ಕೋಲ್ಕತ್ತಾ: ಕೋವಿಡ್ 19 ಪಾಸಿಟಿವ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು.
ಕೋವಿಡ್ 19 ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.27ರಂದು ಅವರಿಗೆ ಮೊನೊಕ್ಲೋನಲ್ ಆಂಟಿಬಾಡಿ ಕಾಕ್ಟೈಲ್ ಥೆರಪಿ ಚಿಕಿತ್ಸೆ ನೀಡಲಾಗಿತ್ತು. ಕೋವಿಡ್ ಸೋಂಕಿನ ಗಂಭೀರ ಪ್ರಕರಣಗಳಲ್ಲಿ ಈ ಚಿಕಿತ್ಸೆ ನೀಡಲಾಗುತ್ತದೆ.
ಇದೇ ವರ್ಷದ ಜನವರಿಯಲ್ಲಿ ಸೌರವ್ ಗಂಗೂಲಿ ಅವರು ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಗಂಗೂಲಿ ಅವರಿಗೆ ಹೃದಯಾಘಾತವಾಗಿತ್ತು ಎಂದು ವೈದ್ಯರು ನಂತರ ತಿಳಿಸಿದ್ದರು. ಬಳಿಕ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು. ಇದಾಗಿ ಕೆಲವು ವಾರಗಳ ಬಳಿಕ ಸೌರವ್ ಗಂಗೂಲಿ ಅವರು ಮತ್ತೊಮ್ಮೆ ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಾರಿಯೂ ಆ್ಯಂಜಿಯೋಪ್ಲಾಸ್ಟಿ ನಡೆಸಿ, ಎರಡು ಅಪಧಮನಿಗಳಿಗೆ ಎರಡು ಸ್ಟೆಂಟ್ ಗಳನ್ನು ಅಳವಡಿಸಲಾಗಿತ್ತು.
ಇದನ್ನೂ ಓದಿ:ಹೋಟೆಲ್ ಸಿಬ್ಬಂದಿ ಜೊತೆ ಡ್ಯಾನ್ಸ್ ಮಾಡಿದ ವಿರಾಟ್, ದ್ರಾವಿಡ್: ವಿಡಿಯೋ ವೈರಲ್
ಗುರುವಾರ (ಡಿ30) ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಜಯಿಸಿತ್ತು. ಈ ವೇಳೆ ಗಂಗೂಲಿ ತಂಡವನ್ನು ಅಭಿನಂದಿಸಿದ್ದರು. “ ಭಾರತ ತಂಡಕ್ಕೆ ಉತ್ತಮ ಜಯ. ಈ ಫಲಿತಾಂಶದಿಂದ ಅಚ್ಚರಿಯೇನು ಆಗಿಲ್ಲ. ಭಾರತವನ್ನು ಸೋಲಿಸಲು ದಕ್ಷಿಣ ಆಫ್ರಿಕಾ ತಂಡ ಕಷ್ಟಪಡಬೇಕಿದೆ” ಎಂದು ಹೇಳಿದ್ದರು.