಸಂದರ್ಶನದಲ್ಲಿ ಅವರು ಭಾಗಿಯಾಗಿದ್ದರು.
ವರದಿಯ ಪ್ರಕಾರ ಪತ್ರಕರ್ತೆ, ಭಾಸಿ ಅವರಲ್ಲಿ ಚಿತ್ರದ ಟೈಟಲ್ ಹಾಗೂ ಅವರ ಸಹ ಕಲಾವಿದರಿಗೆ ಅವರ ವರ್ತನೆಗೆ ಅನುಗುಣವಾಗಿ ಅಂಕವನ್ನು ನೀಡಿ ಎಂದು ಪ್ರಶ್ನೆ ಕೇಳಿದ್ದಾರೆ. ಇದು ಕ್ಷಣ ಮಾತ್ರದಲ್ಲಿ ಭಾಸಿ ಅವರನ್ನು ಕೆರಳಿಸಿದ್ದು, ಅವರು ಹೊರ ಬರಲು ಹೊರಟಿದ್ದಾರೆ. ಸಿಟ್ಟಿನಲ್ಲಿ ಭಾಸಿ ಅಲ್ಲಿರುವ ಸಿಬ್ಬಂದಿಗಳಿಗೆ ಕ್ಯಾಮರಾ ಆಫ್ ಮಾಡಲು ಹೇಳಿದ್ದಾರೆ. ಪತ್ರಕರ್ತೆಯನ್ನು ಕೆಟ್ಟ ಮಾತುಗಳಿಂದ ನಿಂದಿಸಿದ್ದಾರೆ. ಅಲ್ಲಿದ್ದ ಮಹಿಳೆಯರಿಗೆ ಅವಮಾನಕರವಾಗುವ ಮಾತುಗಳನ್ನಾಡಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ, ಭಾಸಿ ಕ್ಷಮೆ ಕೇಳಿದ್ದಾರೆ. ನಾನು ಯಾರನ್ನೂ ನಿಂದಿಸಿಲ್ಲ, ನಾನೇನು ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟು ಪಾರಾಗಲು ಯತ್ನಿಸಿದ್ದಾರೆ.
ಆನ್ ಲೈನ್ ಮಾಧ್ಯಮವೊಂದರಲ್ಲಿ ಕೆಲಸ ಮಾಡುವ ಪತ್ರಕರ್ತೆ ಸಂದರ್ಶನವೊಂದರಲ್ಲಿ ನಟ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ರಕರ್ತೆ ಕೊಟ್ಟ ದೂರಿನ ಮೇಲೆ ಮರಡು ಪೊಲೀಸರು ನಟನನ್ನು ವಿಚಾರಣೆಗೆ ಕರೆದು, ಬಳಿಕ ಬಂಧಿಸಿದ್ದಾರೆ. “ಚಟ್ಟಂಬಿ” ಸಿನಿಮಾಕ್ಕಾಗಿ ಸಂದರ್ಶನ ನೀಡುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.