ಕೋಲ್ಕತಾ: ಟೀಮ್ ಇಂಡಿಯಾದ ಮಾಜಿ ನಾಯಕ, ದಾದಾ, ಬೆಂಗಾಲ್ ಟೈಗರ್ ಖ್ಯಾತಿಯ ಸೌರವ್ ಗಂಗೂಲಿ ಹೆಸರನ್ನು ಕೋಲ್ಕತಾದ ಮೆಟ್ರೋ ನಿಲ್ದಾಣವೊಂದಕ್ಕೆ ಇಡಬೇಕೆಂದು ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಸೌರವ್ ಗಂಗೂಲಿ ಶನಿವಾರವಷ್ಟೇ 45ರ ಹರೆಯಕ್ಕೆ ಕಾಲಿರಿಸಿದ್ದು, ಈ ಸಂದರ್ಭದಲ್ಲಿ “ಸೌರವ್ ಗಂಗೂಲಿ ಫ್ಯಾನ್ ಕ್ಲಬ್’ ಇಂಥದೊಂದು ಬೇಡಿಕೆಯನ್ನು ಮುಂದಿರಿಸಿದೆ. ಹುಟ್ಟುಹಬ್ಬದ ದಿನದಂದು ಮುಂಬಯಿಯಲ್ಲಿ ಕರ್ತವ್ಯ ನಿರತರಾಗಿದ್ದ ಗಂಗೂಲಿ ಕೋಲ್ಕತಾಕ್ಕೆ ಆಗಮಿಸಿರಲಿಲ್ಲ. ಆದರೆ ಅವರ ಬೆಹಾಲಾ ನಿವಾಸದಲ್ಲಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ನೆರೆದು ಗಂಗೂಲಿ ಆಗಮನವನ್ನು ಎದುರು ನೋಡುತ್ತಿದ್ದ ದೃಶ್ಯ ಕಂಡುಬಂತು.
ಮೂಲತಃ ಕೋಲ್ಕತಾದ ಬೆಹಾಲಾ ಪ್ರದೇಶದವರಾಗಿದ್ದು, ಇಲ್ಲಿ “ಬೆಹಾಲಾ ಚೌರಾಸ್ತ’ ಹೆಸರಿನ ನೂತನ ಮೆಟ್ರೋ ನಿಲ್ದಾಣವೊಂದು ತಲೆಯೆತ್ತಲಿದೆ. ಇದಕ್ಕೆ ಗಂಗೂಲಿ ಹೆಸರಿಡಬೇಕೆಂಬುದು ಅಭಿಮಾನಿಗಳ ಆಭಿಲಾಷೆ.
“ಸೌರವ್ ಗಂಗೂಲಿ ಭಾರತ ತಂಡದ ನಾಯಕರಾದಂದಿನಿಂದಲೂ ನಾವು ಅವರ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸುತ್ತ ಬಂದಿದ್ದೇವೆ. ಈ ಬಾರಿ ನಮ್ಮ ಕಡೆಯಿಂದ ವಿಶೇಷ ಹಾರೈಕೆಯೊಂದಿದೆ. ಅದೆಂದರೆ, ಬೆಹಾಲಾ ಚೌರಾಸ್ತ ಮೆಟ್ರೋ ನಿಲ್ದಾಣಕ್ಕೆ ಗಂಗೂಲಿ ಹೆಸರಿಡಬೇಕು. ಬಿಜೆಪಿ ಲೋಕಸಭಾ ಸದಸ್ಯ ಬಾಬುಲ್ ಸುಪ್ರಿಯೊ ಅವರಿಗೆ ನಾವು ಈಗಾಗಲೇ ಮನವಿ ಮಾಡಿದ್ದೇವೆ’ ಎಂಬುದಾಗಿ ಸೌರವ್ ಗಂಗೂಲಿ ಫ್ಯಾನ್ ಕ್ಲಬ್‌ನ ರತನ್ ಹಲ್ದಾರ್ ಹೇಳಿದ್ದಾರೆ.
ಪ್ರಸ್ತುತ ಸೌರವ್ ಗಂಗೂಲಿ ಬಂಗಾಲ ಕ್ರಿಕೆಟ್ ಮಂಡಳಿಯ ಅಧ್ಯಕ್ಷತೆಯ ಜತೆಗೆ ಬಿಸಿಸಿಐ ಸಲಹಾ ಸಮಿತಿಯ (ಸಿಎಸಿ) ಸದಸ್ಯರೂ ಆಗಿದ್ದಾರೆ.