ಮುಂಬೈ: ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಭಾರತವು ಸಿದ್ದತೆ ನಡೆಸುತ್ತಿದೆ. ಒಂದೆಡೆ ಬಿಸಿಸಿಐ ಕೂಟ ನಡೆಸಲು ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮೆಗಾ ಕೂಟಕ್ಕೆ ತಂಡ ಅಂತಿಮಗೊಳಿಸಲು ಪ್ರಯತ್ನಿಸುತ್ತಿದೆ. ಸೆಪ್ಟೆಂಬರ್ 5ರೊಳಗೆ ವಿಶ್ವಕಪ್ ಸಂಭಾವ್ಯ ತಂಡವನ್ನು ಆಯ್ಕೆ ಮಾಡಬೇಕಾಗಿದೆ.
ಇದೀಗ ಟೀಂ ಇಂಡಿಯಾದ ಮಾಜಿ ನಾಯಕ, ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ್ದಾರೆ. 15 ಸದಸ್ಯರ ತಂಡವನ್ನು ಗಂಗೂಲಿ ಆಯ್ಕೆ ಮಾಡಿದ್ದು, ಏಷ್ಯಾ ಕಪ್ ತಂಡಕ್ಕೆ ಹೋಲಿಕೆ ಮಾಡಿದರೆ ಇಬ್ಬರನ್ನು ಕೈಬಿಟ್ಟಿದ್ದಾರೆ.
ಏಷ್ಯಾಕಪ್ ಗೆ ಬಿಸಿಸಿಐ ಆಯ್ಕೆ ಮಾಡಿರುವ 17 ಸದಸ್ಯರ ತಂಡದಿಂದ ಸೌರವ್ ಗಂಗೂಲಿ ಅವರು ತಿಲಕ್ ವರ್ಮಾ ಮತ್ತು ಪ್ರಸಿಧ್ ಕೃಷ್ಣ ಅವರನ್ನು ಕೈಬಿಟ್ಟಿದ್ದಾರೆ. ತಿಲಕ್ ವರ್ಮಾ ಅವರು ಕಳೆದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಮತ್ತೊಂದೆಡೆ ಕನ್ನಡಿಗ ಪ್ರಸಿಧ್ ಕೃಷ್ಣ ಅವರು ವರ್ಷದ ಬಳಿಕ ಕಳೆದ ಐರ್ಲೆಂಡ್ ವಿರುದ್ಧದ ಸರಣಿಗೆ ಕಮ್ ಬ್ಯಾಕ್ ಮಾಡಿದ್ದರು.
ಇದನ್ನೂ ಓದಿ:Snake Island: ಇದು ಹಾವುಗಳ ಸಾಮ್ರಾಜ್ಯ… ಈ ಪ್ರದೇಶವನ್ನು ಆಳುವುದೇ ಹಾವುಗಳು
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಸೌರವ್ ಗಂಗೂಲಿ ಅವರು ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರಿಗೆ ಅವಕಾಶ ನೀಡಿಲ್ಲ. ಆದರೆ “ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಲ್ಲಿ ಒಬ್ಬರು ಫಿಟ್ ಇಲ್ಲವಾದರೆ ತಿಲಕ್ ವರ್ಮಾ ತಂಡಕ್ಕೆ ಬರಬಹುದು. ಒಂದು ವೇಳೆ ಯಾವುದೇ ಪೇಸರ್ ಫಿಟ್ ಇಲ್ಲದಿದ್ದರೆ ಅವರ ಬದಲಿಗೆ ಪ್ರಸಿದ್ಧ್ ಕೃಷ್ಣ ಮತ್ತು ಸ್ಪಿನ್ನರ್ ಗಳ ಬದಲಿಗೆ ಯುಜುವೇಂದ್ರ ಚಾಹಲ್ ಬರಬಹುದು” ಎಂದು ಗಂಗೂಲಿ ಹೇಳಿದರು.
ಗಂಗೂಲಿ ಆಯ್ಕೆ ಮಾಡಿದ ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿ.ಕೀ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ , ಶಾರ್ದೂಲ್ ಠಾಕೂರ್.